RCB ಮಾರಾಟ ಪ್ರಕ್ರಿಯೆ ಅಧಿಕೃತವಾಗಿ ಆರಂಭ; ಪ್ರಾಂಚೈಸಿ ಮೌಲ್ಯ ಬರೋಬ್ಬರಿ ₹18,000 ಕೋಟಿಗೂ ಅಧಿಕ
ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಾರಾಟ ಮಾಡುವ ಬಗ್ಗೆ ಮಾತುಗಳು ಕೇಳಿಬರುತ್ತಿದ್ದವು. ಆದರೆ, ಇದೀಗ ನಿಜವಾದ ಪ್ರಕ್ರಿಯೆ ಆರಂಭವಾಗಿದೆ. ಆರ್‌ಸಿಬಿ ಮಾಲೀಕರಾದ ಡಿಯಾಜಿಯೊ, ಆಸಕ್ತ ಖರೀದಿದಾರರೊಂದಿಗೆ ವಿವರವಾದ ದಾಖಲೆಗಳನ್ನು ಹಂಚಿಕೊಳ್ಳುವ ಮೂಲಕ ಅತ್ಯಂತ ಜನಪ್ರಿಯ ಮತ್ತು ಮೌಲ್ಯಯುತ ಐಪಿಎಲ್ ತಂಡಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಾರಾಟ ಮಾಡುವ ಪ್ರಕ್ರಿಯೆಯನ್ನು ಅಧಿಕೃತವಾಗಿ ಪ್ರಾರಂಭಿಸಿದ್ದು, ಇದು ಲೀಗ್‌ನಲ್ಲಿ ಪ್ರಮುಖ ಬೆಳವಣಿಗೆಯಾಗಿದೆ.
ಈ ಬೆಳವಣಿಗೆಯನ್ನು ಜರ್ನಲ್ ಆಫ್ ದಿ ಬ್ಯುಸಿನೆಸ್ ಆಫ್ ಸ್ಪೋರ್ಟ್ಸ್ ಆದ ಸ್ಪೋರ್ಟಿಕೊ ವರದಿ ಮಾಡಿದೆ. ಮೂಲದ ಪ್ರಕಾರ, ಡಿಯಾಜಿಯೊ - ತನ್ನ ಭಾರತೀಯ ಅಂಗಸಂಸ್ಥೆಯಾದ ಯುನೈಟೆಡ್ ಸ್ಪಿರಿಟ್ಸ್ ಮೂಲಕ ಆರ್‌ಸಿಬಿ ಮಾರಾಟದ ಬಗ್ಗೆ ವಿವರವಾದ ಹಣಕಾಸು ಮತ್ತು ಕಾರ್ಯಾಚರಣೆಯ ದಾಖಲೆಗಳನ್ನು ('ಪುಸ್ತಕಗಳು') ಸಂಭಾವ್ಯ ಖರೀದಿದಾರರೊಂದಿಗೆ ಹಂಚಿಕೊಂಡಿದೆ. ಬೈಂಡಿಂಗ್ ಬಿಡ್ ಟೈಮ್‌ಲೈನ್‌ಗೆ ಇನ್ನೂ ಸಮಯ ತೆಗೆದುಕೊಳ್ಳಬಹುದು. ಆದರೆ, ಕಳೆದ ವರ್ಷದ ಕೊನೆಯಲ್ಲಿ ಘೋಷಿಸಲಾದ ಆರ್‌ಸಿಬಿ ಮಾರಾಟ ಪ್ರಕ್ರಿಯೆಯು ಇದೀಗ ಸಕ್ರಿಯವಾಗಿದೆ.
ಕಾನ್ಫಿಡೆನ್ಶಿಯಲ್ ಇನ್‌ಫರ್ಮೇಶನ್ ಮೆಮೋರಂಡಮ್ (CIM) ಕಂಪನಿಯನ್ನು ಮಾರಾಟ ಮಾಡಲು ಪ್ರಾಥಮಿಕ ಮಾರ್ಕೆಟಿಂಗ್ ದಾಖಲೆಯಾಗಿ ಬಳಸಲಾಗುತ್ತದೆ. ಇದು 30 ರಿಂದ 150 ಪುಟಗಳನ್ನು ಹೊಂದಿರುವ ಸಮಗ್ರ ವರದಿಯಾಗಿದ್ದು, ಸಂಭಾವ್ಯ ಖರೀದಿದಾರರಿಗೆ ವ್ಯವಹಾರವನ್ನು ಮೌಲ್ಯಮಾಪನ ಮಾಡಲು ಮತ್ತು ಆರಂಭಿಕ ಬಿಡ್ ಸಲ್ಲಿಸಲು ಅಗತ್ಯವಿರುವ ವಿವರವಾದ ಮಾಹಿತಿ ಒದಗಿಸುತ್ತದೆ.
ಐಪಿಎಲ್ 2025ರಲ್ಲಿ ಚೊಚ್ಚಲ ಪ್ರಶಸ್ತಿ ಗೆಲುವಿನ ನಂತರ ಆರ್‌ಸಿಬಿಯ ಮೌಲ್ಯಮಾಪನವು $2 ಬಿಲಿಯನ್‌ಗೆ ಹತ್ತಿರದಲ್ಲಿದೆ ಎಂದು ವರದಿಗಳು ತಿಳಿಸಿವೆ. ಇದು ಸರಿಸುಮಾರು ₹1,800 ಕೋಟಿಗೂ ಹೆಚ್ಚು ಎಂದು ಹೇಳಲಾಗಿದೆ.
ಈ ವ್ಯವಹಾರಕ್ಕಾಗಿ ಯುನೈಟೆಡ್ ಸ್ಪಿರಿಟ್ಸ್ ಕಂಪನಿಯು ಸಿಟಿಗ್ರೂಪ್ ಅನ್ನು ತನ್ನ ಸಲಹೆಗಾರರನ್ನಾಗಿ ನೇಮಿಸಿದೆ. ಇದು ಖಾಸಗಿ ಇಕ್ವಿಟಿ ಸಂಸ್ಥೆಗಳು, ಹೂಡಿಕೆದಾರರು ಮತ್ತು ಹೆಚ್ಚಿನ ನಿವ್ವಳ ಮೌಲ್ಯದ ವ್ಯಕ್ತಿಗಳಿಂದ ಆಸಕ್ತಿ ಸೆಳೆಯುವ ನಿರೀಕ್ಷೆಯಿದ್ದು, ಈ ಪ್ರಕ್ರಿಯೆಯು ಮಾರ್ಚ್ ಅಂತ್ಯದ ವೇಳೆಗೆ ಮುಕ್ತಾಯಗೊಳ್ಳುವ ಸಾಧ್ಯತೆಯಿದೆ. ಐಪಿಎಲ್ 2026ನೇ ಆವೃತ್ತಿಯು ಮಾರ್ಚ್ 26 ರಂದು ಪ್ರಾರಂಭವಾಗಲಿದೆ.
ಆರ್‌ಸಿಬಿ ಮಾರಾಟ ವಿಚಾರದಲ್ಲಿ ಈಗಾಗಲೇ ಭಾರತದ ಕೆಲವು ಪ್ರಭಾವಿಗಳ ಹೆಸರು ಕೇಳಿಬಂದಿದೆ. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆಧಾರ್ ಪೂನಾವಾಲಾ ಅವರು ಫ್ರಾಂಚೈಸಿಗಾಗಿ 'ಬಲವಾದ ಮತ್ತು ಸ್ಪರ್ಧಾತ್ಮಕ ಬಿಡ್' ಸಲ್ಲಿಸುವುದಾಗಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಆದರೂ, ಇನ್ನೂ ಔಪಚಾರಿಕ ಬಿಡ್ ಸಲ್ಲಿಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಬಾಲಿವುಡ್ ನಟಿ ಮತ್ತು ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಮತ್ತು ರಣಬೀರ್ ಕಪೂರ್ ಇದರ ಚರ್ಚೆಗಳಲ್ಲಿ ಭಾಗಿಯಾಗಿದ್ದಾರೆಂದು ತಿಳಿದುಬಂದಿದೆ. ಅನುಷ್ಕಾ ಶರ್ಮಾ ₹400 ಕೋಟಿ ಮೌಲ್ಯದ ಶೇ 3 ರಷ್ಟು ಪಾಲನ್ನು ಖರೀದಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ. ಆದರೆ, ರಣಬೀರ್ ಕಪೂರ್ ಅವರ ಹೂಡಿಕೆ ಶೇ 2ರಷ್ಟು ಎಂದು ಹೇಳಲಾಗಿದೆ. ಕಪೂರ್ ಈಗಾಗಲೇ ಐಎಸ್‌ಎಲ್ ತಂಡ ಮುಂಬೈ ಸಿಟಿ ಎಫ್‌ಸಿಯಲ್ಲಿ ಹೂಡಿಕೆದಾರರಾಗಿ ಅನುಭವ ಹೊಂದಿದ್ದಾರೆ.
2007ರಲ್ಲಿ, ಬಿಸಿಸಿಐ ಆಟಗಾರರು ಐಪಿಎಲ್ ತಂಡದಲ್ಲಿ ಯಾವುದೇ ಪಾಲನ್ನು ಖರೀದಿಸುವುದನ್ನು ನಿಷೇಧಿಸಿತು. ಕೊಹ್ಲಿ ಆರ್‌ಸಿಬಿಯಲ್ಲಿ ಆಡುತ್ತಿರುವುದರಿಂದ ಅವರು ವಾಸ್ತವವಾಗಿ ಯಾವುದೇ ಮಾಲೀಕತ್ವವನ್ನು ಹೊಂದಲು ಸಾಧ್ಯವಾಗದಿರಬಹುದು. ಇದೀಗ ಅವರ ಪತ್ನಿ ಅನುಷ್ಕಾ ಇದಕ್ಕೆ ಮುಂದಾಗಿರುವುದರಿಂದ ವರದಿಗಳು ನಿಜವಾಗಿದ್ದರೆ, ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ಮಾಹಿತಿ ಹೊರಬೀಳಲಿದೆ.

