
ದುಬೈ: ಏಷ್ಯಾ ಕಪ್ 2025 ಆರಂಭವಾದಾಗಿನಿಂದಲೂ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯದಿಂದಲೇ ಸಾಕಷ್ಟು ಸುದ್ದಿಯಾಗುತ್ತಿದೆ. ಪಾಕಿಸ್ತಾನ ವಿರುದ್ಧ ಲೀಗ್ ಹಂತದ ಪಂದ್ಯದ ನಂತರ ನೀಡಿದ ಹೇಳಿಕೆಗಾಗಿ ಭಾರತ ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ಅವರಿಗೆ ಪಂದ್ಯ ಶುಲ್ಕದ ಶೇ. 30% ರಷ್ಟು ದಂಡವನ್ನು ಐಸಿಸಿ ವಿಧಿಸಿದೆ.
ಪಂದ್ಯ ಗೆಲುವನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತರು ಹಾಗೂ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯ ಭಾರತೀಯ ಶಸಾಸ್ತ್ರ ಪಡೆಗೆ ಸಮರ್ಪಿಸಿದ್ದರು. ಇದಕ್ಕಾಗಿ ಸೂರ್ಯ ಕುಮಾರ್ ಯಾದವ್ ಅವರಿಗೆ ಐಸಿಸಿ ದಂಡ ವಿಧಿಸಿರುವುದಾಗಿ ಮೂಲಗಳು ಶುಕ್ರವಾರ ತಿಳಿಸಿವೆ.
ಆದರೆ, ಐಸಿಸಿ ತೀರ್ಪಿನ ವಿರುದ್ಧ BCCI ಮೇಲ್ಮನವಿ ಸಲ್ಲಿಸಿದೆ ಎಂದು ತಿಳಿದುಬಂದಿದೆ. ಸೆಪ್ಟೆಂಬರ್ 14 ರಂದು ಶತ್ರು ರಾಷ್ಟ್ರ ವಿರುದ್ಧ ಭಾರತ ತಂಡದ ಗೆಲುವನ್ನು ಪಹಲ್ಗಾಮ್ ಭಯೋತ್ಪಾದನಾ ದಾಳಿಯ ಸಂತ್ರಸ್ತರಿು ಮತ್ತು ಭಾರತೀಯ ಸಶಸ್ತ್ರ ಪಡೆಗಳಿಗೆ ಅರ್ಪಿಸಿದ ನಂತರ ರಾಜಕೀಯ ಹೇಳಿಕೆ ಹಿನ್ನೆಲೆಯಲ್ಲಿ ಸೂರ್ಯಕುಮಾರ್ ವಿರುದ್ಧ ಪಾಕಿಸ್ತಾನ ಐಸಿಸಿಗೆ ದೂರು ಸಲ್ಲಿಸಿತ್ತು.
ಐಸಿಸಿ ಮ್ಯಾಚ್ ರೆಫರಿ ರಿಚಿ ರಿಚರ್ಡ್ಸನ್ ಮುಂದೆ ಸೂರ್ಯಕುಮಾರ್ ಯಾದವ್ ವಿಚಾರಣೆ ಎದುರಿಸಿದ್ದು, ತಾವು ತಪ್ಪಿತಸ್ಥರಲ್ಲ, ನನ್ನ ಮಾತುಗಳು ರಾಜಕೀಯ ಸಂದೇಶಕ್ಕಿಂತ ಹೆಚ್ಚಾಗಿ ತಮ್ಮ ದೇಶವಾಸಿಗಳೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸಿದ್ದಾಗಿತ್ತು ಎಂದು ವಾದಿಸಿದ್ದಾರೆ. ಉಳಿದ ಪಂದ್ಯಗಳಲ್ಲಿ ರಾಜಕೀಯವಾಗಿ ಅರ್ಥೈಸಬಹುದಾದ ಯಾವುದೇ ಹೇಳಿಕೆಯನ್ನು ನೀಡದಂತೆ ಸ್ಪಷ್ಟವಾಗಿ ಸೂಚಿಸಲಾಗಿದೆ ಎನ್ನಲಾಗಿದೆ.
ಪಹಲ್ಗಾಮ್ ಸಂತ್ರಸ್ತರಿಗೆ ಒಗ್ಗಟ್ಟಿನ ಸೂಚಕವಾಗಿ ಟಾಸ್ ಸಮಯದಲ್ಲಿ ಮತ್ತು ಪಂದ್ಯಗಳ ನಂತರ ಪಾಕಿಸ್ತಾನಿ ಆಟಗಾರರೊಂದಿಗೆ ಸಾಂಪ್ರದಾಯಿಕ ಹ್ಯಾಂಡ್‌ಶೇಕ್ ಮಾಡಲು ಭಾರತ ನಿರಾಕರಿಸಿದ್ದರಿಂದ ಉಭಯ ತಂಡಗಳ ನಡುವೆ ಬಿಕ್ಕಟ್ಟು ಉಂಟಾಗಿದ್ದು, ವಿವಾದಕ್ಕೂ ಕಾರಣವಾಗಿದೆ.
Advertisement