

ಲಾಹೋರ್: ಪಾಕಿಸ್ತಾನ ಸೂಪರ್ ಲೀಗ್ (PSL) ಮತ್ತೊಂದು ವಿವಾದಕ್ಕೆ ಕಾರಣವಾಗಿದ್ದು, ಟೂರ್ನಿಯ ಪಂದ್ಯವೊಂದರಲ್ಲಿ ದೊಡ್ಡ ಹೈಡ್ರಾಮಾವೇ ನಡೆದಿದೆ.
ನಿನ್ನೆ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ನ ಸ್ಟಾರ್ ಬ್ಯಾಟರ್ ಡೆರಿಲ್ ಮಿಚೆಲ್ ಹಾಗೂ ಪಾಕಿಸ್ತಾನ ವಿಲಕ್ಷಣ ಬೌಲರ್ ಉಸ್ಮಾನ್ ನಡುವೆ ದೊಡ್ಡ ಜಟಾಪಟಿಯೇ ನಡೆದಿದೆ. ಪಾಕಿಸ್ತಾನದ ಸ್ಪಿನ್ನರ್ ಉಸ್ಮಾನ್ ತಾರಿಕ್ ಚೆಂಡು ಎಸೆಯುವಾಗ ತೆಗೆದುಕೊಳ್ಳುವ ಸಮಯದ ವಿಚಾರವಾಗಿ ಡೆರಿಲ್ ಮಿಚೆಲ್ ಮೈದಾನದಲ್ಲೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಾತ್ರವಲ್ಲದೇ ಉಸ್ಮಾನ್ ತಾರಿಖ್ ಬೌಲಿಂಗ್ ವೇಳೆ ಎರಡು ಬಾರಿ ಆಡಲು ನಿರಾಕರಿಸುವ ಮೂಲಕ ಗೊಂದಲಕ್ಕೆ ಕಾರಣರಾಗಿದ್ದಾರೆ. ಉಸ್ಮಾನ್ ನಿಂತು ಬೌಲ್ ಮಾಡುವ ಅವರ ವಿಧಾನ ಅನೇಕ ಬಾರಿ ವಿವಾದಕ್ಕೆ ಗುರಿಯಾಗಿದೆ.
ಆದರೆ ತಮ್ಮ ಬೌಲಿಂಗ್ ಶೈಲಿಯಲ್ಲಿ ಉಸ್ಮಾನ್ ಕೊಂಚವೂ ಸುಧಾರಣೆ ತಂದಿಲ್ಲ. ಇದರ ಪರಿಣಾಮ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್)ನಲ್ಲಿ ಕಂಡುಬಂದಿದ್ದು, ಡೇರಿಲ್ ಮಿಚೆಲ್ ಅವರು ಉಸ್ಮಾನ್ ಅವರ ಬೌಲಿಂಗ್ ಎದುರಿಸಲು ನಿರಾಕರಿಸಿದ ಘಟನೆ ನಡೆದಿದೆ.
ಬೌಲಿಂಗ್ ವೇಳೆ ಅವರು ತೆಗೆದುಕೊಳ್ಳುವ ದೀರ್ಘ ವಿರಾಮವನ್ನು ವಿರೋಧಿಸಿ, ನ್ಯೂಜಿಲೆಂಡ್‌ನ ಆಟಗಾರ ಡೇರಿಲ್ ಮಿಚೆಲ್ ಎರಡು ಬಾರಿ ಬ್ಯಾಟಿಂಗ್ ಪಿಚ್‌ನಿಂದ ಹೊರನಡೆದ ಘಟನೆ ನಡೆದಿದೆ.
ಮೈದಾನದಲ್ಲೇ ಜಟಾಪಟಿ
ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) 2026ರ ನಿನ್ನೆ (ಏ.10-ಶುಕ್ರವಾರ)ಯ ಕ್ವೆಟ್ಟಾ ಗ್ಲಾಡಿಯೇಟರ್ಸ್ ಮತ್ತು ರಾವಲ್ಪಿಂಡಿಜ್ ನಡುವಿನ ಪಂದ್ಯದಲ್ಲಿ ಉಸ್ಮಾನ್ ತಾರಿಕ್ ಬೌಲಿಂಗ್ ಶೈಲಿ ತೀವ್ರ ವಿವಾದ ಭುಗಿಲೇಳಲು ಕಾರಣವಾಗಿದೆ.
ಉಸ್ಮಾನ್ ತಾರಿಕ್ ಅವರ ನಿಂತು ಚೆಂಡು ಎಸೆಯುವ ಶೈಲಿಗೆ ಕಳವಳ ವ್ಯಕ್ತಪಡಿಸಿದ ಡೇರಿಲ್ ಮಿಚೆಲ್, ಒಂದೇ ಓವರ್‌ನಲ್ಲಿ ಎರಡು ಬಾರಿ ಸ್ಪಂಪ್ ಬಿಟ್ಟು ದೂರ ಸರಿದರು. ಬಳಿಕ ಅಂಪೈರ್ ಸಮಸ್ಯೆ ಕೇಳಿದಾಗ, ಉಸ್ಮಾನ್ ತಾರಿಕ್ ಅವರ ಬೌಲಿಂಗ್ ಶೈಲಿಗೆ ಡೇರಿಲ್ ಮಿಚೆಲ್ ಅಸಮಾಧಾನ ವ್ಯಕ್ತಪಡಿಸಿದರು. ಆದರೆ ಅಂತಿಮವಾಗಿ ಅಂಪೈರ್‌ಗಳ ಸಂಧಾನದ ಬಳಿಕ ಆಟ ಮುಂದುವರೆಯಿತು.
ಪಂದ್ಯದ 9ನೇ ಓವರ್‌ನಲ್ಲಿ ಉಸ್ಮಾನ್ ತಾರಿಕ್ ಅವರನ್ನು ಎದುರಿಸಿದ ಡೇರಿಲ್ ಮಿಚೆಲ್, ಮೊದಲ ಎಸೆತದಲ್ಲೇ ಪ್ಯಾಡಲ್ ಸ್ವೀಪ್ ಮಾಡಿದರು. ಆದಾಗ್ಯೂ, ಬೌಲರ್‌ನ ದೀರ್ಘ ವಿರಾಮ ಅವರಿಗೆ ಇರಿಸುಮುರುಸು ಉಂಟು ಮಾಡಿತು. ನಂತರ ಅಂಪೈರ್‌ಗಳು ಮಧ್ಯಪ್ರವೇಶಿಸಿ ಆಟ ಮುಂದುವರೆಯುವಂತೆ ನೋಡಿಕೊಂಡರು.
ತಾರಿಕ್ ಬೌಲಿಂಗ್ ಶೈಲಿಗೆ ಅಶ್ವಿನ್ ಸಲಹೆ
ಈ ಹಿಂದೆ ಟಿ20 ವಿಶ್ವಕಪ್ ಟೂರ್ನಿ ವೇಳೆಯಲ್ಲೂ ಉಸ್ಮಾನ್ ತಾರಿಕ್ ಬೌಲಿಂಗ್ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಟಿ-20 ವಿಶ್ವಕಪ್ ಪಂದ್ಯಾವಳಿ ವೇಳೆ ಉಸ್ಮಾನ್ ತಾರಿಕ್ ಅವರ ಬೌಲಿಂಗ್ ಶೈಲಿಯನ್ನು ಟೀಕಿಸಿದ್ದ ಭಾರತದ ಮಾಜಿ ಸ್ಪಿನ್ನರ್ ಆರ್. ಅಶ್ವಿನ್, "ಬ್ಯಾಟ್ಸಮನ್‌ಗಳು ಉಸ್ಮಾನ್ ತಾರಿಕ್ ಅವರ ಬೌಲಿಂಗ್ ಶೈಲಿ ಖಂಡಿಸಿ ಹೊರನಡೆಯಬೇಕು" ಎಂದು ಸಲಹೆ ನೀಡಿದ್ದರು.
ಬ್ಯಾಟ್ಸಮನ್ ಯಾವುದೇ ಎಸೆತವನ್ನು ಎದುರಿಸದೇ ಸ್ಟಂಪ್ಸ್‌ನಿಂದ ದೂರ ಸರಿದರೆ, ಅದನ್ನು ಅಂಪೈರ್ ಡೆಡ್ ಬೌಲ್ ಎಂದು ಪರಿಗಣಿಸುತ್ತಾರೆ ಎಂದು ಸಲಹೆ ನೀಡಿದ್ದರು. ನಿನ್ನೆ ಇದೇ ಕೆಲಸವನ್ನು ಮಿಚೆಲ್ ಮಾಡಿದ್ದರು.
Advertisement