

ಮಂಗಳವಾರ ಮುಲ್ಲನ್‌ಪುರದಲ್ಲಿ ಪಂಜಾಬ್ ಕಿಂಗ್ಸ್ (PBKS) ಮತ್ತು ರಾಜಸ್ಥಾನ್ ರಾಯಲ್ಸ್ (RR) ನಡುವಿನ ಐಪಿಎಲ್ 2026ರ ಪಂದ್ಯದ ವೇಳೆ ಪ್ರಿಯಾಂಶ್ ಆರ್ಯ ಅವರು ಸಿಕ್ಸರ್ ಬಾರಿಸಿದರು. ಈ ವೇಳೆ ಚೆಂಡು ಮುಖಕ್ಕೆ ಬಡಿದ ಪರಿಣಾಮ ವೃದ್ಧ ಅಭಿಮಾನಿಯೊಬ್ಬರು ರಕ್ತಸಿಕ್ತವಾಗಿದ್ದು ಕಂಡುಬಂತು. ನಾಂಡ್ರೆ ಬರ್ಗರ್ ಎಸೆದ ಪಂದ್ಯದ ಎರಡನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿದೆ. ಚೆಂಡು ಬಡಿದು, ಮುಖದಿಂದ ರಕ್ತ ಬರುತ್ತಿದ್ದಂತೆ ಪ್ರೇಕ್ಷಕರು ಆ ವ್ಯಕ್ತಿಯ ಸುತ್ತಲೂ ಜಮಾಯಿಸಿದ್ದಾರೆ. ಒಬ್ಬ ಪ್ರೇಕ್ಷಕ ಅವರ ಗಾಯವನ್ನು ಸ್ವಚ್ಛಗೊಳಿಸಲು ಮತ್ತು ರಕ್ತದ ಹರಿವನ್ನು ತಡೆಯಲು ಸಹಾಯ ಮಾಡಿದರು. ವರದಿಗಳ ಪ್ರಕಾರ, ಆ ಅಭಿಮಾನಿಯನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತು.
ಈಮಧ್ಯೆ, ಪ್ರಿಯಾಂಶ್ 11 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡಂತೆ 29 ರನ್ ಗಳಿಸಿದರು. ಜೋಫ್ರಾ ಆರ್ಚರ್ ಎಸೆದ ಮೂರನೇ ಓವರ್‌ನಲ್ಲಿ ಪುಲ್ ಶಾಟ್ ಅನ್ನು ಮಿಡ್-ಆನ್‌ಗೆ ಹೊಡೆದಾಗ ಔಟಾದರು.
ಪ್ರಿಯಾಂಶ್ ಈ ಆವೃತ್ತಿಯಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಏಳು ಪಂದ್ಯಗಳಲ್ಲಿ 40.42 ಸರಾಸರಿಯಲ್ಲಿ 283 ರನ್ ಗಳಿಸಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಪಿಬಿಕೆಎಸ್ ತಂಡವು ಮಾರ್ಕಸ್ ಸ್ಟೊಯಿನಿಸ್ (22 ಎಸೆತಗಳಲ್ಲಿ 62*, ನಾಲ್ಕು ಬೌಂಡರಿ ಮತ್ತು ಆರು ಸಿಕ್ಸರ್‌ಗಳೊಂದಿಗೆ) ಮತ್ತು ಪ್ರಭ್‌ಸಿಮ್ರನ್ ಸಿಂಗ್ (44 ಎಸೆತಗಳಲ್ಲಿ 59, ಆರು ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ) ಅವರ ಅರ್ಧಶತಕಗಳ ನೆರವಿನಿಂದ 222/4 ಸ್ಕೋರ್ ಗಳಿಸಿತು.
ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡದ ವೈಭವ್ ಸೂರ್ಯವಂಶಿ (16 ಎಸೆತಗಳಲ್ಲಿ 43, ಮೂರು ಬೌಂಡರಿ ಮತ್ತು ಐದು ಸಿಕ್ಸರ್‌ಗಳೊಂದಿಗೆ) ಮತ್ತು ಯಶಸ್ವಿ ಜೈಸ್ವಾಲ್ (27 ಎಸೆತಗಳಲ್ಲಿ 51, ಏಳು ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ) ಅವರ 51 ರನ್‌ಗಳ ಜೊತೆಯಾಟ ತಂಡಕ್ಕೆ ಅಡಿಪಾಯ ಹಾಕಿತು.
ಅಂತಿಮವಾಗಿ, ಡೊನೊವನ್ ಫೆರೇರಾ (26 ಎಸೆತಗಳಲ್ಲಿ 52*) ಮತ್ತು ಶುಭಂ ದುಬೆ (12 ಎಸೆತಗಳಲ್ಲಿ 31*) ಅವರ 77 ರನ್‌ಗಳ ಜೊತೆಯಾಟವು ನಾಲ್ಕು ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಜಯ ಸಾಧಿಸಲು ನೆರವಾಯಿತು.
ಪಿಬಿಕೆಎಸ್ ಸೋಲಿನ ಹೊರತಾಗಿಯೂ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆರ್‌ಆರ್ ಆರು ಗೆಲುವುಗಳು ಮತ್ತು ಮೂರು ಸೋಲುಗಳೊಂದಿಗೆ ಮೂರನೇ ಸ್ಥಾನಕ್ಕೆ ಏರಿದೆ.
Advertisement