

ಗೆಲ್ಲಲೇಬೇಕಿರುವ ಜಿಂಬಾಬ್ವೆ ವಿರುದ್ಧದ ಟಿ20 ವಿಶ್ವಕಪ್ 2026ರ ಸೂಪರ್ 8 ಪಂದ್ಯದ ಹಿನ್ನೆಲೆಯಲ್ಲಿ, ಭಾರತದ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡಕ್ಕೆ ಆಫ್ರಿಕನ್ ರಾಷ್ಟ್ರವನ್ನು ಹಗುರವಾಗಿ ಪರಿಗಣಿಸಬೇಡಿ ಮತ್ತು ತಂಡವು ಎಂದಿನಂತೆ ಆಕ್ರಮಣಕಾರಿ ಮತ್ತು ಆತ್ಮವಿಶ್ವಾಸದ ಕ್ರಿಕೆಟ್ ಶೈಲಿಯನ್ನು ಮುಂದುವರಿಸಿ ಎಂದು ಸಲಹೆ ನೀಡಿದ್ದಾರೆ. ಮೊದಲ ಸೂಪರ್ 8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲು ಕಂಡ ನಂತರ, ಭಾರತವು ಕಠಿಣ ಪರಿಸ್ಥಿತಿಯಲ್ಲಿದೆ. ನಾಕೌಟ್ ತಲುಪುವ ಭರವಸೆಯನ್ನು ಜೀವಂತವಾಗಿಟ್ಟುಕೊಳ್ಳಲು ಟೀಂ ಇಂಡಿಯಾ ಇದೀಗ ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ತಮ್ಮ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಿರುವ ಒತ್ತಡಕ್ಕೆ ಸಿಲುಕಿದೆ.
'ಭಾರತ ತಂಡವು ಜಿಂಬಾಬ್ವೆ ವಿರುದ್ಧ ತಮ್ಮ ಸಹಜ, ಆಕ್ರಮಣಕಾರಿ ಕ್ರಿಕೆಟ್ ಶೈಲಿಯನ್ನು ಆಡಬೇಕಾಗಿದೆ. ಆದರೆ, ಜಿಂಬಾಬ್ವೆ ಕಠಿಣ ಎದುರಾಳಿಯಾಗಲಿದೆ ಮತ್ತು ಅವರನ್ನು ಗೌರವಿಸಬೇಕು. ಅವರು ಕೆಲವು ಬಲವಾದ ಪ್ರದರ್ಶನಗಳನ್ನು ನೀಡಿದ್ದಾರೆ. ಅವರು ಆಸ್ಟ್ರೇಲಿಯಾವನ್ನು ಸೋಲಿಸಿದರು. ಶ್ರೀಲಂಕಾ ನೆಲದಲ್ಲಿ ಶ್ರೀಲಂಕಾ ವಿರುದ್ಧ 179 ರನ್‌ಗಳನ್ನು ಬೆನ್ನಟ್ಟಿದರು' ಎಂದರು.
'ಅವರು ಆಸ್ಟ್ರೇಲಿಯಾವನ್ನು ಅದ್ಭುತವಾಗಿ ಸೋಲಿಸಿದ್ದಾರೆ. ಅವರ ಅಗ್ರ ನಾಲ್ಕು ಬ್ಯಾಟ್ಸ್‌ಮನ್‌ಗಳು ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಅವರ ಎತ್ತರದ ವೇಗದ ಬೌಲರ್‌ಗಳಾದ ಬ್ಲೆಸ್ಸಿಂಗ್ ಮುಜರಾಬಾನಿ ಮತ್ತು ಬ್ರಾಡ್ ಇವಾನ್ಸ್, ವಿಶೇಷವಾಗಿ ಪವರ್‌ಪ್ಲೇನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ' ಎಂದು ಕುಂಬ್ಳೆ ಜಿಯೋಹಾಟ್‌ಸ್ಟಾರ್‌ನಲ್ಲಿ ಹೇಳಿದರು.
ಪ್ರಸಕ್ತ ಟೂರ್ನಿಯಲ್ಲಿ ಗುಂಪು ಹಂತದ ಪಂದ್ಯಗಳಲ್ಲಿ ಅಜೇಯ ಓಟ ಮುಂದುವರಿಸಿದ್ದ ಜಿಂಬಾಬ್ವೆ, ಸೂಪರ್ 8 ಪಂದ್ಯದಲ್ಲಿ ವೆಸ್ಟ್ ವಿಂಡೀಸ್ ವಿರುದ್ಧ ಸೋಲು ಕಂಡಿತು. ಜಿಂಬಾಬ್ವೆ ಸದ್ಯ ನೆಟ್ ರನ್ ರೇಟ್‌ನಲ್ಲಿ ಭಾರತಕ್ಕಿಂತ ಹಿಂದುಳಿದಿದೆ. ಸೆಮಿಫೈನಲ್ ಪ್ರವೇಶಿಸಲು ಜಿಂಬಾಬ್ವೆ ಈಗ ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡನ್ನೂ ಸೋಲಿಸಲೇಬೇಕಿದೆ.
'ಭಾರತ ತನ್ನ ಎದುರಾಳಿಗಳನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ತಂಡವು ಅತ್ಯುತ್ತಮ ಪ್ರದರ್ಶನ ನೀಡಬೇಕು. ಯಾವುದೇ ಬ್ಯಾಟ್ಸ್‌ಮನ್ ಉತ್ತಮವಾಗಿ ಆಡಲು ಪ್ರಾರಂಭಿಸಿದರೆ, ಅವರು ಅದನ್ನು ದೊಡ್ಡ ಸ್ಕೋರ್ ಆಗಿ ಪರಿವರ್ತಿಸಬೇಕು. ಮುಂದಿನ ಬ್ಯಾಟ್ಸ್‌ಮನ್ ಆ ಕೆಲಸವನ್ನು ಮಾಡುತ್ತಾರೆ ಎಂದು ನೀವು ಊಹಿಸಲು ಸಾಧ್ಯವಿಲ್ಲ. ಟಿ20 ವಿಶ್ವಕಪ್‌ನಲ್ಲಿ, ಯಾವುದೇ ನೆಪಗಳು ಅಥವಾ ಊಹೆಗಳಿಗೆ ಅವಕಾಶವಿಲ್ಲ. ಪ್ರತಿಯೊಬ್ಬ ಆಟಗಾರನು ಜವಾಬ್ದಾರಿಯನ್ನು ತೆಗೆದುಕೊಂಡು ಪ್ರದರ್ಶನ ನೀಡಬೇಕು. ಭಾರತವು ಏನು ಮಾಡಬೇಕೋ ಅದನ್ನು ಮಾಡುವತ್ತ ಗಮನಹರಿಸಬೇಕು' ಎಂದು ಅವರು ಹೇಳಿದರು.
Advertisement