

ದಕ್ಷಿಣ ಆಫ್ರಿಕಾ ಎ ವಿರುದ್ಧದ ಭಾರತ ಎ ಸರಣಿಗೆ ದೇಶೀಯ ಕ್ರಿಕೆಟ್‌ನ ದಿಗ್ಗಜ ಸರ್ಫರಾಜ್ ಖಾನ್ ಆಯ್ಕೆಯಾಗಿಲ್ಲ. ಕ್ಯಾಂಟರ್ಬರಿಯಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ 92 ರನ್ ಗಳಿಸಿದ್ದ ಅವರು, ಗಾಯದ ಸಮಸ್ಯೆಯಿಂದಾಗಿ ಆಟದಿಂದ ಹೊರಗುಳಿದಿದ್ದರು. ಈ ತಿಂಗಳ ಆರಂಭದಲ್ಲಿ ರಣಜಿ ಟ್ರೋಫಿಯಲ್ಲಿ ಮುಂಬೈ ಪರ ಅರ್ಧಶತಕ ಗಳಿಸುವ ಮೂಲಕ ಅವರು ತಮ್ಮ ಫಾರ್ಮ್‌ಗೆ ಮರಳಿದರು. ಆದರೂ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆದಾರರು ಅವರನ್ನು ಭಾರತ ಎ ತಂಡಕ್ಕೆ ಆಯ್ಕೆ ಮಾಡಿಲ್ಲ. ಹೀಗಾಗಿ, ಸಾಕಷ್ಟು ಚರ್ಚೆಗಳು ಆಗುತ್ತಿದ್ದು, ಸರ್ಫರಾಜ್ ಅವರನ್ನು ಕೈಬಿಡಲು ಕಾರಣವೇನು ಎಂದು ಬಿಸಿಸಿಐ ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ.
ಭಾರತ ಎ ಮತ್ತು ದಕ್ಷಿಣ ಆಫ್ರಿಕಾ ಎ ನಡುವಿನ ಎರಡು ಪಂದ್ಯಗಳಿಗೆ ಬಿಸಿಸಿಐ ತಂಡಗಳನ್ನು ಘೋಷಿಸಿದ ನಂತರ ಪಕ್ಷಪಾತದ ಆರೋಪಗಳು ಕೇಳಿಬಂದಿವೆ. ಗಾಯದಿಂದ ಫಿಟ್ ಆಗಿರುವ ರಿಷಭ್ ಪಂತ್ ಅವರನ್ನು ತಂಡದ ನಾಯಕನನ್ನಾಗಿ ನೇಮಿಸಿತು. ಆದರೆ, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಕಳೆದ ಐದು ವರ್ಷಗಳಿಂದ 100 ಕ್ಕಿಂತ ಹೆಚ್ಚು ಸರಾಸರಿ ಹೊಂದಿರುವ ಸರ್ಫರಾಜ್‌ಗೆ ಸ್ಥಾನ ಸಿಗಲಿಲ್ಲ. ಇದರಿಂದ ಅಭಿಮಾನಿಗಳು ಮತ್ತು ತಜ್ಞರಲ್ಲಿ ಸಾಕಷ್ಟು ಚರ್ಚೆಗಳು ನಡೆದವು.
ಸರ್ಫರಾಜ್ ಅವರನ್ನು ತಂಡಕ್ಕೆ ಆಯ್ಕೆ ಮಾಡದಿರುವುದು ಅವರ ಪ್ರದರ್ಶನ ಕೊರತೆ ಅಥವಾ ಪಕ್ಷಪಾತ ಕಾರಣವಲ್ಲ, ಬದಲಿಗೆ ಫಿಟ್ನೆಸ್ ಮತ್ತು ಫಾರ್ಮ್ ಕಾರಣ ಎಂದು ಬಿಸಿಸಿಐ ಮೂಲವೊಂದು NDTV ಗೆ ತಿಳಿಸಿದೆ. 'ಸರ್ಫರಾಜ್ ಕ್ವಾಡ್ರೈಸ್ಪ್ಸ್ ಗಾಯದಿಂದ ಹೊರಗುಳಿದಿದ್ದರು. ಅವರು ಇತ್ತೀಚೆಗೆ ತಂಡಕ್ಕೆ ಮರಳಿದರು ಮತ್ತು ರಣಜಿ ಟ್ರೋಫಿಯ ಮೊದಲ ಸುತ್ತನ್ನು ಆಡಿದರು. ಇದು ಅವರು ದೀರ್ಘಕಾಲದಿಂದ ಆಡಿದ ಏಕೈಕ ಸ್ಪರ್ಧಾತ್ಮಕ ಕ್ರಿಕೆಟ್. ಆಯ್ಕೆದಾರರು ಅವರನ್ನು ಭಾರತ A ತಂಡಕ್ಕೆ ಆಯ್ಕೆ ಮಾಡುವ ಮುನ್ನ ಸದ್ಯ ನಡೆಯುತ್ತಿರುವ ರಣಜಿ ಆವೃತ್ತಿಯಲ್ಲಿ ಅವರ ಫಾರ್ಮ್ ಅನ್ನು ನಿರ್ಣಯಿಸುತ್ತಾರೆ. ಆಶಾದಾಯಕವಾಗಿ, ಅವರಿಗೆ ಶೀಘ್ರದಲ್ಲೇ ಅವಕಾಶಗಳು ಸಿಗುತ್ತವೆ' ಎಂದು ಮೂಲಗಳು ತಿಳಿಸಿವೆ.
ಸದ್ಯಕ್ಕೆ ಸರ್ಫರಾಜ್ ಖಾನ್ ತಂಡದಿಂದ ದೂರ ಉಳಿದಿದ್ದಾರೆ. ಆಯ್ಕೆದಾರರು ಮತ್ತು ಮಾಜಿ ಆಟಗಾರರು ಇಬ್ಬರೂ ಅವರ ಪ್ರತಿಭೆಯನ್ನು ಗುರುತಿಸುತ್ತಿರುವುದರಿಂದ, ಅವರು ಮತ್ತೆ ಅಂತರರಾಷ್ಟ್ರೀಯ ಕ್ರಿಕೆಟ್ ಮರಳಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು.
ಸುದ್ದಿಸಂಸ್ಥೆ ಪಿಟಿಐ ವರದಿ ಪ್ರಕಾರ, ಸರ್ಫರಾಜ್ ಅನುಪಸ್ಥಿತಿಗೆ ರಿಷಭ್ ಪಂತ್ ಗಾಯದಿಂದ ಚೇತರಿಸಿಕೊಂಡು ಮರಳಿರುವುದೇ ಕಾರಣ ಎಂದು ಹೇಳಲಾಗಿದೆ. ಪಂತ್‌ಗೆ ಭಾರತ ಎ ತಂಡದಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಸ್ಥಾನ ನೀಡಿರುವುದರಿಂದ, ಸರ್ಫರಾಜ್‌ಗೆ ಸ್ಥಾನವಿಲ್ಲದಂತಾಗಿದೆ. ವಾಸ್ತವವಾಗಿ, ಸರ್ಫರಾಜ್ ರಾಷ್ಟ್ರೀಯ ತಂಡಕ್ಕೆ ಮರಳಬೇಕಾದರೆ ರಣಜಿ ಟ್ರೋಫಿಯಲ್ಲಿ ಮುಂಬೈ ತಂಡದಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಡ್ತಿ ಪಡೆಯಬೇಕೆಂದು ಸೂಚಿಸಲಾಗಿದೆ ಎಂದು ವರದಿಯಾಗಿದೆ.
ಸದ್ಯ, ಭಾರತೀಯ ತಂಡದಲ್ಲಿರುವ ಏಕೈಕ ಮುಕ್ತ ಸ್ಥಾನವೆಂದರೆ ನಂ. 3, ಅಲ್ಲಿ ಬಿ ಸಾಯಿ ಸುದರ್ಶನ್ ಇನ್ನೂ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಆಗಿಲ್ಲ.
Advertisement