
ದುಬೈ: ಏಷ್ಯಾಕಪ್ 2025 ಟೂರ್ನಿಯ ಸೂಪರ್ 4 ಹಂತದ ಕೊನೆಯ ಪಂದ್ಯದಲ್ಲಿ ಭಾರತ ವಿರುದ್ಧ ಟಾಸ್ ಗೆದ್ದ ಶ್ರೀಲಂಕಾ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಭಾರತ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ.
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಸೂಪರ್ 4 ಹಂತದ ಕೊನೆಯ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಶ್ರೀಲಂಕಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಈಗಾಗಲೇ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ವಿರುದ್ಧದ ಪಂದ್ಯಗಳಲ್ಲಿ ಮುಗ್ಗರಿಸಿ ಟೂರ್ನಿಯಿಂದ ಹೊರಬಿದ್ದಿರುವ ಶ್ರೀಲಂಕಾ ಈ ಪಂದ್ಯದ ಗೆಲುವಿನೊಂದಿಗೆ ಟೂರ್ನಿ ಮುಕ್ತಾಯಗೊಳಿಸಲು ಯೋಜಿಸಿದೆ.
ಅಂತೆಯೇ ಇಡೀ ಟೂರ್ನಿಯಲ್ಲಿ ಅಜೇಯವಾಗಿ ಉಳಿದಿರುವ ಭಾರತ ಈ ಪಂದ್ಯದ ಗೆಲುವಿನೊಂದಿಗೆ ಫೈನಲ್ ಗೆ ಆತ್ಮವಿಶ್ವಾಸದೊಂದಿಗೆ ಹೋಗಲು ನಿರ್ಧರಿಸಿದೆ. ಏಷ್ಯಾಕಪ್ 2025 ಟೂರ್ನಿಯಲ್ಲಿ ಈಗಾಗಲೇ ಭಾರತ ಮತ್ತು ಪಾಕಿಸ್ತಾನ ತಂಡಗಳು ಫೈನಲ್ ತಲುಪಿದ್ದು, ಇಂದಿನ ಶ್ರೀಲಂಕಾ ವಿರುದ್ಧದ ಪಂದ್ಯ ಔಪಚಾರಿಕ ಪಂದ್ಯವಾಗಿರಲಿದೆ. ಹೀಗಾಗಿ ಇಂದಿನ ಪಂದ್ಯದ ಫಲಿತಾಂಶ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ.
ಭಾರತ ತಂಡದಲ್ಲಿ 2 ಬದಲಾವಣೆ
ಇನ್ನು ಫೈನಲ್ ಪಂದ್ಯಕ್ಕೂ ಮೊದಲು ಸಿದ್ಧತೆಯಂತಿರುವ ಇಂದಿನ ಪಂದ್ಯಕ್ಕೆ ಭಾರತ ತಂಡದಲ್ಲಿ 2 ಪ್ರಮುಖ ಬದಲಾವಣೆ ಮಾಡಲಾಗಿದೆ. ತಂಡದ ಸ್ಟಾರ್ ವೇಗಿ ಜಸ್ ಪ್ರೀತ್ ಬುಮ್ರಾ ಮತ್ತು ಶಿವಂ ದುಬೆ ಅವರ ಬದಲಿಗೆ ಅರ್ಶ್ ದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾಗೆ ಸ್ಥಾನ ಕಲ್ಪಿಸಲಾಗಿದೆ.
ಉಳಿದಂತೆ ಶ್ರೀಲಂಕಾ ತಂಡದಲ್ಲೂ ಒಂದು ಬದಲಾವಣೆ ಮಾಡಲಾಗಿದ್ದು, ಚಮಿಕಾ ಕರುಣರತ್ನೆ ಬದಲಿಗೆ ಜನಿತ್ ಲಿಯಾಂಗೆಗೆ ಅವಕಾಶ ನೀಡಲಾಗಿದೆ.
ಆರಂಭಿಕ ಆಘಾತ
ಇನ್ನು ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿರುವ ಭಾರತ ಆರಂಭಿಕ ಆಘಾತ ಎದುರಿಸಿದ್ದು, ಕೇವಲ 4 ರನ್ ಗಳಿಸಿ ಶುಭ್ ಮನ್ ಗಿಲ್ ತೀಕ್ಷಣಗೆ ವಿಕೆಟ್ ಒಪ್ಪಿಸಿದ್ದಾರೆ.
Advertisement