ಭಾರತದ 14 ವರ್ಷದ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿ ಮತ್ತೊಂದು ಅದ್ಭುತ ಮೈಲಿಗಲ್ಲು ಬರೆದಿದ್ದಾರೆ. ಯೂತ್ ಏಕದಿನ ಪಂದ್ಯಗಳಲ್ಲಿ ಭಾರತೀಯ ಆಟಗಾರನೊಬ್ಬ ಗಳಿಸಿದ ಅತ್ಯಂತ ವೇಗದ ಅರ್ಧಶತಕದ ದಾಖಲೆಯನ್ನು ಮುರಿದಿದ್ದಾರೆ. ಸೋಮವಾರ ಬೆನೋನಿಯ ವಿಲ್ಲೋಮೂರ್ ಪಾರ್ಕ್‌ನಲ್ಲಿ ದಕ್ಷಿಣ ಆಫ್ರಿಕಾ U19 ವಿರುದ್ಧದ ಎರಡನೇ ಯೂತ್ ಏಕದಿನ ಪಂದ್ಯದಲ್ಲಿ ಸೂರ್ಯವಂಶಿ ಈ ಸಾಧನೆ ಮಾಡಿದ್ದಾರೆ. ಭಾರತದ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರ ದೀರ್ಘಕಾಲದ ಸಾಧನೆಯನ್ನು ಸರಿಗಟ್ಟಿದ್ದಾರೆ.
ಆಯುಷ್ ಮ್ಹಾತ್ರೆ ಅನುಪಸ್ಥಿತಿಯಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದ ಸೂರ್ಯವಂಶಿ, ದಕ್ಷಿಣ ಆಫ್ರಿಕಾದ ಬೌಲರ್‌ಗಳನ್ನು ತರಾಟೆಗೆ ತೆಗೆದುಕೊಂಡರು. ಯುವ ಪ್ರತಿಭೆ ಕೇವಲ 15 ಎಸೆತಗಳಲ್ಲಿ 50 ರನ್ ಮೈಲಿಗಲ್ಲನ್ನು ತಲುಪಿದರು. ಪಂತ್ ಅವರು 18 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ದಾಖಲೆ ಬರೆದಿದ್ದರು.
ಸೂರ್ಯವಂಶಿ ಕೇವಲ 24 ಎಸೆತಗಳಲ್ಲಿ 68 ರನ್ ಗಳಿಸಿ ಔಟಾದರು. ಅವರ ಇನಿಂಗ್ಸ್ 10 ಸಿಕ್ಸರ್‌ಗಳು ಮತ್ತು ಒಂದು ಬೌಂಡರಿ ಇತ್ತು. ಅವರ 68 ರನ್‌ಗಳ ಪೈಕಿ 64 ರನ್‌ಗಳು ಬೌಂಡರಿಗಳಿಂದಲೇ ಬಂದವು.
ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ U19 ತಂಡವು 49.3 ಓವರ್‌ಗಳಲ್ಲಿ 245 ರನ್‌ಗಳಿಗೆ ಆಲೌಟ್ ಆಯಿತು. ಮಳೆಯಿಂದಾಗಿ ಭಾರತಕ್ಕೆ 27 ಓವರ್‌ಗಳಲ್ಲಿ 174 ರನ್‌ಗಳ ಪರಿಷ್ಕೃತ ಗುರಿ ನೀಡಲಾಯಿತು.
ಭಾರತದ ಆರಂಭಿಕ ಆಟಗಾರರಾದ ಆ್ಯರನ್ ಜಾರ್ಜ್ ಮತ್ತು ಸೂರ್ಯವಂಶಿ ಆರಂಭದಲ್ಲಿ ಆತಿಥೇಯರ ಮೇಲೆ ತಕ್ಷಣದ ಒತ್ತಡ ಹೇರಿದರು. ಈ ಜೋಡಿ 4.1 ಓವರ್‌ಗಳಲ್ಲಿ 50 ರನ್‌ಗಳನ್ನು ಕಲೆಹಾಕಿತು. ಸೂರ್ಯವಂಶಿ 19 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.
ಭಾರತ 6.1 ಓವರ್‌ಗಳಲ್ಲಿ 67 ರನ್ ಗಳಿಸಿದ್ದಾಗ ಮೊದಲ ವಿಕೆಟ್ ಪತನವಾಯಿತು. ಜಾರ್ಜ್ 19 ಎಸೆತಗಳಲ್ಲಿ 20 ರನ್ ಗಳಿಸಿ ತಮ್ಮ ವಿಕೆಟ್ ಒಪ್ಪಿಸಿದರು. ಬಳಿಕ ಸೂರ್ಯವಂಶಿ ತಮ್ಮ ಆಕ್ರಮಣವನ್ನು ಮುಂದುವರೆಸಿದರು. 8.1 ಓವರ್‌ನಲ್ಲಿ ಮೈಕೆಲ್ ಕ್ರೂಸ್‌ಕ್ಯಾಂಪ್ ಅವರ ಬೌಲಿಂಗ್‌ನಲ್ಲಿ ವೈಭವ್ ಔಟ್ ಆದರು. ಆ ಹಂತದಲ್ಲಿ, ಭಾರತ 10 ಓವರ್‌ಗಳಲ್ಲಿ 103/2 ಸ್ಕೋರ್‌ನೊಂದಿಗೆ ಉತ್ತಮ ಸ್ಥಿತಿಯಲ್ಲಿತ್ತು.
ನಂತರ ವೇದಾಂತ್ ತ್ರಿವೇದಿ ಮತ್ತು ಅಭಿಗ್ಯಾನ್ ಕುಂಡು ಯಾವುದೇ ಅಡೆತಡೆಗಳನ್ನು ಎದುರಿಸದಂತೆ ನೋಡಿಕೊಂಡರು. ಶಾಂತವಾಗಿ ಭಾರತವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು. ತ್ರಿವೇದಿ 31 ರನ್ ಗಳಿಸಿ ಅಜೇಯರಾಗಿ ಉಳಿದರೆ, ಕುಂಡು 48 ರನ್ ಗಳಿಸಿ ಅಜೇಯರಾಗಿ ಉಳಿದರು.
ದಕ್ಷಿಣ ಆಫ್ರಿಕಾ U19 ಪರ, ಮೈಕೆಲ್ ಕ್ರೂಸ್ಕ್ಯಾಂಪ್ ಅತ್ಯುತ್ತಮ ಬೌಲರ್ ಆಗಿದ್ದರು. ಅವರು ಭಾರತದ ಎರಡೂ ವಿಕೆಟ್‌ಗಳನ್ನು ಕಬಳಿಸಿದರು ಮತ್ತು ಆರು ಓವರ್‌ಗಳಲ್ಲಿ 2/23 ಗಳಿಸಿದರು.
ಇದಕ್ಕೂ ಮೊದಲು, ಜೇಸನ್ ರೌಲ್ಸ್ 113 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಒಳಗೊಂಡಂತೆ 114 ರನ್ ಗಳಿಸಿದ ಉತ್ತಮ ಶತಕದ ಹೊರತಾಗಿಯೂ ದಕ್ಷಿಣ ಆಫ್ರಿಕಾದ ಇನಿಂಗ್ಸ್‌ನಲ್ಲಿ ಸ್ಥಿರತೆಯ ಕೊರತೆಯಿತ್ತು. ರೌಲ್ಸ್ ಮತ್ತು ಡೇನಿಯಲ್ ಬೋಸ್ಮನ್ (31) ಒಟ್ಟಿಗೆ 97 ರನ್‌ಗಳನ್ನು ಕಲೆಹಾಕಿದರು. ಆದರೆ, ಉಳಿದ ಬ್ಯಾಟಿಂಗ್ ತಂಡವು ವೇಗವನ್ನು ಹೆಚ್ಚಿಸುವಲ್ಲಿ ವಿಫಲವಾಯಿತು.
ಭಾರತದ ಕಿಶನ್ ಸಿಂಗ್ 8.3 ಓವರ್‌ಗಳಲ್ಲಿ 4/46 ವಿಕೆಟ್ ಪಡೆದು ಬೌಲಿಂಗ್‌ನಲ್ಲಿ ಮಿಂಚಿದರು. ಆರ್‌ಎಸ್ ಅಂಬ್ರೀಶ್ ಎಂಟು ಓವರ್‌ಗಳಲ್ಲಿ 2/47 ವಿಕೆಟ್ ಪಡೆದರು. ಕನಿಷ್ಕ್ ಚೌಹಾಣ್ ಮತ್ತು ಖಿಲನ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.
Advertisement