

ಢಾಕಾ: 2026ರ ಐಪಿಎಲ್ ಟೂರ್ನಿಗೆ ಬಾಂಗ್ಲಾದೇಶ ತಂಡದಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಆಯ್ಕೆಯಾಗಿದ್ದ ಆಲ್ರೌಂಡರ್ ಮುಸ್ತಫಿಜುರ್ ರೆಹಮಾನ್ ರನ್ನು ಬಿಸಿಸಿಐ ಕಿತ್ತೊಗೆದಿದ್ದು, ಈ ಕುರಿತು ಇದೇ ಮೊದಲ ಬಾರಿಗೆ ಬಾಂಗ್ಲಾ ಆಟಗಾರ ಪ್ರತಿಕ್ರಿಯೆ ನೀಡಿದ್ದಾರೆ.
ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಋತುವಿಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದಿಂದ ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ರನ್ನು ಬಿಡುಗಡೆ ಮಾಡಲಾಗಿದೆ. ಮುಸ್ತಫಿಜುರ್ ರೆಹಮಾನ್ ಆಯ್ಕೆ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ಬಾಂಗ್ಲಾದೇಶದಲ್ಲಿನ ಹಿಂಸಾಚಾರ, ಉಭಯ ದೇಶಗಳ ನಡುವಿನ ಬಾಂಧವ್ಯ ಹಾಳಾಗಿದೆ. ಇದೇ ಕಾರಣಕ್ಕೆ ಬಾಂಗ್ಲಾದೇಶ ಕ್ರಿಕೆಟಿಗರ ಆಯ್ಕೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಬಿಸಿಸಿಐ ಸೂಚನೆ ಮೇರೆಗೆ ಮುಸ್ತಫಿಜುರ್ ರೆಹಮಾನ್ ರನ್ನು ಕೋಲ್ಕತಾ ನೈಟ್ ರೈಡರ್ಸ್ ತಂಡ ಬಿಡುಗಡೆ ಮಾಡಿತ್ತು. Cricket
ಮೊದಲ ಬಾರಿಗೆ ಆಲ್ರೌಂಡರ್ ಪ್ರತಿಕ್ರಿಯೆ
ಈ ಕುರಿತು ಖಾಸಗಿ ವಾಹಿನಿಯೊಂದಿಗೆ ಮಾತನಾಡಿದ ಬಾಂಗ್ಲಾದೇಶ ಆಟಗಾರ ಮುಸ್ತಫಿಜುರ್ ರೆಹಮಾನ್, "ಅವರು ತಂಡದಿಂದ ನನ್ನನ್ನು ಬಿಡುಗಡೆ ಮಾಡಿದರೆ, ನಾನು ಏನು ಮಾಡಲು ಸಾಧ್ಯ?" ಎಂದು ಖಾರವಾಗಿ ಹೇಳಿದ್ದಾರೆ.
ಅಲ್ಲದೆ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಹೆಚ್ಚುತ್ತಿರುವ ರಾಜಕೀಯ ಉದ್ವಿಗ್ನತೆಯಿಂದಾಗಿ ಮುಸ್ತಾಫಿಜುರ್ ಬಿಡುಗಡೆಯಿಂದ ನಿರಾಶೆಗೊಂಡಿದ್ದಾರೆ ಎಂದು ವರದಿಯಾಗಿದೆ.
ಹಿಂದೂಗಳ ಮೇಲಿನ ಹಿಂಸಾಚಾರ, ಕೆಕೆಆರ್ ಮೇಲೆ ಹೆಚ್ಚಿದ್ದ ಒತ್ತಡ
ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಹಿಂದೂ ವ್ಯಕ್ತಿಯ ಹತ್ಯೆಯ ನಂತರ ಬಿಸಿಸಿಐ ಮತ್ತು ಕೆಕೆಆರ್ ಮೇಲೆ ಒತ್ತಡ ಹೆಚ್ಚುತ್ತಿತ್ತು. ಮುಸ್ತಾಫಿಜುರ್ ಅವರನ್ನು ತಂಡಕ್ಕೆ ಸೇರಿಸಿಕೊಂಡ ಬಗ್ಗೆ ಕೆಕೆಆರ್ ಸಹ-ಮಾಲೀಕ ಮತ್ತು ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರನ್ನು ವಿವಿಧ ಗುಂಪುಗಳು ಗುರಿಯಾಗಿಸಿಕೊಂಡಿದ್ದವು.
ಕಳೆದ ತಿಂಗಳು ನಡೆದ ಆಟಗಾರರ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ಜೊತೆಗಿನ ತೀವ್ರ ಬಿಡ್ಡಿಂಗ್ ನಂತರ, 30 ವರ್ಷದ ಎಡಗೈ ಬೌಲರ್ ಮುಸ್ತಫಿಜುರ್ ರೆಹಮಾನ್ ರನ್ನು ಕೆಕೆಆರ್ 2 ಕೋಟಿ ರೂ. ಮೂಲ ಬೆಲೆಯಿಂದ 9.20 ಕೋಟಿ ರೂ.ಗೆ ಪಡೆದುಕೊಂಡಿತ್ತು. ಮಾರ್ಚ್ 26 ರಂದು ಪ್ರಾರಂಭವಾಗಲಿರುವ ಈ ಪಂದ್ಯಾವಳಿಗೆ ಅಗತ್ಯವಿದ್ದರೆ ಬದಲಿ ಆಟಗಾರನನ್ನು ಹೆಸರಿಸಲು ಕೆಕೆಆರ್‌ಗೆ ಅವಕಾಶ ನೀಡಲಾಗುವುದು ಎಂದು ಬಿಸಿಸಿಐ ತಿಳಿಸಿದೆ.
ಬಿಸಿಸಿಐ ಸ್ಪಷ್ಟನೆ
ಇನ್ನು ಇದೇ ವಿಚಾರವಾಗಿ ಮಾತನಾಡಿದ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, "ಬಾಂಗ್ಲಾದೇಶದಲ್ಲಿನ ಇತ್ತೀಚಿನ ಬೆಳವಣಿಗೆಯನ್ನು ಗಮನಿಸಿದ ನಂತರ, ಬಿಸಿಸಿಐ ಬಾಂಗ್ಲಾದೇಶದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಮ್ಮ ತಂಡದಿಂದ ಬಿಡುಗಡೆ ಮಾಡಲು ಕೆಕೆಆರ್ ಅಧಿಕಾರಿಗಳಿಗೆ ಸೂಚಿಸಿದೆ.
ಕೆಕೆಆರ್ ಅವರನ್ನು ಮತ್ತೆ ತಂಡಕ್ಕೆ ಸೇರಿಸಲು ವಿನಂತಿಸಿದರೆ, ಬಿಸಿಸಿಐ ನಿರ್ಧಾರ ತೆಗೆದುಕೊಳ್ಳುತ್ತದೆ ಮತ್ತು ಐಪಿಎಲ್‌ನ ನಿಯಮಗಳು ಮತ್ತು ಸ್ಥಿತಿಯಲ್ಲಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಬದಲಾಯಿಸಲು ಅವಕಾಶ ನೀಡುತ್ತದೆ."
"ಬಾಂಗ್ಲಾದೇಶದಲ್ಲಿನ ಇತ್ತೀಚಿನ ಬೆಳವಣಿಗೆಯಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಆದರೆ ಭವಿಷ್ಯದಲ್ಲಿ ಏನಾಗುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ನಾವು ಕೆಕೆಆರ್‌ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಹೇಳಿದ್ದೇವೆ ಮತ್ತು ಶೀಘ್ರದಲ್ಲೇ ಅವರು ಘೋಷಣೆ ಮಾಡುತ್ತಾರೆ" ಎಂದು ಸೈಕಿಯಾ ಹೇಳಿದರು.
ಶುಕ್ರವಾರ, ಮುಸ್ತಾಫಿಜುರ್ ಟಿ20 ಕ್ರಿಕೆಟ್‌ನಲ್ಲಿ 400 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದ ಮೊದಲ ಬಾಂಗ್ಲಾದೇಶದ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
Advertisement