

ಹೈದರಾಬಾದ್: ಐಪಿಎಲ್ ಟೂರ್ನಿಯ ಇಂದಿನ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ 10 ರನ್ ಗಳ ಅಂತರದಲ್ಲಿ ವಿರೋಚಿತ ಗೆಲುವು ಸಾಧಿಸಿದೆ.
ಹೈದರಾಬಾದ್ ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ನೀಡಿದ 195 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಚೆನ್ನೈ ತಂಡ ನಿಗಧಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 184 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ 10 ರನ್ ಗಳ ಅಂತರದಲ್ಲಿ ವಿರೋಚಿತ ಸೋಲು ಕಂಡಿತು.
ಚೆನ್ನೈ ಪರ ಆಯುಷ್ ಮಾತ್ರೆ (30), ಮ್ಯಾಥ್ಯೂ ಶಾರ್ಟ್ (34), ಸರ್ಫರಾಜ್ ಖಾನ್ (25), ಶಿವಂ ದುಬೆ (21) ಜೇಮಿ ಓವರ್ಟನ್ (16) ಕೊಂಚ ಪ್ರತಿರೋಧ ತೋರಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ.
ಇತ್ತ ಸನ್ ರೈಸರ್ಸ್ ಹೈದರಾಬಾದ್ ಪರ ಇಶಾನ್ ಮಲಿಂಗಾ 3 ವಿಕೆಟ್ ಪಡೆದರೆ, ನಿತೀಶ್ ಕುಮಾರ್ ರೆಡ್ಡಿ 2, ಪ್ರಫುಲ್ ಹಿಂಗೆ, ಸಕೀಬ್ ಹಸನ್ ಮತ್ತು ಶಿವಾಂಗ್ ಕುಮಾರ್ ತಲಾ 1 ವಿಕೆಟ್ ಪಡೆದರು.
ಮಿಂಚಿದ ಆಯುಷ್ ಮಾತ್ರೆ
ಇನ್ನು ಚೆನ್ನೈ ಇನ್ನಿಂಗ್ಸ್ ವೇಳೆ ಉದಯೋನ್ಮುಖ ಆಟಗಾರ ಆಯುಷ್ ಮಾತ್ರೆ ತಮ್ಮ ಭರ್ಜರಿ ಬ್ಯಾಟಿಂಗ್ ಮೂಲಕ ಮಿಂಚಿದರು. ಕೇವಲ 13 ಎಸೆತಗಳನ್ನು ಎದುರಿಸಿದ ಆಯುಷ್ ಮಾತ್ರೆ, 1 ಸಿಕ್ಸರ್ ಮತ್ತು 5 ಬೌಂಡರಿಗಳ ಸಹಿತ 30 ರನ್ ಪೇರಿಸಿ ಎದುರಾಳಿ ಬೌಲರ್ ಗಳಿಗೆ ಆತಂಕ ಹುಟ್ಟಿಸಿದ್ದರು. ಆದರೆ ಸ್ಥಳೀಯ ಪ್ರತಿಭೆ ನಿತೀಶ್ ಕುಮಾರ್ ರೆಡ್ಡಿ ಬೌಲಿಂಗ್ ನಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿ ಹೆನ್ರಿಚ್ ಕ್ಲಾಸೆನ್ ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು.
Advertisement