ಜಸ್ಪ್ರೀತ್ ಬುಮ್ರಾಗೆ 'ವಿರಾಮ' ನೀಡಿ; ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್‌ಗೆ ಅವಕಾಶ ನೀಡಿ: ಭಾರತದ ಮಾಜಿ ಆಟಗಾರ

ಎರಡು ವಿಶ್ವಕಪ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಘಾವ್ರಿ, ಬುಮ್ರಾ ಸಂಪೂರ್ಣ ಫಿಟ್ ಆಗಿಲ್ಲದಿದ್ದರೆ ಅವರನ್ನು ಯಾವುದೇ ಸರಣಿ ಅಥವಾ ಪ್ರಮುಖ ಟೂರ್ನಿಗೆ ಆಯ್ಕೆ ಮಾಡದಂತೆ ಆಯ್ಕೆಗಾರರನ್ನು ಒತ್ತಾಯಿಸಿದ್ದಾರೆ.
Mohammed Shami - Bhuvneshwar Kumar
ಮೊಹಮ್ಮದ್ ಶಮಿ- ಭುವನೇಶ್ವರ್ ಕುಮಾರ್
Updated on

ಕೆಲಸದೊತ್ತಡ ಮತ್ತು ಪದೇ ಪದೆ ಕಾಡುವ ದೈಹಿಕ ಕ್ಷಮತೆಯ ಸಮಸ್ಯೆಗಳ ನಡುವೆ, ಭಾರತದ ಮಾಜಿ ಕ್ರಿಕೆಟಿಗ ಕರ್ಸನ್ ಘಾವ್ರಿ, ವೇಗಿ ಜಸ್ಪ್ರೀತ್ ಬುಮ್ರಾ ಕುರಿತು ಮಹತ್ವದ ಅಭಿಪ್ರಾಯವೊಂದನ್ನು ವ್ಯಕ್ತಪಡಿಸಿದ್ದಾರೆ. ಕಳೆದ ತಿಂಗಳು ಇಂಗ್ಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದ ಬುಮ್ರಾ, ಗಾಯದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಶ್ರೀಲಂಕಾ ವಿರುದ್ಧದ ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿಯಲಿದ್ದಾರೆ.

'ಮಿಡ್-ಡೇ' ಜೊತೆ ಮಾತನಾಡಿದ ಘಾವ್ರಿ, ಬುಮ್ರಾ ಅವರು ಕ್ರೀಡೆಯಿಂದ ವಿರಾಮ ತೆಗೆದುಕೊಳ್ಳಬೇಕು. ಕ್ರಿಕೆಟ್‌ಗೆ ಮರಳುವ ಮೊದಲು ಅವರು ಆರು ತಿಂಗಳು ಅಥವಾ ಒಂದು ವರ್ಷದವರೆಗೆ ತಮ್ಮ ದೈಹಿಕ ಕ್ಷಮತೆಯನ್ನು ಸುಧಾರಿಸಿಕೊಳ್ಳುವತ್ತ ಗಮನಹರಿಸಬೇಕು ಎಂದಿದ್ದಾರೆ.

ಎರಡು ವಿಶ್ವಕಪ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಘಾವ್ರಿ, ಬುಮ್ರಾ ಸಂಪೂರ್ಣ ಫಿಟ್ ಆಗಿಲ್ಲದಿದ್ದರೆ ಅವರನ್ನು ಯಾವುದೇ ಸರಣಿ ಅಥವಾ ಪ್ರಮುಖ ಟೂರ್ನಿಗೆ ಆಯ್ಕೆ ಮಾಡದಂತೆ ಆಯ್ಕೆಗಾರರನ್ನು ಒತ್ತಾಯಿಸಿದ್ದಾರೆ; ಏಕೆಂದರೆ, ಇದು ಆ ವೇಗದ ಬೌಲರ್‌ನ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು.

'ಬುಮ್ರಾ ಐದರಿಂದ ಆರು ತಿಂಗಳು ಅಥವಾ ಒಂದು ವರ್ಷದವರೆಗೆ ವಿರಾಮ ಪಡೆದು, ಸಂಪೂರ್ಣ ದೈಹಿಕ ಕ್ಷಮತೆಯನ್ನು (100% ಫಿಟ್‌ನೆಸ್) ಮರಳಿ ಪಡೆಯಬೇಕು. ಸಮಸ್ಯೆಯೆಂದರೆ, ಅವರು ಪೂರ್ಣ ಪ್ರಮಾಣದ ದೈಹಿಕ ಕ್ಷಮತೆ ಇಲ್ಲದಿದ್ದರೂ ಟೂರ್ನಮೆಂಟ್‌ಗಳಲ್ಲಿ ಭಾಗವಹಿಸುತ್ತಾರೆ; ನಂತರ, ಕೆಲಸದೊತ್ತಡದ ನಿರ್ವಹಣೆಯ ಕಾರಣದಿಂದಾಗಿ ಟೂರ್ನಮೆಂಟ್‌ನ ಮಧ್ಯದಲ್ಲೇ ಅವರಿಗೆ ಗಾಯದ ಸಮಸ್ಯೆ ಉಂಟಾಗುತ್ತದೆ. ಇದು ಅನಗತ್ಯ. ಟೂರ್ನಮೆಂಟ್‌ನಾದ್ಯಂತ ತಮ್ಮ ಕೆಲಸದೊತ್ತಡವನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾದರೆ ಮಾತ್ರ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಬೇಕು' ಎಂದು ಹೇಳಿದರು.

75 ವರ್ಷದ ಮಾಜಿ ವೇಗಿ, ಕಳೆದ ಕೆಲವು ಆವೃತ್ತಿಗಳಲ್ಲಿ ಐಪಿಎಲ್‌ನಲ್ಲಿನ ಉತ್ತಮ ಪ್ರದರ್ಶನವನ್ನು ಪರಿಗಣಿಸಿ, ಹಿರಿಯ ವೇಗಿಗಳಾದ ಮೊಹಮ್ಮದ್ ಶಮಿ ಮತ್ತು ಭುವನೇಶ್ವರ್ ಕುಮಾರ್ ಅವರನ್ನು ತಂಡಕ್ಕೆ ಮರಳಿ ಕರೆತರಬೇಕೆಂದು ಆಗ್ರಹಿಸಿದರು.

Mohammed Shami - Bhuvneshwar Kumar
ಏಕದಿನ ವಿಶ್ವಕಪ್ 2027: RCB ಸ್ಟಾರ್ ಬೌಲರ್ ಭುವನೇಶ್ವರ್ ಕುಮಾರ್‌ ಆಯ್ಕೆ ಮಾಡುವಂತೆ ಆರ್ ಅಶ್ವಿನ್ ಒತ್ತಾಯ

'ಶಮಿ ಮತ್ತು ಭುವಿ ಯಾವುದೇ ಗಾಯಗಳಿಲ್ಲದೆ ಐಪಿಎಲ್‌ನಲ್ಲಿ ಸ್ಥಿರವಾಗಿ ಆಡುತ್ತಿದ್ದಾರೆ ಮತ್ತು ಅವರು ರಾಷ್ಟ್ರೀಯ ತಂಡಕ್ಕೆ ಮರಳಬೇಕು. ಆಯ್ಕೆಗಾರರು ಅವರನ್ನು ಪರಿಗಣಿಸಬೇಕು. ಎಲ್ಲ ವೇಗದ ಬೌಲರ್‌ಗಳು ಸಣ್ಣಪುಟ್ಟ ಸಮಸ್ಯೆಗಳು ಅಥವಾ ಗಾಯಗಳನ್ನು ಎದುರಿಸುತ್ತಾರೆ. ಆದರೆ, ಬುಮ್ರಾ ಕಳೆದ ಎರಡು-ಮೂರು ವರ್ಷಗಳಿಂದ ತಂಡದಿಂದ ಆಗಾಗ್ಗೆ ಹೊರಗುಳಿಯುತ್ತಿದ್ದಾರೆ. ಅವರು ಬಹುತೇಕ ಯಾವುದೇ ಸರಣಿಯನ್ನು ಪೂರ್ತಿಯಾಗಿ ಆಡಿಲ್ಲ. ಇದು ಅವರಿಗೆ ಅಥವಾ ದೇಶಕ್ಕೆ ಒಳ್ಳೆಯ ಲಕ್ಷಣವಲ್ಲ' ಎಂದರು.

'ಬುಮ್ರಾ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲೂ ಆಡುವುದನ್ನು ಮುಂದುವರಿಸಬಹುದು ಎಂದು ನನಗೆ ಅನ್ನಿಸುವುದಿಲ್ಲ. ತಂಡದ ಆಡಳಿತ ಮಂಡಳಿಯು ಅವರನ್ನು ಕೇವಲ ಟೆಸ್ಟ್ ಪಂದ್ಯಗಳಿಗೆ ಮಾತ್ರ ಸೀಮಿತಗೊಳಿಸುವ ಬಗ್ಗೆ ಪರಿಗಣಿಸಬೇಕು. ಏಕೆಂದರೆ, ಅದು ಅತ್ಯಂತ ನಿರ್ಣಾಯಕ ಮಾದರಿಯಾಗಿದೆ. ಅವರು ಐಪಿಎಲ್, ಟಿ20 ಮತ್ತು ಏಕದಿನ ಪಂದ್ಯಗಳನ್ನೂ ಆಡಲು ಬಯಸಬಹುದಾದರೂ, ಅದು ಪ್ರಾಯೋಗಿಕವಾಗಿ ಸೂಕ್ತವಲ್ಲ. ಈ ಕಾರಣಕ್ಕಾಗಿ, ಮೊಹಮ್ಮದ್ ಸಿರಾಜ್‌ಗೆ ಶಮಿ ಮತ್ತು ಭುವಿಯಂತಹ ಹಿರಿಯ ವೇಗಿಗಳ ಬೆಂಬಲ ಸಿಕ್ಕರೆ ಉತ್ತಮ. ಭುವಿ ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವುದರಿಂದ ಅವರನ್ನು ಟಿ20 ಪಂದ್ಯಗಳಲ್ಲಿ ಬಳಸಿಕೊಳ್ಳಬೇಕು. ಹಾಗೆಯೇ, ಟೆಸ್ಟ್ ಪಂದ್ಯಗಳಲ್ಲಿ ಶಮಿ ಮತ್ತು ಸಿರಾಜ್ ಅವರನ್ನು ಸರದಿಯಂತೆ (ರೊಟೇಷನ್ ಪದ್ಧತಿಯಲ್ಲಿ) ಬಳಸಬಹುದು. ಇದರಿಂದ ಬೂಮ್ರಾ ಮೇಲಿನ ಒತ್ತಡ ಕಡಿಮೆಯಾಗುತ್ತದೆ' ಎಂದು ಘಾವ್ರಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com