ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾದಾಗಲೆಲ್ಲ ಪಂದ್ಯದ ಫಲಿತಾಂಶವನ್ನು ಮೀರಿ ಇತರೆ ವಿಚಾರಗಳು ಭಾರಿ ಚರ್ಚೆಗೆ ಗ್ರಾಸವಾಗುತ್ತವೆ. ಏಷ್ಯಾ ಕಪ್ 2025ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ವಿಚಾರಣೆಗಳು, ದೂರುಗಳು ಇದೀಗ ಐಸಿಸಿ ಅಂಗಳಕ್ಕೆ ಮುಟ್ಟಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಔಪಚಾರಿಕ ದೂರಿನ ನಂತರ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಐಸಿಸಿ ಸಮನ್ಸ್ ಜಾರಿ ಮಾಡಿತ್ತು. ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸಿದ ನಂತರ ಆಟಗಾರರಿಗೆ ಹ್ಯಾಂಡ್‌ಶೇಕ್ ನಿರಾಕರಿಸಿದ ಬಳಿಕ ಮಾತನಾಡಿದ್ದ ಸೂರ್ಯಕುಮಾರ್, ಈ ಗೆಲುವನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಮತ್ತು ಸಶಸ್ತ್ರ ಪಡೆಗಳಿಗೆ ಅರ್ಪಿಸಿದ ನಂತರ ವಿವಾದ ಉಂಟಾಗಿತ್ತು.
ಉಪಸ್ಥಿತರ ಪ್ರಕಾರ, ಸೂರ್ಯಕುಮಾರ್ ಯಾದವ್ ಅವರು ಬಿಸಿಸಿಐ ಸಿಒಒ ಹೇಮಾಂಗ್ ಅಮೀನ್ ಮತ್ತು ಕ್ರಿಕೆಟ್ ಕಾರ್ಯಾಚರಣೆ ವ್ಯವಸ್ಥಾಪಕ ಸಮ್ಮರ್ ಮಲ್ಲಾಪುರ್ಕರ್ ಅವರೊಂದಿಗೆ ಮ್ಯಾಚ್ ರೆಫರಿ ರಿಚಿ ರಿಚರ್ಡ್ಸನ್ ಅವರ ಮುಂದೆ ಹಾಜರಾದರು. ಭಾರತೀಯ ನಾಯಕ ತಾವು ತಪ್ಪಿತಸ್ಥರಲ್ಲ, ನನ್ನ ಮಾತುಗಳು ರಾಜಕೀಯ ಸಂದೇಶಕ್ಕಿಂತ ಹೆಚ್ಚಾಗಿ ತಮ್ಮ ದೇಶವಾಸಿಗಳೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸಿದ್ದಾಗಿತ್ತು ಎಂದು ವಾದಿಸಿದರು.
ಸುದ್ದಿಸಂಸ್ಥೆ ಪಿಟಿಐ ಪ್ರಕಾರ, ರಾಜಕೀಯಕ್ಕೆ ಸಂಬಂಧಿಸಿದ ಕಾಮೆಂಟ್‌ಗಳಿಂದ ದೂರವಿರುವಂತೆ ರಿಚರ್ಡ್‌ಸನ್ 34 ವರ್ಷದ ಆಟಗಾರನಿಗೆ ನೆನಪಿಸಿದರು. ಐಸಿಸಿ ನೀತಿ ಸಂಹಿತೆಯ ಅಡಿಯಲ್ಲಿ ಲೆವೆಲ್ 1 ಅಪರಾಧಕ್ಕೆ ಸಾಮಾನ್ಯವಾಗಿ ಎಚ್ಚರಿಕೆ ಅಥವಾ ಪಂದ್ಯ ಶುಲ್ಕದ ಶೇ 15 ರಷ್ಟು ದಂಡ ವಿಧಿಸಲಾಗುತ್ತದೆ. ಇದೀಗ, ಸೂರ್ಯ ಕೇವಲ ಒಂದು ಎಚ್ಚರಿಕೆಯೊಂದಿಗೆ ಪಾರಾಗಿದ್ದಾರೆ.
ಐಸಿಸಿ ಪಾಕ್ ಆಟಗಾರರಿಗೂ ಸಮನ್ಸ್ ನೀಡಿದ್ದು, ಹ್ಯಾರಿಸ್ ರೌಫ್ ಮತ್ತು ಸಾಹಿಬ್ಜಾದಾ ಫರ್ಹಾನ್ ಈಗ ತಮ್ಮ ನಡೆಗಳನ್ನು ಸಮರ್ಥಿಸಿಕೊಳ್ಳಬೇಕಾಗಿದೆ. ಸೆಪ್ಟೆಂಬರ್ 21ರ ಭಾರತ ಮತ್ತು ಪಾಕಿಸ್ತಾನ ನಡುವಿನ ಸೂಪರ್ 4 ಪಂದ್ಯದ ಸಮಯದಲ್ಲಿ ಅವರ ಪ್ರಚೋದನಕಾರಿ ಸನ್ನೆಗಳನ್ನು ಉಲ್ಲೇಖಿಸಿ ಐಸಿಸಿಗೆ ಬಿಸಿಸಿಐ ಪ್ರತ್ಯೇಕ ದೂರು ದಾಖಲಿಸಿದೆ.
ರೌಫ್ ವಿಮಾನವನ್ನು ಹೊಡೆದುರುಳಿಸುವ ಸನ್ನೆಯನ್ನು ಮಾಡಿದರು. ಇದು ಭಾರತೀಯ ಬೆಂಬಲಿಗರಿಗೆ ಹಿಂದಿನ ಮಿಲಿಟರಿ ಮುಖಾಮುಖಿಯ ಕ್ಷಣಗಳನ್ನು ನೆನಪಿಸುವ ಒಂದು ಸನ್ನೆಯಾಗಿದೆ. ಫರ್ಹಾನ್ ತನ್ನ ಅರ್ಧಶತಕ ಗಳಿಸಿದ ನಂತರ, ಗನ್ ಫೈರ್ ಸಂಭ್ರಮಾಚರಣೆ ಮಾಡಿದರು. ಉಭಯ ದೇಶಗಳು ಕೆಲವು ತಿಂಗಳುಗಳ ಹಿಂದೆ ಯುದ್ಧಕ್ಕೆ ಇಳಿದಿದ್ದನ್ನು ಪರಿಗಣಿಸಿ ಇದು ಭಾರತೀಯರಿಗೆ ಅಪಹಾಸ್ಯ ಮಾಡಿದಂತೆ ಭಾಸವಾಯಿತು. ಶುಕ್ರವಾರ ಈ ಬಗ್ಗೆ ವಿಚಾರಣೆ ನಡೆಯಲಿದ್ದು, ಏನಾಗಬಹುದು ಎಂಬುದನ್ನು ಕಾದು ನೋಡಬೇಕಾಗಿದೆ.
Advertisement