

ನವದೆಹಲಿ: ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಮತ್ತು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಭಾರತದ ಬೂಟಾಟಿಕೆ ಎದ್ದು ಕಾಣುತ್ತಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ನಂತರವೂ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯ ನಡೆದವು. ಆದರೆ, ಬಾಂಗ್ಲಾದೇಶದ ಕ್ರಿಕೆಟಿಗನನ್ನು ವಾಪಸ್ ಕಳುಹಿಸುವ ಕ್ರಮವನ್ನು ಅವರು ಪ್ರಶ್ನಿಸಿದ್ದಾರೆ.
ನೆರೆಯ ದೇಶದಲ್ಲಿ ಹಿಂದೂಗಳ ವಿರುದ್ಧ ನಡೆಯುತ್ತಿರುವ ಹಿಂಸಾಚಾರದ ಮಧ್ಯೆ, ಬಾಲಿವುಡ್ ನಟ ಶಾರುಖ್ ಖಾನ್ ಒಡೆತನದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ರೆಹಮಾನ್ ಅವರನ್ನು ಬಿಡುಗಡೆ ಮಾಡುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಳೆದ ವಾರ ಆದೇಶಿಸಿತ್ತು.
ಕಾಂಗ್ರೆಸ್ ಸಂಸದ ಶಶಿ ತರೂರ್ ಸೇರಿದಂತೆ ಕೆಲವು ನಾಯಕರು ಕ್ರೀಡೆ ಮತ್ತು ರಾಜಕೀಯವನ್ನು ಬೆರೆಸುವುದನ್ನು ಆಕ್ಷೇಪಿಸಿದ್ದರು. ಈಗ, ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ವಾಪಸ್ ಕಳುಹಿಸಬಹುದೇ. ಪ್ರತಿಭಟನೆಗಳ ನಡುವೆ ತನ್ನ ದೇಶವನ್ನು ತೊರೆದು ಭಾರತದಲ್ಲಿ ವಾಸಿಸುತ್ತಿರುವ ಹಸೀನಾ ಅವರ ವಿಚಾರದಲ್ಲಿ ಭಾರತ ಏಕೆ ಅದೇ ರೀತಿ ವರ್ತಿಸಲಿಲ್ಲ? ಎಂದು ಓವೈಸಿ ಪ್ರಶ್ನಿಸಿದ್ದಾರೆ.
'ಪಹಲ್ಗಾಮ್ ದಾಳಿಯ ನಂತರ, ನಾವು ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನದೊಂದಿಗೆ ಆಡಿದ್ದೇವೆ. ಬಾಂಗ್ಲಾದೇಶದ ಮಹಿಳೆಯೊಬ್ಬರು ಭಾರತದಲ್ಲಿ ವಾಸಿಸುತ್ತಿದ್ದಾರೆ. ಆದ್ದರಿಂದ ಅವರನ್ನೂ ಬಾಂಗ್ಲಾದೇಶಕ್ಕೆ ಕಳುಹಿಸಿ. ಅವರನ್ನು ದೇಶದಲ್ಲಿ ಏಕೆ ಉಳಿಸಿಕೊಳ್ಳಲಾಗುತ್ತಿದೆ? ಬಾಂಗ್ಲಾದೇಶದಲ್ಲಿ ಸ್ಥಿರತೆ ಭಾರತಕ್ಕೆ ಮುಖ್ಯವಾಗಿದೆ. ಚೀನಾ ಮತ್ತು ಪಾಕಿಸ್ತಾನ ಬಾಂಗ್ಲಾದೇಶದಲ್ಲಿ ಸಕ್ರಿಯವಾಗಿವೆ. ನಾವು ಅದನ್ನು ಸಹ ಪರಿಶೀಲಿಸಬೇಕು' ಎಂದು ಅವರು ಹೇಳಿದರು.
ಐಪಿಎಲ್ 2026ರ ಸೀಸನ್‌ಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಭಾರಿ ಮೊತ್ತ ನೀಡಿ ಹರಾಜಿನಲ್ಲಿ ಖರೀದಿಸಿತ್ತು. ಬಾಂಗ್ಲಾದೇಶದಲ್ಲಿನ ಹಿಂದೂ ವಿರೋಧಿ ಧೋರಣೆಯಿಂದಾಗಿ ವ್ಯಾಪಕ ವಿರೋಧ ಕೇಳಿಬಂದ ಹಿನ್ನೆಲೆಯಲ್ಲಿ ತಂಡದಿಂದ ಮುಸ್ತಾಫಿಜುರ್ ಅವರನ್ನು ಬಿಡುಗಡೆ ಮಾಡುವಂತೆ ಬಿಸಿಸಿಐ ಸೂಚಿಸಿದ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆ ಮಾಡಿತು. ಅಗತ್ಯವಿದ್ದರೆ ಫ್ರಾಂಚೈಸಿಯು ಬದಲಿ ಆಟಗಾರನನ್ನು ಹುಡುಕಬಹುದು.
Advertisement