

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ತಂಡಕ್ಕೆ ಅಮೋಘ ಜಯ ತಂದುಕೊಟ್ಟ ರೋಹಿತ್ ಶರ್ಮಾ ಪಂದ್ಯದ ಬಳಿಕ ನಿವೃತ್ತಿ ಸುಳಿವು ಕೊಟ್ರಾ ಎಂಬ ಮಾತುಗಳು ಕೇಳಿಬರುತ್ತಿವೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಇಂದು ನಡೆದ 3ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 9 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿತು. ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿದ ರೋಹಿತ್ ಶರ್ಮಾ 125 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 13 ಬೌಂಡರಿ ಸಹಿತ 121 ರನ್ ಗಳಿಸಿದರು.
ಪಂದ್ಯದ ಯಾವುದೇ ಹಂತದಲ್ಲೂ ಆಸಿಸ್ ಬೌಲರ್ ಗಳಿಗೆ ಅವಕಾಶವನ್ನೇ ನೀಡದ ರೋಹಿತ್ ಶರ್ಮಾ ವಿರಾಟ್ ಕೊಹ್ಲಿ ಜೊತೆಗೂಡಿ ಕೊನೆಯ ಹಂತದವರೆಗೂ ಕ್ರೀಸ್ ನಲ್ಲಿ ನಿಂತು ತಂಡಕ್ಕೆ ಗೆಲುವು ತಂದು ಕೊಟ್ಟರು.
ಅಂತೆಯೇ ರೋಹಿತ್ ಶರ್ಮಾ ಇಂದಿನ ಮತ್ತು ಟೂರ್ನಿಯ ಅಮೋಘ ಪ್ರದರ್ಶನದ ಫಲವಾಗಿ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದರು.
ಮತ್ತೆ ಇಲ್ಲಿಗೆ ಬರುತ್ತೇವೋ ಇಲ್ಲವೋ ಗೊತ್ತಿಲ್ಲ
ಇನ್ನು ಪಂದ್ಯ ಮುಕ್ತಾಯದ ಬಳಿಕ ಆಸಿಸ್ ಮಾಜಿ ಆಟಗಾರ ಗಿಲ್ ಕ್ರಿಸ್ಟ್ ಜೊತೆ ಮಾತನಾಡಿದ ರೋಹಿತ್ ಶರ್ಮಾ, 'ನಾನು ಯಾವಾಗಲೂ ಆಸ್ಟ್ರೇಲಿಯಾಗೆ ಬಂದು ಆಡುವುದನ್ನು ಇಷ್ಟಪಡುತ್ತೇನೆ. ಸಿಡ್ನಿಯಲ್ಲಿ ಕ್ರಿಕೆಟ್ ಆಡುವುದನ್ನು ಆನಂದಿಸುತ್ತೇನೆ. ಮೊದಲ ಬಾರಿಗೆ 2008ರಲ್ಲಿ ಆಸ್ಟ್ರೇಲಿಯಾ ಬಂದಿದ್ದೆ. ಅದು ಒಳ್ಳೆಯ ನೆನಪುಗಳನ್ನು ತಂದಿತು. ಅದು ಖುಷಿಯಾಗಿತ್ತು ಎಂದರು.
ಅಂತೆಯೇ ನಾವು (ಕ್ರಿಕೆಟಿಗರಾಗಿ) ಮತ್ತೆ ಇಲ್ಲಿಗೆ ಹಿಂತಿರುಗುತ್ತೇವೆಯೇ ಅಥವಾ ಇಲ್ಲವೋ ಎಂದು ತಿಳಿದಿಲ್ಲ, ಆದರೆ ನಾನು ಎಲ್ಲವನ್ನೂ ಆನಂದಿಸಿದ್ದೇನೆ. ವರ್ಷಗಳಲ್ಲಿ ಎಲ್ಲಾ ಪ್ರಶಂಸೆಗಳನ್ನು ಲೆಕ್ಕಿಸದೆ ನಾವು ಕ್ರಿಕೆಟ್ ಆಡುವುದನ್ನು ಆನಂದಿಸಿದ್ದೇವೆ.
ಕಳೆದ 15 ವರ್ಷಗಳಲ್ಲಿ ಏನಾಯಿತು ಎಂಬುದನ್ನು ಮರೆತುಬಿಡಿ, ಆದರೆ ನಾನು ಯಾವಾಗಲೂ ಇಲ್ಲಿ ಆಡಲು ಇಷ್ಟಪಡುತ್ತೇನೆ. ವಿರಾಟ್ ಗೂ ಅದೇ ರೀತಿ ಇರುತ್ತದೆ ಎಂದು ನಾನು ಭಾವಿಸುತ್ತೇನೆ. ಆಸ್ಟ್ರೇಲಿಯಾಕ್ಕೆ ಧನ್ಯವಾದಗಳು ಎಂದು ರೋಹಿತ್ ಶರ್ಮಾ ಹೇಳಿದರು.
Advertisement