

2026ರ ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಗೆ ಸ್ಥಳಾಂತರಿಸುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಕರೆಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರೋಧಿಸಿದೆ. ಎರಡೂ ದೇಶಗಳ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಬಿಸಿಬಿ ತಮ್ಮ ಆಟಗಾರರ ಭದ್ರತೆ ಬಗ್ಗೆ ಕಳವಳ ವ್ಯಕ್ತಪಡಿಸಿ, ಪಂದ್ಯಗಳ ಸ್ಥಳಾಂತರಿಸಲು ಐಸಿಸಿ ಮೊರೆ ಹೋಗಲಿದೆ ಎನ್ನುವ ವರದಿಗಳ ನಂತರ ಇದು ಬಂದಿದೆ. ವರದಿಗಳ ಪ್ರಕಾರ, ಕೊನೆಯ ನಿಮಿಷದಲ್ಲಿ ಪಂದ್ಯಗಳನ್ನು ಬೇರೆ ಬೇರೆ ಸ್ಥಳಗಳಿಗೆ ಮರುಹೊಂದಿಸುವುದು ಆಯೋಜಕರು ಮತ್ತು ಪ್ರಸಾರ ಸಿಬ್ಬಂದಿ ಇಬ್ಬರಿಗೂ ಲಾಜಿಸ್ಟಿಕ್ ದುಃಸ್ವಪ್ನವಾಗಲಿದೆ ಎಂದು ಬಿಸಿಸಿಐ ಹೇಳಿಕೊಂಡಿದೆ.
ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಬಿಸಿಸಿಐ ಮೂಲವೊಂದು ಯಾವುದೇ ದೇಶದ ಇಚ್ಛೆಯಂತೆ ಪಂದ್ಯಗಳನ್ನು ಬದಲಿಸಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದೆ. ಬಾಂಗ್ಲಾದೇಶದೊಂದಿಗೆ ಆಡಲಿರುವ ಇತರ ತಂಡಗಳ ಬಗ್ಗೆಯೂ ಬಿಬಿಸಿ ಯೋಚಿಸಬೇಕು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
'ಯಾರದೋ ಇಚ್ಛೆಯಂತೆ ಪಂದ್ಯಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಪಂದ್ಯಗಳನ್ನು ಸ್ಥಳಾಂತರಿಸುವುದರಿಂದ ದೊಡ್ಡ ಲಾಜಿಸ್ಟಿಕ್ ಸಮಸ್ಯೆಗಳು ಉಂಟಾಗುತ್ತವೆ. ಎದುರಾಳಿ ತಂಡಗಳು ಈಗಾಗಲೇ ತಮ್ಮ ವಿಮಾನಗಳು ಮತ್ತು ಹೋಟೆಲ್‌ಗಳನ್ನು ಬುಕ್ ಮಾಡಿವೆ. ಪ್ರತಿದಿನ ಮೂರು ಪಂದ್ಯಗಳನ್ನು ನಿಗದಿಪಡಿಸಲಾಗಿದೆ (ಶ್ರೀಲಂಕಾದಲ್ಲಿ ಒಂದು ಸೇರಿದಂತೆ) ಮತ್ತು ಪ್ರಸಾರ ತಂಡಗಳನ್ನು ಸಹ ನಿಯೋಜಿಸಲಾಗಿದೆ. ಈ ಎಲ್ಲ ಯೋಜನೆಯಿಂದಾಗಿ, ಕೊನೆಯ ನಿಮಿಷದ ಬದಲಾವಣೆಗಳನ್ನು ಮಾಡುವುದು ತುಂಬಾ ಕಷ್ಟ, ಅದು ಅಂದುಕೊಂಡಷ್ಟು ಸರಳವಲ್ಲ' ಎಂದಿದೆ.
ಐಪಿಎಲ್ 2026ರ ಆವೃತ್ತಿಗೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದಿಂದ ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೈಬಿಟ್ಟ ನಂತರ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ತನ್ನ ಟಿ20 ವಿಶ್ವಕಪ್ 2026 ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಕೋರಿ ಐಸಿಸಿಯನ್ನು ಔಪಚಾರಿಕವಾಗಿ ಸಂಪರ್ಕಿಸಲು ಸಜ್ಜಾಗಿದೆ.
ಶನಿವಾರ ಸಿಲ್ಹೆಟ್‌ನಲ್ಲಿ ನಡೆದ ಬಿಸಿಬಿ ನಿರ್ದೇಶಕರ ತುರ್ತು ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕ್ರಿಕ್‌ಬಜ್ ಪ್ರಕಾರ, ಬಾಂಗ್ಲಾದೇಶ ಆಟಗಾರರು, ತಂಡದ ಅಧಿಕಾರಿಗಳು, ಮಾಧ್ಯಮ ಸಿಬ್ಬಂದಿ, ಪ್ರಾಯೋಜಕರು ಮತ್ತು ಪ್ರಯಾಣ ಬೆಂಬಲಿಗರಿಗೆ ಪಂದ್ಯಾವಳಿಯ ಸಮಯದಲ್ಲಿ ಭದ್ರತಾ ವ್ಯವಸ್ಥೆಗಳ ಕುರಿತು ತುರ್ತು ಸ್ಪಷ್ಟೀಕರಣವನ್ನು ಕೋರಿ ಮಂಡಳಿಯು ಐಸಿಸಿಗೆ ಪತ್ರ ಬರೆಯಲಿದೆ. ಐಪಿಎಲ್ 2026ರಿಂದ ಮುಸ್ತಾಫಿಜುರ್ ಅವರನ್ನು ಕೆಕೆಆರ್ ತಂಡದಿಂದ ಕೈಬಿಟ್ಟಿರುವ ಸಂದರ್ಭಗಳ ಬಗ್ಗೆಯೂ ಬಿಸಿಬಿ ಬಿಸಿಸಿಐನಿಂದ ಔಪಚಾರಿಕ ವಿವರಣೆ ಪಡೆಯಲಿದೆ.
'ನಾವು ಐಸಿಸಿಗೆ ಪತ್ರ ಕಳುಹಿಸುತ್ತಿದ್ದೇವೆ. ಅದರಲ್ಲಿ ಮೂರು ಷರತ್ತುಗಳನ್ನು ಸೇರಿಸಿದ್ದೇವೆ. ಮೊದಲನೆಯದಾಗಿ, ಮುಸ್ತಾಫಿಜುರ್ (ಐಪಿಎಲ್‌ನಿಂದ ಹೊರಗಿಡುವಿಕೆ) ಬಗ್ಗೆ ಮತ್ತು ಎರಡನೆಯದಾಗಿ ವಿಶ್ವಕಪ್‌ನಲ್ಲಿ ನಮಗೆ ಭದ್ರತಾ ಯೋಜನೆ ಏನೆಂದು ತಿಳಿದುಕೊಳ್ಳಲು ಬಯಸುತ್ತೇವೆ. ಆಟಗಾರರು ಮಾತ್ರವಲ್ಲದೆ ಅವರೊಂದಿಗೆ ಮಾಧ್ಯಮಗಳು, ಅಭಿಮಾನಿಗಳು ಮತ್ತು ಪ್ರಾಯೋಜಕರು ಸಹ ವಿಶ್ವಕಪ್ ನೋಡಲು ಭಾರತಕ್ಕೆ ಪ್ರಯಾಣಿಸುತ್ತಾರೆ. ಅವರ ಭದ್ರತೆ ಬಗ್ಗೆ ತಿಳಿದುಕೊಳ್ಳಬೇಕಿದೆ' ಎಂದು ಬಿಸಿಬಿಯ ಉನ್ನತ ಅಧಿಕಾರಿಯೊಬ್ಬರು ಕ್ರಿಕ್‌ಬಜ್‌ಗೆ ತಿಳಿಸಿದ್ದಾರೆ.
Advertisement