
ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಸ್ಲೋ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಮಂಗಳವಾರ ಪಂದ್ಯ ಶುಲ್ಕದ ಶೇ 10 ರಷ್ಟು ದಂಡ ವಿಧಿಸಲಾಗಿದೆ.
ಶನಿವಾರ ಫಿರೋಜ್ ಷಾ ಕೋಟ್ಲಾದಲ್ಲಿ ನಡೆದ ಪಂದ್ಯದಲ್ಲಿ ಸ್ಮೃತಿ ಮಂಧಾನ ಅವರ 125 ರನ್‌ಗಳ ಭರ್ಜರಿ ಬ್ಯಾಟಿಂಗ್ ಹೊರತಾಗಿಯೂ, ಆಸ್ಟ್ರೇಲಿಯಾ ತಂಡವು ಭಾರತದ ವಿರುದ್ಧ 43 ರನ್‌ಗಳ ಗೆಲುವು ಕಂಡಿತು. ಈ ಮೂಲಕ ಸರಣಿಯನ್ನು 2-1 ಅಂತರದಿಂದ ತನ್ನದಾಗಿಸಿಕೊಂಡಿತು.
ಐಸಿಸಿಯ ಅಂತರರಾಷ್ಟ್ರೀಯ ಪಂದ್ಯದ ರೆಫರಿಗಳ ಸಮಿತಿ ಸದಸ್ಯರಾದ ಜಿಎಸ್ ಲಕ್ಷ್ಮಿ, ಭಾರತ ಕ್ರಿಕೆಟ್ ತಂಡವು ನಿಗದಿತ ಸಮಯದಲ್ಲಿ ತಮ್ಮ ಓವರ್‌ಗಳನ್ನು ಪೂರ್ಣಗೊಳಿಸಲಿಲ್ಲದ ಕಾರಣ ದಂಡ ವಿಧಿಸಿದ್ದಾರೆ.
'ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22ರ ಪ್ರಕಾರ, ಕನಿಷ್ಠ ಓವರ್-ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ, ಆಟಗಾರರು ತಮ್ಮ ತಂಡಕ್ಕೆ ನಿಗದಿಪಡಿಸಿದ ಸಮಯದಲ್ಲಿ ಬೌಲ್ ಮಾಡಲು ವಿಫಲವಾದ ಪ್ರತಿ ಓವರ್‌ಗೆ ಅವರ ಪಂದ್ಯ ಶುಲ್ಕದ ಶೇ ಐದರಷ್ಟು ದಂಡ ವಿಧಿಸಲಾಗುತ್ತದೆ' ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.
'ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ತಪ್ಪೊಪ್ಪಿಕೊಂಡಿದ್ದು, ಪ್ರಸ್ತಾವಿತ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ. ಆದ್ದರಿಂದ ಔಪಚಾರಿಕ ವಿಚಾರಣೆಯ ಅಗತ್ಯವಿಲ್ಲ' ಎಂದು ಅದು ಹೇಳಿದೆ.
ಈ ಆರೋಪವನ್ನು ಮೈದಾನದಲ್ಲಿದ್ದ ಅಂಪೈರ್‌ಗಳಾದ ಲಾರೆನ್ ಅಗೆನ್‌ಬಾಗ್ ಮತ್ತು ಜನನಿ ನಾರಾಯಣನ್, ಮೂರನೇ ಅಂಪೈರ್ ಗಾಯತ್ರಿ ವೇಣುಗೋಪಾಲನ್ ಮತ್ತು ನಾಲ್ಕನೇ ಅಂಪೈರ್ ವೃಂದಾ ರಾಠಿ ಹೊರಿಸಿದರು.
Advertisement