

ಕೊಲಂಬೊ: ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟಕ್ಕೆ ಮಳೆ ಅಡ್ಡಿಯಾಗಿದ್ದು, ನಿಗದಿತ ಅವಧಿಗೂ ಮುನ್ನವೇ ದಿನದಾಟವನ್ನು ಅಂತ್ಯಗೊಳಿಸಲಾಯಿತು.
ಕೊಲಂಬೋದ ಸಿಂಹಳೀಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯ ನಿರ್ಣಾಯಕ ಘಟ್ಟ ತಲುಪಿದ್ದು, ಪಂದ್ಯದ ಮೇಲೆ ಭಾರತ ತನ್ನ ಹಿಡಿತ ಬಿಗಿಗೊಳಿಸಿದೆ. 4ನೇ ದಿನದಾಟ ಮುಕ್ತಾಯಕ್ಕೆ ಶ್ರೀಲಂಕಾ ತನ್ನ 2ನೇ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಕಳೆದುಕೊಂಡು ಭಾರತಕ್ಕಿಂತ 14 ರನ್‌ಗಳ ಅಲ್ಪ ಮುನ್ನಡೆ ಸಾಧಿಸಿದೆ.
ಭಾರತ ಮೊದಲ ಇನಿಂಗ್ಸ್‌ನಲ್ಲಿ 503/9ಕ್ಕೆ ಡಿಕ್ಲೇರ್ ಮಾಡಿಕೊಂಡಿತ್ತು. ಧ್ರುವ್ ಜುರೆಲ್ ಅವರ ಶತಕ, ದೇವದತ್ ಪಡಿಕ್ಕಲ್ ಅವರ ಭರ್ಜರಿ ಬ್ಯಾಟಿಂಗ್ ಹಾಗೂ ಶುಭಮನ್ ಗಿಲ್ ಅವರ ಅರ್ಧಶತಕದ ನೆರವಿನಿಂದ ಭಾರತ ಬೃಹತ್ ಮೊತ್ತ ಕಲೆಹಾಕಿತ್ತು.
290ರನ್ ಗೆ ಶ್ರೀಲಂಕಾ ಆಲೌಟ್
ಭಾರತದ ಬೃಹತ್ ಮೊತ್ತಕ್ಕೆ ಉತ್ತರವಾಗಿ ಶ್ರೀಲಂಕಾ ತನ್ನ ಮೊದಲ ಇನಿಂಗ್ಸ್‌ನಲ್ಲಿ 290 ರನ್‌ಗಳಿಗೆ ಆಲೌಟ್ ಆಯಿತು. ಪರಿಣಾಮವಾಗಿ 213 ರನ್‌ಗಳ ಹಿನ್ನಡೆ ಅನುಭವಿಸಿದ ಶ್ರೀಲಂಕಾ ಫಾಲೋಆನ್‌ಗೆ ಒಳಗಾಯಿತು.
ಆದರೆ ಎರಡನೇ ಇನಿಂಗ್ಸ್‌ನಲ್ಲಿ ಆತಿಥೇಯ ತಂಡ ಭಾರತದ ಬೌಲರ್‌ಗಳಿಗೆ ಪ್ರಬಲ ಪ್ರತಿರೋಧ ಒಡ್ಡಿತು. ಆರಂಭಿಕ ಆಘಾತಗಳ ನಡುವೆಯೂ ಶ್ರೀಲಂಕಾದ ಬ್ಯಾಟರ್‌ಗಳು ಎಚ್ಚರಿಕೆಯಿಂದ ಬ್ಯಾಟ್ ಬೀಸುತ್ತಾ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.
ಲಂಕಾ ಪರ 2ನೇ ಇನ್ನಿಂಗ್ಸ್ ನಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಲಹಿರು ಉದಾರ ಕೇವಲ 3 ರನ್ ಗಳಿಸಿ ಸಿರಾಜ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು. ಆ ಮೂಲಕ ಲಂಕಾಗೆ ಆರಂಭಿಕ ಆಘಾತ ಎದುರಾಯಿತು. ಈ ವೇಳೆ ಜೊತೆಗೂಡಿದ ಕಮಿಲ್ ಮಿಶಾರಾ ಮತ್ತು ಪಸುಂದು ಸೋಯಿರಬಂದಾರ ಲಂಕಾವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.
2ನೇ ವಿಕೆಟ್ ಗೆ ಈ ಜೋಡಿ 58 ರನ್ ಗಳ ಜೊತೆಯಾಟವಾಡಿತು. ಈ ಹಂತದಲ್ಲಿ 32 ರನ್ ಗಳಿಸಿ ಭರವಸೆ ಮೂಡಿಸಿದ್ದ ಕಮಿಲ್ ಮಿಶಾರಾ ಭಾರತದ ರವೀಂದ್ರ ಜಡೇಜಾ ಬೌಲಿಂಗ್ ನಲ್ಲಿ ಎಲ್ ಬಿ ಬಲೆಗೆ ಬಿದ್ದರು.
ಕಮಿಂದು ಮೆಂಡಿಸ್-ಪಸುಂದು ಸೋಯಿರಬಂದಾರ ಜುಗಲ್ ಬಂದಿ
ಮಿಶಾರಾ ಔಟಾದ ಬಳಿಕ ಜೊತೆಗೂಡಿದ ಕಮಿಂದು ಮೆಂಡಿಸ್-ಪಸುಂದು ಸೋಯಿರಬಂದಾರ ಲಂಕಾ ಇನ್ನಿಂಗ್ಸ್ ಗೆ ಜೀವ ತುಂಬಿದರು.
3ನೇ ವಿಕೆಟ್ ಗೆ ಈ ಜೋಡಿ ಬರೊಬ್ಬರಿ 115 ರನ್ ಗಳ ಅಮೋಘ ಜೊತೆಯಾಟವಾಡಿತು. ಪಸುಂದು ಸೋಯಿರಬಂದಾರ (92) ಹಾಗೂ ಕಮಿಂದು ಮೆಂಡಿಸ್ (55) ಭಾರತೀಯ ಬೌಲರ್ ಗಳನ್ನು ಆತ್ಮವಿಶ್ವಾಸದಿಂದಲೇ ಎದುರಿಸಿ ಲಂಕಾ ಇನ್ನಿಂಗ್ಸ್ ಅನ್ನು ಮೇಲೆತ್ತಿದರು.
ಈ ಕಮಿಂದು ಮೆಂಡಿಸ್ ಔಟಾದ ಬಳಿಕ ಕ್ರೀಸ್ ಗೆ ಬಂದ ಧನಂಜಯ ಡಿಸಿಲ್ವಾ 23 ರನ್ ಗಳಿಸಿದರೆ, ಪಸಿಂದು 92 ರನ್ ಗಳಿಸಿ ಮಾನವ್ ಸುತಾರ್ ಬೌಲಿಂಗ್ ನಲ್ಲಿ ಔಟಾದರು.
ಅಷ್ಟು ಹೊತ್ತಿಗಾಗಲೇ ಭಾರತ ಪಡೆದಿದ್ದ ಮುನ್ನಡೆಯನ್ನು ಹಂತಹಂತವಾಗಿ ಅಳಿಸಿಹಾಕಿದ ಶ್ರೀಲಂಕಾ ಅಂತಿಮವಾಗಿ ಭಾರತವನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಯಿತು. ಡಿಕ್ವೆಲ್ಲಾ 6 ರನ್ ಗಳಿಸಿ ಔಟಾದರು.
ಲಂಕಾ ವೇಗಕ್ಕೆ ಕಡಿವಾಣ ಹಾಕಿದ ಮಾನವ್ ಸುತಾರ್
ಇನ್ನು ಭಾರತದ ಪರ ಮಾನವ್ ಸುತಾರ್ ಪ್ರಮುಖ ವಿಕೆಟ್ ಕಬಳಿಸುವ ಮೂಲಕ ಆತಿಥೇಯರ ರನ್ ವೇಗಕ್ಕೆ ಕಡಿವಾಣ ಹಾಕಿದರು. ಆದರೂ ಶ್ರೀಲಂಕಾ ಬ್ಯಾಟರ್‌ಗಳ ಹೋರಾಟದಿಂದಾಗಿ ಪಂದ್ಯ ಮತ್ತೆ ಸಮಬಲದತ್ತ ಸಾಗಿತು.
4ನೇ ದಿನದಾಟಕ್ಕೆ ಮಳೆ ಅಡ್ಡಿ
ಇದರ ನಡುವೆ ಮಳೆ ಸುರಿಯಲಾರಂಭಿಸಿದ್ದರಿಂದ ಅಂಪೈರ್‌ಗಳು ಆಟವನ್ನು ಸ್ಥಗಿತಗೊಳಿಸಿದರು. ಬಳಿಕ ಪರಿಸ್ಥಿತಿ ಸುಧಾರಿಸದ ಹಿನ್ನೆಲೆಯಲ್ಲಿ ನಾಲ್ಕನೇ ದಿನದಾಟವನ್ನು ಮುಕ್ತಾಯಗೊಳಿಸಲಾಯಿತು. ದಿನದಾಟದ ಅಂತ್ಯಕ್ಕೆ ಶ್ರೀಲಂಕಾ 6 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿದ್ದು, 7 ರನ್ ಗಳಿಸಿರುವ ಸೋನಲ್ ದಿನುಶಾ ಮತ್ತು 3 ರನ್ ಗಳಿಸಿರುವ ಕೆಶಾರಾ ನುವಾಂತ ಅಂತಿಮ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ನಿರ್ಣಾಯಕ 5ನೇ ದಿನ
ಇದೀಗ ಐದನೇ ಹಾಗೂ ಅಂತಿಮ ದಿನ ಪಂದ್ಯದ ಫಲಿತಾಂಶ ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಶ್ರೀಲಂಕಾ ತನ್ನ ಮುನ್ನಡೆಯನ್ನು ಮತ್ತಷ್ಟು ವಿಸ್ತರಿಸಿ ಭಾರತಕ್ಕೆ ಸವಾಲಿನ ಗುರಿ ನೀಡಲು ಎದುರು ನೋಡುತ್ತಿದ್ದರೆ, ಭಾರತ ಉಳಿದ ವಿಕೆಟ್‌ಗಳನ್ನು ಬೇಗನೆ ಕಬಳಿಸಿ ಗೆಲುವಿನತ್ತ ಹೆಜ್ಜೆ ಇಡಲು ಪ್ರಯತ್ನಿಸಲಿದೆ. ಮಳೆ ಮತ್ತೆ ಅಡ್ಡಿಯಾಗದಿದ್ದರೆ, ಕೊನೆಯ ದಿನ ಕೊಲಂಬೊದಲ್ಲಿ ರೋಚಕ ಕದನ ನಿರೀಕ್ಷಿಸಲಾಗಿದೆ.