
ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಅವರು ಪಂದ್ಯಾವಳಿಯಿಂದ ಬಂದ ತಮ್ಮ ಸಂಪೂರ್ಣ ಪಂದ್ಯ ಶುಲ್ಕವನ್ನು ದೇಶದ ಸಶಸ್ತ್ರ ಪಡೆಗಳು ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ದೇಣಿಗೆ ನೀಡುವುದಾಗಿ ಹೇಳಿದ ನಂತರ, ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಮತ್ತು ಅವರ ತಂಡದ ಸದಸ್ಯರು ತಮ್ಮ ಏಷ್ಯಾ ಕಪ್ ಪಂದ್ಯಾವಳಿಯ ಶುಲ್ಕವನ್ನು ಭಾರತದ ಆಪರೇಷನ್ ಸಿಂಧೂರ ಸಮಯದಲ್ಲಿ ಬಾಧಿತರಾದ 'ನಾಗರಿಕರು ಮತ್ತು ಮಕ್ಕಳಿಗೆ' ದೇಣಿಗೆ ನೀಡಲು ನಿರ್ಧರಿಸಿರುವುದಾಗಿ ಘೋಷಿಸಿದರು.
ಭಾನುವಾರ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಸೂರ್ಯಕುಮಾರ್ ಪಡೆ ಸಲ್ಮಾನ್ ಅಘಾ ನೇತೃತ್ವದ ಪಾಕಿಸ್ತಾನವನ್ನು ಸೋಲಿಸಿ ಎಲ್ಲ ಮಾದರಿಗಳಲ್ಲಿ ಒಂಬತ್ತನೇ ಏಷ್ಯಾ ಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
'ಒಂದು ತಂಡವಾಗಿ, ನಾವು ನಮ್ಮ ಪಂದ್ಯ ಶುಲ್ಕವನ್ನು ಭಾರತದ ದಾಳಿಯಿಂದ ಬಾಧಿತರಾದ ನಾಗರಿಕರು ಮತ್ತು ಮಕ್ಕಳಿಗೆ ದೇಣಿಗೆ ನೀಡಲು ನಿರ್ಧರಿಸಿದ್ದೇವೆ' ಎಂದು ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಆಘಾ ಹೇಳಿದರು.
ಭಾರತ ಪದೇ ಪದೆ ತಮ್ಮೊಂದಿಗೆ ಕೈಕುಲುಕಲು ನಿರಾಕರಿಸುತ್ತಿರುವ ಬಗ್ಗೆ ಮಾತನಾಡಿದ ಸಲ್ಮಾನ್, ಈ ಕ್ರಮಗಳು 'ನಿರಾಶಾದಾಯಕ'. ಸೂರ್ಯಕುಮಾರ್ ಮತ್ತು ಇತರರು ಕ್ರೀಡೆಯನ್ನು ಅಗೌರವಿಸಿದ್ದಾರೆ ಎಂದು ಆರೋಪಿಸಿದರು.
'ಈ ಟೂರ್ನಮೆಂಟ್‌ನಲ್ಲಿ ಭಾರತ ಮಾಡಿರುವುದು ತುಂಬಾ ನಿರಾಶಾದಾಯಕವಾಗಿದೆ. ಅವರು ಕೈಕುಲುಕದೆ ನಮಗೆ ಅಗೌರವ ತೋರಿಸುತ್ತಿಲ್ಲ ಬದಲಿಗೆ, ಕ್ರಿಕೆಟ್‌ಗೆ ಅಗೌರವ ತೋರಿಸುತ್ತಿದ್ದಾರೆ' ಎಂದರು.
ಫೈನಲ್ ಪಂದ್ಯದ ನಂತರ ಭಾರತ ತಂಡವು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಖ್ಯಸ್ಥ ಮತ್ತು ಪಾಕಿಸ್ತಾನದ ಆಂತರಿಕ ಸಚಿವರೂ ಆಗಿರುವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿತು.
ನಂತರ ನಖ್ವಿ ತಮ್ಮ ಪರಿವಾರದೊಂದಿಗೆ ಟ್ರೋಫಿ ಮತ್ತು ಅಧಿಕೃತ ಪದಕಗಳನ್ನು ತೆಗೆದುಕೊಂಡು ಹೊರಟುಹೋದರು. ಆದಾಗ್ಯೂ, ಭಾರತವು ಸಂಭ್ರಮಾಚರಣೆಯನ್ನು ನಿಲ್ಲಿಸಲಿಲ್ಲ. ಕಾಲ್ಪನಿಕ ಟ್ರೋಫಿಯೊಂದಿಗೆ ತಂಡವು ಪೋಸ್ ನೀಡಿತು.
Advertisement