'ಈ ಬಗ್ಗೆ ಚರ್ಚೆಯೇ ನಡೆಯಬಾರದು': ಏಕದಿನ ವಿಶ್ವಕಪ್ 2027ಕ್ಕೆ ರೋಹಿತ್ ಶರ್ಮಾ ಆಯ್ಕೆ ಬಗ್ಗೆ BCCIಗೆ ಅಜಿಂಕ್ಯ ರಹಾನೆ ಸಲಹೆ

'ಇಷ್ಟು ವರ್ಷಗಳಲ್ಲಿ ಅವರ ಕೊಡುಗೆಯನ್ನು ಗಮನಿಸಿದರೆ, ಅದು ಅದ್ಭುತವಾಗಿದೆ. ಹಾಗಾಗಿ ವಿಶ್ವಕಪ್‌ನಲ್ಲಿ ಅಂತಹ ಆಟಗಾರನ ಅನುಭವದ ಅಗತ್ಯವಿದೆ' ಎಂದು ಹೇಳಿದರು.
Ajinkya Rahane -Rohit Sharma
ಅಜಿಂಕ್ಯ ರಹಾನೆ - ರೋಹಿತ್ ಶರ್ಮಾ
Updated on

2027ರ ಏಕದಿನ ವಿಶ್ವಕಪ್‌ಗೆ ಭಾರತ ತಂಡ ಸಿದ್ಧತೆ ಆರಂಭಿಸಿರುವಾಗ ಅತಿ ಹೆಚ್ಚು ಚರ್ಚೆಯಾಗುತ್ತಿರುವ ಹೆಸರು ಟೀಂ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಅವರದ್ದು. ಏಕದಿನ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ರೋಹಿತ್, ತಮ್ಮ ಆಟದ ಲಯಕ್ಕಿಂತ ಹೆಚ್ಚಾಗಿ ವಯಸ್ಸು ಮತ್ತು ದೈಹಿಕ ಕ್ಷಮತೆಯ ಕಾರಣದಿಂದಾಗಿ ಇದೀಗ ತಮ್ಮ ವೃತ್ತಿಜೀವನದ ಕುರಿತಾದ ಪ್ರಶ್ನೆಗಳನ್ನು ಎದುರಿಸಬೇಕಾಗಿ ಬಂದಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಭಾರತ ಆಡಿದ ಪ್ರತಿಯೊಂದು ಏಕದಿನ ಸರಣಿಯಲ್ಲೂ ರೋಹಿತ್ ಅವರ ಭವಿಷ್ಯದ ಕುರಿತಾದ ಚರ್ಚೆಗಳೇ ಪ್ರಮುಖ ಸ್ಥಾನ ಪಡೆದಿದ್ದವು.

ಅಕ್ಟೋಬರ್ 2025ರಿಂದೀಚೆಗೆ ಆಡಿದ ತಮ್ಮ ಕಳೆದ 15 ಏಕದಿನ ಪಂದ್ಯಗಳಲ್ಲಿ, ರೋಹಿತ್ ಎರಡು ಬಾರಿ 120ಕ್ಕೂ ಹೆಚ್ಚು ರನ್‌ಗಳ ಇನಿಂಗ್ಸ್‌ಗಳನ್ನು ಆಡಿದ್ದಾರೆ. ನಾಲ್ಕು ಸಂದರ್ಭಗಳಲ್ಲಿ ಅವರು 70 ರನ್‌ಗಳ ಗಡಿಯನ್ನು ದಾಟಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ನಡೆದ ಸರಣಿಯಲ್ಲಿ, ಲಾರ್ಡ್ಸ್ ಮೈದಾನದಲ್ಲಿ 138 ರನ್‌ಗಳ ಅತ್ಯುತ್ತಮ ಇನಿಂಗ್ಸ್ ಮೂಲಕ ರೋಹಿತ್ ತಮ್ಮ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

ಆ ಇನಿಂಗ್ಸ್‌ಗೂ ಮುನ್ನ, ಲಾರ್ಡ್ಸ್‌ನಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯವು ಭಾರತ ತಂಡದಲ್ಲಿ ಆಡುವ ಅವರ ಕೊನೆಯ ಅವಕಾಶವಾಗಬಹುದು ಎಂದು ಹಲವು ವರದಿಗಳು ಹೇಳಿದ್ದವು. 2027ರ ಏಕದಿನ ವಿಶ್ವಕಪ್‌ಗೆ ಸಿದ್ಧತೆಯ ಭಾಗವಾಗಿ ಇತರ ಆಟಗಾರರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಅವರನ್ನು ಕೈಬಿಡಲು ಬಯಸುವುದಾಗಿ ಬಿಸಿಸಿಐ (BCCI) ಆಯ್ಕೆ ಸಮಿತಿಯು ಈ ಹಿರಿಯ ಬ್ಯಾಟರ್‌ಗೆ ತಿಳಿಸಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದಾಗ್ಯೂ, ಅವರು ಆ ಊಹಾಪೋಹಗಳಿಗೆ ತೆರೆ ಎಳೆಯುವಂತೆ ಉತ್ತಮ ಪ್ರದರ್ಶನ ನೀಡಿದ್ದಾರೆ.

ರೋಹಿತ್ ಅವರ ಮಾಜಿ ಸಹ ಆಟಗಾರ ಅಜಿಂಕ್ಯ ರಹಾನೆ, ಭಾರತದ ಮಾಜಿ ನಾಯಕನೊಂದಿಗೆ ಸ್ಪಷ್ಟವಾಗಿ ಸಂವಹನ ನಡೆಸಬೇಕು. 'ರೋಹಿತ್ ಶರ್ಮಾ ಅವರು 2027ರ ವಿಶ್ವಕಪ್ ಆಡಲಿದ್ದಾರೆ ಎಂದು ಅವರಿಗೆ ತಿಳಿಸುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ' ಎಂದು ರಹಾನೆ 'ದಿ ಇಂಡಿಯನ್ ಎಕ್ಸ್‌ಪ್ರೆಸ್'ಗೆ ತಿಳಿಸಿದ್ದಾರೆ.

Ajinkya Rahane -Rohit Sharma
ರೋಹಿತ್ ಶರ್ಮಾ ತಂಟೆಗೆ ಬಂದ ಅಜಿತ್ ಅಗರ್ಕರ್ ಹುದ್ದೆಗೆ ಕುತ್ತು; ಮುಖ್ಯ ಆಯ್ಕೆದಾರರಾಗಿ ಭಾರತದ ದಿಗ್ಗಜ ಆಟಗಾರ ಎಂಟ್ರಿ?

'ಇಷ್ಟು ವರ್ಷಗಳಲ್ಲಿ ಅವರ ಕೊಡುಗೆಯನ್ನು ಗಮನಿಸಿದರೆ, ಅದು ಅದ್ಭುತವಾಗಿದೆ. ಹಾಗಾಗಿ ವಿಶ್ವಕಪ್‌ನಲ್ಲಿ ಅಂತಹ ಆಟಗಾರನ ಅನುಭವದ ಅಗತ್ಯವಿದೆ. ಈ ಬಗ್ಗೆ ಚರ್ಚೆಯೇ ನಡೆಯಬಾರದು. 'ರೋಹಿತ್ ಶರ್ಮಾ, ನೀವು ಆಡಲಿದ್ದೀರಿ' ಎಂದು ಒಮ್ಮೆ ಹೇಳಿದರೆ ಸಾಕು. ಅವರು ದೊಡ್ಡ ಆಟಗಾರರಾಗಿರುವುದರಿಂದ, ಸರಣಿಯಿಂದ ಸರಣಿಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ' ಎಂದು ಅವರು ಹೇಳಿದರು.

'ಕ್ರಿಕೆಟ್‌ನಲ್ಲಿನ ಪ್ರದರ್ಶನವು ಲಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚು ಅವಲಂಬಿಸಿರುತ್ತದೆ. ಅನುಭವಿ ಆಟಗಾರನಿಗೂ ಸಹ ಮಾನಸಿಕವಾಗಿ ನಿರಾಳವಾಗಿರುವುದು ಮತ್ತು ಉತ್ತಮ ಲಯದಲ್ಲಿರುವುದು ಅಗತ್ಯವಾಗಿರುತ್ತದೆ. ಆಟಗಾರನೊಂದಿಗೆ ಕಳಪೆಯಾಗಿ ವರ್ತಿಸಿದರೆ ಅಥವಾ ಅವರ ಮೇಲೆ ಒತ್ತಡ ಹೇರಿದರೆ, ಅದು ಅವರ ಲಯದ ಮೇಲೆ ಪರಿಣಾಮ ಬೀರಬಹುದು. ಆದರೆ ಅವರ ಮನಸ್ಸು ಮುಕ್ತ ಮತ್ತು ಆತ್ಮವಿಶ್ವಾಸದಿಂದ ಕೂಡಿದ್ದಾಗ, ಅವರು ಸಹಜವಾಗಿ ಆಡಲು ಮತ್ತು ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ. ರೋಹಿತ್ ಅವರ ಗುಣಮಟ್ಟದ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ತಂಡದಲ್ಲಿ ಅಂತಹ ಅನುಭವದ ಅಗತ್ಯವಿದೆ. ಆದ್ದರಿಂದ ಈ ಚರ್ಚೆ ತಂಡದ ಆಡಳಿತ ಮತ್ತು ನಾಯಕನ ನಡುವೆ ನಡೆಯಬಾರದು. ಅಗರ್ ಉಂಕೋ ಖೇಲ್ನಾ ಹೈ 2027 ವಿಶ್ವಕಪ್, ತೋ ಉಂಕೋ ಖೇಲ್ನಾ ಹೈ. (ಅವರು 2027 ವಿಶ್ವಕಪ್‌ನಲ್ಲಿ ಆಡಲು ಬಯಸಿದರೆ, ಅವರು ಆಡಬೇಕು)' ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com