3ನೇ ಏಕದಿನ: ರೋ'ಹಿಟ್' ಶರ್ಮಾ, ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್, ಕ್ರಿಕೆಟ್ ಇತಿಹಾಸದ ಹಲವು ದಾಖಲೆಗಳು ಪತನ
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಭಾರತದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಮತ್ತು ರನ್ ಮೆಷಿನ್ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಛಿದ್ರಗೊಳಿಸಿದ್ದಾರೆ.
ಹೌದು.. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಇಂದು ನಡೆದ 3ನೇ ಏಕದಿನ ಪಂದ್ಯದಲ್ಲಿ ಚೇಸಿಂಗ್ ನಲ್ಲಿ ಭಾರತಕ್ಕೆ ಭರ್ಜರಿ ಬ್ಯಾಟಿಂಗ್ ಬೆಂಬಲ ನೀಡಿದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಹಲವು ದಾಖಲೆಗಳನ್ನು ಮುರಿದಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ನೀಡಿದ್ದ 237 ರನ್ ಗಳ ಸಾಧಾರಣ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ ರೋಹಿತ್ ಶರ್ಮಾ ಶತಕ ಮತ್ತು ವಿರಾಟ್ ಕೊಹ್ಲಿ ಅವರ ಅರ್ಧಶತಕದ ನೆರವಿನಿಂದ ಭರ್ಜರಿ ಗೆಲವು ದಾಖಲಿಸಿತು. ಭಾರತ 38.3 ಓವರ್ ನಲ್ಲಿಯೇ 1 ವಿಕೆಟ್ ಮಾತ್ರ ಕಳೆದುಕೊಂಡು 237 ರನ್ ಗಳಿಸಿ 9 ವಿಕೆಟ್ ಗಳ ಗೆಲುವು ದಾಖಲಿಸಿತು.
ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ 125 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 13 ಬೌಂಡರಿ ಸಹಿತ 121 ರನ್ ಗಳಿಸಿದರೆ, ಅವರಿಗೆ ಉತ್ತಮ ಸಾಥ್ ನೀಡಿದ ವಿರಾಟ್ ಕೊಹ್ಲಿ ಕೂಡ 81 ಎಸೆತಗಳಲ್ಲಿ 7 ಬೌಂಡರಿ ಸಹಿತ 74 ರನ್ ಗಳಿಸಿದರು. ಈ ಜೋಡಿ ಮುರಿಯದ 2ನೇ ವಿಕೆಟ್ ಗೆ 168 ರನ್ ಗಳ ಅಮೋಘ ಜೊತೆಯಾಟವಾಡಿ, ಆ ಮೂಲಕ ಕ್ರಿಕೆಟ್ ಲೋಕದ ಹಲವು ದಾಖಲೆಗಳನ್ನು ಛಿದ್ರಗೊಳಿಸಿದೆ.
ಏಕದಿನದಲ್ಲಿ ಅತೀ ಹೆಚ್ಚು ಶತಕದ ಜೊತೆಯಾಟ
ಇನ್ನು ಇಂದಿನ ಶತಕ ಜೊತೆಯಾಟದ ಮೂಲಕ ರೋ-ಕೋ ಜೋಡಿ ಅತೀ ಹೆಚ್ಚು ಬಾರಿ ಶತಕ ಜೊತೆಯಾಟವಾಡಿದ ಜಗತ್ತಿನ ಮೂರನೇ ಯಶಸ್ವಿ ಜೋಡಿ ಎಂಬ ಕೀರ್ತಿಗೆ ಭಾಜನವಾಗಿದೆ.
ಈ ಪಟ್ಟಿಯಲ್ಲಿ ಭಾರತೀಯರದ್ದೇ ಸಿಂಹಪಾಲಿದ್ದು, ಅತೀ ಹೆಚ್ಚು ಬಾರಿ ಶತಕದ ಜೊತೆಯಾಟವಾಡಿದ ಜೋಡಿಗಳ ಪೈಕಿ ಭಾರತದ್ದೇ ಮೂರು ಜೋಡಿಗಳಿವೆ.
ಈ ಪೈಕಿ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಜೋಡಿ ಅತೀ ಹೆಚ್ಚು ಬಾರಿ ಶತಕದ ಜೊತೆಯಾಟದಲ್ಲಿ ಪಾಲ್ಗೊಂಡಿದ್ದು, ಒಟ್ಟು 26 ಬಾರಿ ಗಂಗೂಲಿ ಮತ್ತು ಸಚಿನ್ ಜೋಡಿ ಶತಕದ ಜೊತೆಯಾಟ ನೀಡಿದೆ.
2ನೇ ಸ್ಥಾನದಲ್ಲಿ ಶ್ರೀಲಂಕಾದ ದಿಲ್ಶಾನ್ ಮತ್ತು ಸಂಗಕ್ಕಾರ ಜೋಡಿ ಇದ್ದು, ಈ ಜೋಡಿ 20 ಬಾರಿ ಶತಕದ ಜೊತೆಯಾಟವಾಡಿದೆ. 3ನೇ ಸ್ಥಾನದಲ್ಲಿ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಜೋಡಿ ಇದ್ದು ಈ ಜೋಡಿ ಒಟ್ಟು 19 ಬಾರಿ ಶತಕದ ಜೊತೆಯಾಟವಾಡಿದೆ. 4ನೇ ಸ್ಥಾನದಲ್ಲಿ 18 ಬಾರಿ ಶತಕದ ಜೊತೆಯಾಟವಾಡಿದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಜೋಡಿ ಇದೆ.
Most 100+ partnerships in ODIs
26 Tendulkar – Ganguly (176 inngs)
20 Dilshan – Sangakkara (108)
19 Rohit – Kohli (101) *
18 Rohit – Shikhar (117)
ಅತೀ ಹೆಚ್ಚು ಬಾರಿ ಶತಕದ ಜೊತೆಯಾಟದಲ್ಲಿ ಭಾಗಿ
ಅಂತೆಯೇ ವೈಯುಕ್ತಿಕವಾಗಿ ಅತೀ ಹೆಚ್ಚು ಬಾರಿ ಶತಕದ ಜೊತೆಯಾಟದಲ್ಲಿ ಪಾಲ್ಗೊಂಡ ಆಟಗಾರರ ಪಟ್ಟಿಯಲ್ಲೂ ಈ ರೋ-ಕೋ ಜೋಡಿ ಅಗ್ರ ಐದರಲ್ಲಿ ಸ್ಥಾನ ಪಡೆದಿದ್ದು, ಈ ಪೈಕಿ 99 ಬಾರಿ ಶತಕದ ಜೊತೆಯಾಟದಲ್ಲಿ ಪಾಲ್ಗೊಂಡಿದ್ದ ಭಾರತದ ಸವ್ಯಸಾಚಿ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದು, 82 ಬಾರಿ ಶತಕದ ಜೊತೆಯಾಟದಲ್ಲಿ ಪಾಲ್ಗೊಂಡ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯಾದ ರಿಕ್ಕಿ ಪಾಂಟಿಂಗ್ 72 ಬಾರಿ ಶತಕದ ಜೊತೆಯಾಟದಲ್ಲಿ ಪಾಲ್ಗೊಂಡು 3ನೇ ಸ್ಥಾನದಲ್ಲಿದ್ದಾರೆ. 68 ಬಾರಿ ಶತಕದ ಜೊತೆಯಾಟದಲ್ಲಿ ಪಾಲ್ಗೊಂಡಿರುವ ರೋಹಿತ್ ಶರ್ಮಾ 4ನೇ ಸ್ಥಾನದಲ್ಲಿದ್ದಾರೆ. 67 ಶತಕದ ಜೊತೆಯಾಟದಲ್ಲಿ ಪಾಲ್ಗೊಂಡಿರುವ ಶ್ರೀಲಂಕಾದ ಕುಮಾರ ಸಂಗಕ್ಕಾರ 5ನೇ ಸ್ಥಾನದಲ್ಲಿದ್ದಾರೆ.
Involved in most 100+ partnerships (ODI)
99 Sachin Tendulkar
82 Virat Kohli *
72 Ricky Ponting
68 Rohit Sharma *
67 Kumar Sangakkara
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ


