

ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡಕ್ಕೆ ಗಾಯದ ಭೀತಿ ಎದುರಾಗಿದ್ದು, ತಂಡದ ಸ್ಟಾರ್ ಆಟಗಾರ ಶ್ರೇಯಸ್ ಅಯ್ಯರ್ ಫೀಲ್ಡಿಂಗ್ ವೇಳೆ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಇಂದು ನಡೆದ 3ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 9 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿತು.
ಆಸ್ಟ್ರೇಲಿಯಾ ನೀಡಿದ್ದ 236 ರನ್ ಗಳ ಸಾಧಾರಣ ಗುರಿಯನ್ನು ಬೆನ್ನು ಹತ್ತಿದ ಭಾರತ 38.3 ಓವರ್ ನಲ್ಲಿ ಕೇವಲ 1 ವಿಕೆಟ್ ನಷ್ಟಕ್ಕೆ 237 ರನ್ ಗಳಿಸಿ 9 ವಿಕೆಟ್ ಅಂತರದ ಭರ್ಜರಿ ಜಯ ದಾಖಲಿಸಿತು.
ಭಾರತಕ್ಕೆ ಗಾಯದ ಬರೆ
ಇನ್ನು ಮೂರನೇ ಏಕದಿನ ಪಂದ್ಯದ ನಡುವೆ ಟೀಂ ಇಂಡಿಯಾಕ್ಕೆ ಆಘಾತ ಎದುರಾಗಿದ್ದು, ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಕ್ಯಾಚ್ ಹಿಡಿಯುವ ಸಮಯದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರಿಂದಾಗಿ ಶ್ರೇಯಸ್ ಮೈದಾನ ತೊರೆದು ಡಗೌಟ್ ಸೇರಿಕೊಂಡರು.
ಇನ್ನು ಶ್ರೇಯಸ್ ಅಯ್ಯರ್ ಗಾಯದ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಫೀಲ್ಡಿಂಗ್ ಮಾಡುವಾಗ ಶ್ರೇಯಸ್ ಅಯ್ಯರ್ ಅವರ ಎಡ ಪಕ್ಕೆಲುಬಿಗೆ ಗಾಯವಾಗಿದೆ. ಹೆಚ್ಚಿನ ಮೌಲ್ಯಮಾಪನ ಮತ್ತು ಗಾಯದ ಮೌಲ್ಯಮಾಪನಕ್ಕಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.
ಸೂಪರ್ ಕ್ಯಾಚ್ ಬಳಿಕ ಆಗಿದ್ದೇನು?
ಆಸ್ಟ್ರೇಲಿಯಾದ ಇನ್ನಿಂಗ್ಸ್ನ 33.4 ನೇ ಓವರ್‌ನಲ್ಲಿ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಅವರನ್ನು ಹರ್ಷಿತ್ ರಾಣಾ ಔಟ್ ಮಾಡಿದರು. 24 ರನ್ ಗಳಿಸಿ ಆಡುತ್ತಿದ್ದ ಕ್ಯಾರಿ ಹೈ ಶಾಟ್ ಹೊಡೆದರು. ಈ ವೇಳೆ ಶ್ರೇಯಸ್ ಅಯ್ಯರ್ ಕ್ಯಾಚ್ ಹಿಡಿಯುವ ಸಲುವಾಗಿ ಹಿಂದಕ್ಕೆ ಓಡಿದರು. ಕೊನೆಗೆ ಕ್ಯಾಚ್ ಹಿಡಿಯುವಲ್ಲೂ ಯಶಸ್ವಿಯಾದರು.
ಆದರೆ ಈ ಪ್ರಕ್ರಿಯೆಯಲ್ಲಿ ಅವರು ಗಂಭೀರವಾಗಿ ಗಾಯಗೊಂಡರು. ತೀವ್ರ ನೋವಿನಿಂದಾಗಿ ಅಯ್ಯರ್ ಮೈದಾನದಲ್ಲೇ ಬಿದ್ದು ನರಳಾಡುತ್ತಿದ್ದರು. ಈ ವೇಳೆ ಮೈದಾನಕ್ಕೆ ಬಂದ ಫಿಸಿಯೋ, ಅಯ್ಯರ್ ಅವರನ್ನು ಪರೀಕ್ಷಿಸಿ ಮೈದಾನದಿಂದ ಹೊರಕ್ಕೆ ಕರೆದುಕೊಂಡು ಹೋದರು.
Advertisement