ಕ್ರಿಕೆಟ್: ಮೈದಾನದಲ್ಲೇ ಜೈಸ್ವಾಲ್-ಅಸಿತ ಫೆರ್ನಾಂಡೊ ಕಿರಿಕ್: ಟೀಂ ಇಂಡಿಯಾ ಓಪನರ್‌ಗೆ ಭಾರೀ ಶಿಕ್ಷೆ ಸಾಧ್ಯತೆ!

ಮೊದಲ ಇನಿಂಗ್ಸ್‌ನಲ್ಲಿ ಜೈಸ್ವಾಲ್ 45 ರನ್ ಗಳಿಸಿದ್ದಾಗ ಫೆರ್ನಾಂಡೊ ಅವರ ಎಸೆತದಲ್ಲಿ ಔಟಾದರು. ಅರ್ಧಶತಕ ವಂಚಿತರಾದ ಜೈಸ್ವಾಲ್ ಪೆವಿಲಿಯನ್‌ನತ್ತ ಹೆಜ್ಜೆ ಹಾಕುತ್ತಿದ್ದರು.
Yashasvi Jaiswal Clash with Lanka Players
ಜೈಸ್ವಾಲ್ ಮತ್ತು ಶ್ರೀಲಂಕಾ ಆಟಗಾರರ ನಡುವೆ ಕಿರಿಕ್
Updated on

ಕೊಲಂಬೊ: ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ ಟೀಂ ಇಂಡಿಯಾ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಹಾಗೂ ಶ್ರೀಲಂಕಾ ವೇಗಿ ಅಸಿತ ಫೆರ್ನಾಂಡೊ ನಡುವೆ ಮೈದಾನದಲ್ಲೇ ತೀವ್ರ ವಾಗ್ವಾದ ನಡೆದಿದೆ.

ಈ ಘಟನೆ ಇದೀಗ ಜೈಸ್ವಾಲ್ ವಿರುದ್ಧ ಕಠಿಣ ಶಿಸ್ತು ಕ್ರಮದ ಸಾಧ್ಯತೆಯನ್ನು ಹುಟ್ಟುಹಾಕಿದೆ. ಮೊದಲ ಇನಿಂಗ್ಸ್‌ನಲ್ಲಿ ಜೈಸ್ವಾಲ್ 45 ರನ್ ಗಳಿಸಿದ್ದಾಗ ಫೆರ್ನಾಂಡೊ ಅವರ ಎಸೆತದಲ್ಲಿ ಔಟಾದರು. ಅರ್ಧಶತಕ ವಂಚಿತರಾದ ಜೈಸ್ವಾಲ್ ಪೆವಿಲಿಯನ್‌ನತ್ತ ಹೆಜ್ಜೆ ಹಾಕುತ್ತಿದ್ದರು.

ಆದರೆ ಫೆರ್ನಾಂಡೊ ತಮ್ಮ ಸಹ ಆಟಗಾರರೊಂದಿಗೆ ವಿಕೆಟ್ ಸಂಭ್ರಮಾಚರಣೆ ಮಾಡುತ್ತಿದ್ದುದನ್ನು ಕಂಡು ಜೈಸ್ವಾಲ್ ಏಕಾಏಕಿ ಗರಂ ಆಗಿ ಹಿಂತಿರುಗಿ ಅವರತ್ತ ಸಾಗಿದರು.

ಇಬ್ಬರೂ ಪರಸ್ಪರ ಮಾತಿನ ಚಕಮಕಿ ನಡೆಸಿದ್ದು, ಪರಿಸ್ಥಿತಿ ಕೆಲವೇ ಕ್ಷಣಗಳಲ್ಲಿ ಉದ್ವಿಗ್ನಗೊಂಡಿತು. ಇಬ್ಬರೂ ಒಬ್ಬರನ್ನೊಬ್ಬರು ಎದುರು ನಿಂತು ಆಕ್ರಮಣಕಾರಿಯಾಗಿ ಮುನ್ನುಗ್ಗಿದಾಗ ಶ್ರೀಲಂಕಾ ಆಟಗಾರರು ಹಾಗೂ ಮೈದಾನದ ಅಂಪೈರ್‌ಗಳು ಮಧ್ಯಪ್ರವೇಶಿಸಿ ಅವರನ್ನು ಬೇರ್ಪಡಿಸಿದರು.

ಕ್ರೀಸ್‌ನಲ್ಲಿದ್ದ ಮತ್ತೊಬ್ಬ ಭಾರತೀಯ ಬ್ಯಾಟರ್ ದೇವದತ್ ಪಡಿಕ್ಕಲ್, ಜೈಸ್ವಾಲ್ ಅವರನ್ನು ಡ್ರೆಸ್ಸಿಂಗ್ ರೂಮ್‌ಗೆ ವಾಪಸ್ ತೆರಳುವಂತೆ ಮನವೊಲಿಸಲು ಪ್ರಯತ್ನಿಸಿದರು. ಆದರೂ ಜೈಸ್ವಾಲ್ ಫೆರ್ನಾಂಡೊ ಕಡೆಗೆ ಸಾಗುತ್ತಲೇ ಇದ್ದರು.

Yashasvi Jaiswal Clash with Lanka Players
ಟೆಸ್ಟ್ ಕ್ರಿಕೆಟ್​ನಲ್ಲಿ ಮಿಂಚಿದ ಕನ್ನಡಿಗ: ಶ್ರೀಲಂಕಾ ವಿರುದ್ಧ ಮತ್ತೆ ಅಬ್ಬರಿಸಿದ ದೇವದತ್ ಪಡಿಕ್ಕಲ್; ಮತ್ತೊಂದು ಶತಕ!

ಜೈಸ್ವಾಲ್‌ಗೆ ನಿಷೇಧದ ಭೀತಿ ಏಕೆ?

ವಾಗ್ವಾದದ ವೇಳೆ ಜೈಸ್ವಾಲ್ ಫೆರ್ನಾಂಡೊ ಅವರ ತಲೆಗೆ ತಲೆ ತಾಗಿಸಿದಂತೆ ಕಂಡುಬಂದಿರುವುದು. ಇದೀಗ ಪ್ರಮುಖ ವಿಚಾರವಾಗಿದೆ. ಈ ಘಟನೆ ಗಂಭೀರ ಉಲ್ಲಂಘನೆ ಎಂದು ಪರಿಗಣಿಸಲ್ಪಟ್ಟರೆ ಜೈಸ್ವಾಲ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬಹುದು.

Level 4 ಉಲ್ಲಂಘನೆ ಎಂದು ಪರಿಗಣಿಸಲ್ಪಟ್ಟರೆ ಐದು ಟೆಸ್ಟ್‌ಗಳು ಅಥವಾ 10 ಏಕದಿನ ಪಂದ್ಯಗಳ ನಿಷೇಧದಿಂದ ಹಿಡಿದು ಜೀವಾವಧಿ ನಿಷೇಧದವರೆಗೂ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಆಟಗಾರರು, ಪಂದ್ಯ ಅಧಿಕಾರಿಗಳು ಅಥವಾ ಪ್ರೇಕ್ಷಕರ ವಿರುದ್ಧ ಗಂಭೀರ ಹಿಂಸಾಚಾರ, ಬೆದರಿಕೆ ಅಥವಾ ನಿಂದನಾತ್ಮಕ ವರ್ತನೆ Level 4 ಉಲ್ಲಂಘನೆಗಳ ವ್ಯಾಪ್ತಿಗೆ ಬರುತ್ತದೆ. ಆದರೆ ಘಟನೆ ಯಾವ ಮಟ್ಟದ ಉಲ್ಲಂಘನೆಗೆ ಸೇರುತ್ತದೆ ಎಂಬುದು ಪಂದ್ಯದ ಅಧಿಕಾರಿಗಳ ವರದಿ ಹಾಗೂ ಸಂಬಂಧಿತ ಶಿಸ್ತು ಪ್ರಕ್ರಿಯೆಯ ಬಳಿಕವೇ ನಿರ್ಧಾರವಾಗಲಿದೆ.

ಇದೇ ಮೊದಲೇನಲ್ಲ

ಮೈದಾನದಲ್ಲಿ ಜೈಸ್ವಾಲ್ ಈ ರೀತಿಯ ವಾಗ್ವಾದದಲ್ಲಿ ಸಿಲುಕಿರುವುದು ಇದೇ ಮೊದಲಲ್ಲ. 2022ರ ದುಲೀಪ್ ಟ್ರೋಫಿ ವೇಳೆ ದಕ್ಷಿಣ ವಲಯದ ಟಿ. ರವಿ ತೇಜಾ ಅವರೊಂದಿಗೆ ಜೈಸ್ವಾಲ್ ವಾಗ್ವಾದ ನಡೆಸಿದ್ದರು. ಅಂಪೈರ್ ಹಲವು ಬಾರಿ ಎಚ್ಚರಿಕೆ ನೀಡಿದರೂ ಪರಿಸ್ಥಿತಿ ಮುಂದುವರಿದಿತ್ತು.

ಆಗ ಪಶ್ಚಿಮ ವಲಯದ ನಾಯಕ ಅಜಿಂಕ್ಯ ರಹಾನೆ ಮಧ್ಯಪ್ರವೇಶಿಸಿ ಜೈಸ್ವಾಲ್ ಅವರನ್ನು ಡ್ರೆಸ್ಸಿಂಗ್ ರೂಮ್‌ಗೆ ಕಳುಹಿಸಿದ್ದರು. ಈ ಬಾರಿ ಶ್ರೀಲಂಕಾ ವಿರುದ್ಧದ ಟೆಸ್ಟ್‌ನಲ್ಲಿ ನಡೆದ ಘಟನೆಗೆ ಯಾವ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದು ಕ್ರಿಕೆಟ್ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com