2026ರ ಐಪಿಎಲ್ ಆವೃತ್ತಿಗೆ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದಿಂದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೈಬಿಟ್ಟ ನಂತರ ಉಂಟಾದ ವಿವಾದ ಮತ್ತಷ್ಟು ಉಲ್ಬಣಗೊಂಡಿದ್ದು, ಬಾಂಗ್ಲಾದೇಶ ಸರ್ಕಾರ ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಪ್ರಸಾರ ಮತ್ತು ಪ್ರಚಾರದ ಮೇಲೆ ಅನಿರ್ದಿಷ್ಟಾವಧಿ ನಿಷೇಧ ಹೇರಿದೆ.
ಜನವರಿ 5 ರಂದು ಹೊರಡಿಸಲಾದ ಅಧಿಕೃತ ಆದೇಶದಲ್ಲಿ, ದೇಶದಾದ್ಯಂತ ಐಪಿಎಲ್‌ಗೆ ಸಂಬಂಧಿಸಿದ ಎಲ್ಲ ಕಾರ್ಯಕ್ರಮಗಳು, ಪ್ರಚಾರಗಳು ಮತ್ತು ಪ್ರಸಾರವನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಅಧಿಕಾರಿಗಳು ಪ್ರಸಾರಕರು ಮತ್ತು ಜಾಹೀರಾತುದಾರರಿಗೆ ನಿರ್ದೇಶನ ನೀಡಿದ್ದಾರೆ. ಸಕ್ಷಮ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಈ ನಿರ್ದೇಶನವು ಮುಂದಿನ ಸೂಚನೆ ಬರುವವರೆಗೂ ಜಾರಿಯಲ್ಲಿರುತ್ತದೆ ಮತ್ತು ಇದನ್ನು 'ಸಾರ್ವಜನಿಕ ಹಿತಾಸಕ್ತಿ' ಅಡಿಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಲಾಗಿದೆ.
ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೈಬಿಟ್ಟ ಕೆಕೆಆರ್ ಕ್ರಮದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 'ಭಾರತೀಯ ಕ್ರಿಕೆಟ್ ಮಂಡಳಿಯ ಈ ನಿರ್ಧಾರಕ್ಕೆ ಯಾವುದೇ ತಾರ್ಕಿಕ ಕಾರಣವಿಲ್ಲ ಮತ್ತು ಅಂತಹ ನಿರ್ಧಾರವು ಬಾಂಗ್ಲಾದೇಶದ ಜನರನ್ನು ದುಃಖಿತರನ್ನಾಗಿ ಮಾಡಿದೆ, ಆಘಾತಗೊಳಿಸಿದೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಇದರ ಪರಿಣಾಮವಾಗಿ, ಸರ್ಕಾರ ಈ ಕ್ರಮ ಕೈಗೊಳ್ಳಬೇಕಾಯಿತು' ಎಂದು ಬಾಂಗ್ಲಾದೇಶ ಸರ್ಕಾರ ಆದೇಶದಲ್ಲಿ ತಿಳಿಸಿದೆ.
'ಮುಂದಿನ ಆದೇಶದವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಎಲ್ಲ ಪಂದ್ಯಗಳು ಮತ್ತು ಕಾರ್ಯಕ್ರಮಗಳ ಪ್ರಚಾರ/ಪ್ರಸಾರವನ್ನು ನಿಲ್ಲಿಸಲು ವಿನಂತಿ ಮಾಡಲಾಗಿದೆ' ಎಂದು ಅದು ಹೇಳಿದೆ.
ಇತ್ತೀಚಿನ ಬೆಳವಣಿಗೆಗಳನ್ನು'ಆಧರಿಸಿ ಬಾಂಗ್ಲಾದೇಶದ ವೇಗಿಯನ್ನು ಬಿಡುಗಡೆ ಮಾಡುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೆಕೆಆರ್‌ಗೆ ಈ ಹಿಂದೆ ನಿರ್ದೇಶನ ನೀಡಿತ್ತು.
'ಇತ್ತೀಚಿನ ಬೆಳವಣಿಗೆಗಳನ್ನು ಪರಿಗಣಿಸಿ, ಮುಸ್ತಾಫಿಜುರ್ ರೆಹಮಾನ್ ಅವರನ್ನು ಬಿಡುಗಡೆ ಮಾಡಲು ಕೆಕೆಆರ್‌ಗೆ ಸೂಚಿಸಲಾಗಿದೆ. ಅಗತ್ಯವಿದ್ದರೆ ಅವರು ಬದಲಿ ಆಟಗಾರನನ್ನು ಕೇಳಬಹುದು. ಮತ್ತು ವಿನಂತಿಯ ಮೇರೆಗೆ, ಬಿಸಿಸಿಐ ಬದಲಿ ಆಟಗಾರನನ್ನು ಪಡೆಯಲು ಅನುಮತಿ ನೀಡುತ್ತದೆ' ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದರು.
ಡಿಸೆಂಬರ್‌ನಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ನಡೆದ ಹಿಂಸಾತ್ಮಕ ಘಟನೆಗಳ ವರದಿಗಳ ಹಿನ್ನೆಲೆಯಲ್ಲಿ, ಕೆಕೆಆರ್ ಬಾಂಗ್ಲಾದ ವೇಗಿಯನ್ನು ಕೈಬಿಡುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಯಿತು. ಇದೀಗ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ನಿಷೇಧದ ಬಗ್ಗೆ ಬಿಸಿಸಿಐ ಅಥವಾ ಐಪಿಎಲ್ ಇದುವರೆಗೆ ಅಧಿಕೃತ ಪ್ರತಿಕ್ರಿಯೆಯನ್ನು ನೀಡಿಲ್ಲ.
Advertisement