

ಕೊಲಂಬೋ: ಶ್ರೀಲಂಕಾ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಭಾರತ ತಂಡ ಭರ್ಜರಿ ಸ್ಥಿತಿಯಲ್ಲಿದ್ದು, ಈ ನಡುವೆ ಈಗಾಗಲೇ ಪಂದ್ಯ ಶ್ರೀಲಂಕಾ ತಂಡದಿಂದ ಕೈ ಜಾರಿ ಹೋಗಿದೆ ಎಂದು ಖ್ಯಾತ ವೀಕ್ಷಕ ವಿಶ್ಲೇಷಕ ಹರ್ಷಾ ಭೋಗ್ಲೆ ಅಭಿಪ್ರಾಯಪಟ್ಟಿದ್ದಾರೆ.
ಕೊಲಂಬೋದ ಸಿಂಹಳೀಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ರಿಷಭ್ ಪಂತ್ ಅವರ ಕೆಚ್ಚೆದೆಯ ಹೋರಾಟ ಹಾಗೂ ಧ್ರುವ್ ಜುರೇಲ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಭಾರತ 9 ವಿಕೆಟ್ ಕಳೆದುಕೊಂಡು 503 ರನ್ ಗಳಿಸಿದ್ದಾಗ ತನ್ನ ಮೊದಲ ಇನ್ನಿಂಗ್ಸ್ ಅನ್ನು ಡಿಕ್ಲೇರ್ ಮಾಡಿಕೊಂಡಿತು.
ಇನ್ನು ಇದೇ ಪಂದ್ಯದ ಕುರಿತು ಅಚ್ಚರಿ ಅಂಶ ಬಹಿರಂಗಪಡಿಸಿರುವ ಖ್ಯಾತ ಕ್ರಿಕೆಟ್ ಕಾಮೆಂಟೇಟರ್ ಹರ್ಷ ಭೋಗ್ಲೆ, ಪಂದ್ಯದ ಮೊದಲ ಅವಧಿಯೇ ಶ್ರೀಲಂಕಾದ ಕೈಯಿಂದ ಪಂದ್ಯ ಜಾರಲು ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
2ನೇ ಟೆಸ್ಟ್ ಪಂದ್ಯ ಕೂಡ ಶ್ರೀಲಂಕಾ ಕೈ ಜಾರಿ ಹೋಗಿದೆ'
"ಈ ಟೆಸ್ಟ್ ಪಂದ್ಯ ಮುಗಿದಾಗ, ಮೊದಲ ಅವಧಿಯನ್ನೇ ಶ್ರೀಲಂಕಾದಿಂದ ಪಂದ್ಯ ನಿರ್ಣಾಯಕವಾಗಿ ದೂರ ಸರಿದ ಹಂತ ಎಂದು ನಾವು ನೆನಪಿಸಿಕೊಳ್ಳಬಹುದು. ಪಂತ್ ತಂತ್ರಗಾರಿಕೆಯಲ್ಲಿ ಚಾಣಾಕ್ಷವಾಗಿ ಆಡಿದ್ದಾರೆ. ಜುರೇಲ್ ಯಾವುದೇ ತಪ್ಪಿಲ್ಲದೆ ಬ್ಯಾಟ್ ಬೀಸಿದ್ದಾರೆ," ಎಂದು ಭೋಗ್ಲೆ ಹೇಳಿದ್ದಾರೆ.
ಪಡಿಕ್ಕಲ್ ಶತಕಕ್ಕೂ ಭೋಗ್ಲೆ ಮೆಚ್ಚುಗೆ
ಇದಕ್ಕೂ ಮುನ್ನ ಶತಕ ಸಿಡಿಸಿದ್ದ ದೇವದತ್ತ ಪಡಿಕ್ಕಲ್ ಅವರ ಬ್ಯಾಟಿಂಗ್‌ಗೂ ಹರ್ಷ ಭೋಗ್ಲೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. "ಪಡಿಕ್ಕಲ್ ಅವರ ಇಂದಿನ ಶತಕ ಬಹಳ ವಿಭಿನ್ನವಾಗಿದೆ.
ಆರಂಭದಲ್ಲಿ ಅದೃಷ್ಟ ಕೈಹಿಡಿದ ಬಳಿಕ ಅವರು ತಾಳ್ಮೆಯಿಂದ ಆಡಿದರು ಮತ್ತು ಉತ್ತಮ ಮನಸ್ಥೈರ್ಯ ತೋರಿಸಿದರು. ಭಾರತಕ್ಕೆ ಒಬ್ಬ ಅತ್ಯುತ್ತಮ ಆಟಗಾರ ಸಿಕ್ಕಿದ್ದಾನೆ. ಮುಂದಿನ ದಿನಗಳಲ್ಲಿ ಸವಾಲುಗಳು ಎದುರಾಗಲಿವೆ. ಆದರೆ ಸದ್ಯಕ್ಕೆ ನಮ್ಮ ಬಳಿ ಇರುವ ಈ ಪ್ರತಿಭೆಯನ್ನು ಗುರುತಿಸುವ ಸಮಯ" ಎಂದು ಅವರು ಹೇಳಿದ್ದರು.