
'ಹಿಟ್‌ಮ್ಯಾನ್' ರೋಹಿತ್ ಶರ್ಮಾ ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಕ್ರಿಕೆಟ್‌ನಲ್ಲಿ 1,000 ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಗುರುವಾರ ಅಡಿಲೇಡ್ ಓವಲ್‌ನಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಈ ಮೈಲಿಗಲ್ಲು ತಲುಪಿದ್ದಾರೆ. ಇದೀಗ, ವಿರಾಟ್ ಕೊಹ್ಲಿ, ಪಟ್ಟಿಯಲ್ಲಿ 802 ರನ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ ಉತ್ತಮವಾಗಿ ಆಡುತ್ತಾರೆಂಬುದು ಸಾರ್ವಜನಿಕವಾಗಿ ಚರ್ಚೆಯಲ್ಲಿದ್ದರೂ, ಕಾಂಗರೂಗಳ ವಿರುದ್ಧ ರೋಹಿತ್ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಭಾರತದ ಆರಂಭಿಕ ಆಟಗಾರ ಆಸ್ಟ್ರೇಲಿಯಾ ವಿರುದ್ಧ 55ಕ್ಕಿಂತ ಹೆಚ್ಚು ಸರಾಸರಿಯನ್ನು ಹೊಂದಿದ್ದಾರೆ, ಅವರ ಅತ್ಯುತ್ತಮ ಸ್ಕೋರ್ 171 ಆಗಿದೆ.
ಪರ್ತ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ 8 ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ಔಟ್ ಆಗಿದ್ದ ವಿರಾಟ್ ಕೊಹ್ಲಿ, ಅಡಿಲೇಡ್‌ನಲ್ಲಿನ ಎರಡನೇ ಏಕದಿನ ಪಂದ್ಯದಲ್ಲಿಯೂ ಡಕೌಟ್ ಆಗುವ ಮೂಲಕ ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿದರು. ಆದರೆ, ರೋಹಿತ್ ಭಾರತಕ್ಕೆ ಆಸರೆಯಾದರು ಮತ್ತು 97 ಎಸೆತಗಳಲ್ಲಿ 73 ರನ್ ಗಳಿಸುವ ಮೂಲಕ ಉತ್ತಮ ಆರಂಭ ನೀಡಿದರು.
ಭಾರತ vs ಆಸ್ಟ್ರೇಲಿಯಾ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್‌ಗಳು (ಆಸ್ಟ್ರೇಲಿಯಾದಲ್ಲಿ):
ರೋಹಿತ್ ಶರ್ಮಾ (ಭಾರತ): 21 ಪಂದ್ಯಗಳಿಂದ 1071 ರನ್‌ಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 4 ಶತಕಗಳು ಮತ್ತು 2 ಅರ್ಧಶತಕಗಳು ಸೇರಿದಂತೆ 55.77ರ ಸರಾಸರಿ ಹೊಂದಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ 171 ಆಗಿದೆ. 76 ಬೌಂಡರಿಗಳು ಮತ್ತು 29 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ.
ವಿರಾಟ್ ಕೊಹ್ಲಿ (ಭಾರತ): 20 ಪಂದ್ಯಗಳಲ್ಲಿ 44.55 ಸರಾಸರಿಯಲ್ಲಿ 802 ರನ್‌ಗಳನ್ನು ಗಳಿಸಿದ್ದಾರೆ. 3 ಶತಕಗಳು ಮತ್ತು 4 ಅರ್ಧಶತಕಗಳೊಂದಿಗೆ ಅವರ ಅತ್ಯುತ್ತಮ ಸ್ಕೋರ್ 117 ಆಗಿದೆ. 60 ಬೌಂಡರಿಗಳು ಮತ್ತು 9 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
ಸಚಿನ್ ತೆಂಡೂಲ್ಕರ್ (ಭಾರತ): 25 ಪಂದ್ಯಗಳಲ್ಲಿ 740 ರನ್ ಗಳಿಸಿದ್ದಾರೆ. ಅವರ ಸರಾಸರಿ 30.83 ಆಗಿದ್ದು, 1 ಶತಕ ಮತ್ತು 5 ಅರ್ಧಶತಕಗಳನ್ನು ಒಳಗೊಂಡಿದೆ. ಅವರ ಗರಿಷ್ಠ ಸ್ಕೋರ್ 117 ಆಗಿದೆ. 64 ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿದ್ದಾರೆ.
ಎಂಎಸ್ ಧೋನಿ (ಭಾರತ): 21 ಪಂದ್ಯಗಳಲ್ಲಿ 45.60 ಸರಾಸರಿಯೊಂದಿಗೆ 684 ರನ್ ಗಳಿಸಿದ್ದಾರೆ. ಇದರಲ್ಲಿ 5 ಅರ್ಧಶತಕಗಳಿವೆ (ಶತಕಗಳಿಲ್ಲ), ಅವರ ಅತ್ಯುತ್ತಮ ಸ್ಕೋರ್ 87* ಆಗಿದೆ. ಅವರು 32 ಬೌಂಡರಿ ಮತ್ತು 12 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
Advertisement