ಬುಧವಾರ ನಡೆದ ಮೂರನೇ ಯೂತ್ ಏಕದಿನ ಪಂದ್ಯದಲ್ಲಿ ಭಾರತ ಅಂಡರ್-19 ತಂಡ ದಕ್ಷಿಣ ಆಫ್ರಿಕಾ ಅಂಡರ್-19 ತಂಡದ ವಿರುದ್ಧ ಆರಂಭಿಕ ಜೋಡಿಯು ಅದ್ಭುತ ಪ್ರದರ್ಶನ ನೀಡಿ ಇತಿಹಾಸ ಪುಸ್ತಕಗಳಲ್ಲಿ ಹೊಸ ದಾಖಲೆ ಬರೆದಿದೆ. 14 ವರ್ಷದ ವೈಭವ್ ಸೂರ್ಯವಂಶಿ ಮತ್ತು ಅವರ ಆರಂಭಿಕ ಜೋಡಿ ಆ್ಯರನ್ ಜಾರ್ಜ್ ಈ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ. ಮೊದಲ ವಿಕೆಟ್‌ಗೆ 227 ರನ್‌ಗಳ ಜೊತೆಯಾಟದ ಮೂಲಕ, ಈ ಜೋಡಿ ಐತಿಹಾಸಿಕ ಆರಂಭಿಕ ಜೋಡಿಯಾಗಿ ಹೊರಹೊಮ್ಮಿದ್ದು, ಮುಂದಿನ ವಾರ ನಡೆಯಲಿರುವ ಅಂಡರ್-19 ವಿಶ್ವಕಪ್‌ಗೆ ಮುನ್ನ ಭಾರತಕ್ಕೆ ಶುಭಸೂಚನೆಯಾಗಿದೆ.
ಈ ಮೂಲಕ ವೈಭವ್ ಸೂರ್ಯವಂಶಿ ಯೂತ್ ಏಕದಿನ ಇತಿಹಾಸದಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೂಲಕ ಅವರು ತಮ್ಮ ಹೆಸರಿಗೆ ಹೊಸ 'ವಿಶ್ವ ದಾಖಲೆ'ಯನ್ನು ಸೇರಿಸಿಕೊಂಡರು.
ವಿಲ್ಲೋಮೂರ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ದುಕೊಂಡಿತು. ಈ ನಿರ್ಧಾರವು ತಂಡಕ್ಕೆ ಹಿನ್ನಡೆಯನ್ನುಂಟುಮಾಡಿತು. ಭಾರತದ ಆರಂಭಿಕ ಜೋಡಿ ಸೂರ್ಯವಂಶಿ ಮತ್ತು ಜಾರ್ಜ್, ಪ್ರೋಟಿಯಸ್‌ನ ಬೌಲರ್‌ಗಳ ಬೆವರಿಳಿಸಿದರು. 2013 ರಲ್ಲಿ ಅಂಕುಶ್ ಬೈನ್ಸ್ ಮತ್ತು ಅಖಿಲ್ ಹೆರ್ವಾಡ್ಕರ್ ಅವರ 218 ರನ್‌ಗಳ ಜೊತೆಯಾಟದ ದೀರ್ಘಕಾಲದ ಭಾರತೀಯ ಯುವ ODI ದಾಖಲೆಯನ್ನು ಮುರಿದರು. 9ನೇ ಓವರ್‌ನಲ್ಲಿಯೇ ಭಾರತ 100 ರನ್‌ಗಳ ಗಡಿಯನ್ನು ದಾಟಿತ್ತು.
ನಾಯಕ ಆಯುಷ್ ಮ್ಹಾತ್ರೆ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುತ್ತಿದ್ದ ಸೂರ್ಯವಂಶಿ ಪ್ರಮುಖ ಆಕ್ರಮಣಕಾರಿ ಬ್ಯಾಟರ್ ಆಗಿದ್ದರು. ಕೇವಲ 14 ವರ್ಷ ಮತ್ತು 9 ತಿಂಗಳ ವಯಸ್ಸಿನಲ್ಲಿ, ಅವರು ಯುವ ಏಕದಿನ ಶತಕ ಗಳಿಸಿದ ಅತ್ಯಂತ ಕಿರಿಯ ನಾಯಕ ಎಂಬ ಖ್ಯಾತಿಗೆ ಪಾತ್ರರಾದರು.
73 ಎಸೆತಗಳಲ್ಲಿ 127 ರನ್ ಗಳಿಸಿದ ಅವರ ಇನಿಂಗ್ಸ್‌ನಲ್ಲಿ 9 ಬೌಂಡರಿಗಳು ಮತ್ತು 10 ಬೃಹತ್ ಸಿಕ್ಸರ್‌ಗಳು ಸೇರಿದ್ದವು. ಸ್ಟ್ರೈಕ್ ರೇಟ್ 173.97 ಆಗಿತ್ತು.
ಅಂತಿಮವಾಗಿ 26ನೇ ಓವರ್‌ನಲ್ಲಿ ಡೀಪ್ ಸ್ಕ್ವೇರ್-ಲೆಗ್‌ನಲ್ಲಿ ಕ್ಯಾಚ್ ಹಿಡಿಯುವ ಮೂಲಕ ವೈಭವ್ ಸೂರ್ಯವಂಶಿ ಅವರ ವಿಕೆಟ್ ಪತನವಾಯಿತು. ಅವರ ಜೊತೆ ಬ್ಯಾಟಿಂಗ್ ಮಾಡಿದ ಆರಂಭಿಕ ಆಟಗಾರ ಆ್ಯರನ್ ಜಾರ್ಜ್ ಕೂಡ 29ನೇ ಓವರ್‌ನಲ್ಲಿ ಶತಕ ಗಳಿಸಿದರು. ದಕ್ಷಿಣ ಆಫ್ರಿಕಾದ ಬೌಲಿಂಗ್ ದಾಳಿಯನ್ನು ಕೆಡವಿದರು.
ಕ್ರಿಕೆಟ್ ಜಗತ್ತಿನಲ್ಲಿ, ವೈಭವ್ ಸೂರ್ಯವಂಶಿ ದಿನದಿಂದ ದಿನಕ್ಕೆ ದೀರ್ಘಕಾಲದ ದಾಖಲೆಗಳನ್ನು ಮುರಿಯುತ್ತಲೇ ಇದ್ದಾರೆ. 2026ರ ಆರಂಭದಲ್ಲಿ, ಅವರು ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 15 ಎಸೆತಗಳಲ್ಲಿ 50 ರನ್ ಗಳಿಸುವ ಮೂಲಕ ಯುವ ಏಕದಿನ ಇತಿಹಾಸದಲ್ಲಿ ಅತ್ಯಂತ ವೇಗದ ಅರ್ಧಶತಕ ಗಳಿಸಿದ್ದ ದಾಖಲೆ ಹೊಂದಿದ್ದ ರಿಷಭ್ ಪಂತ್ ಅವರನ್ನು ಸರಿಗಟ್ಟಿದರು. ಇದಕ್ಕೂ ಮೊದಲು U19 ಮಟ್ಟದಲ್ಲಿ ಅತ್ಯಂತ ವೇಗದ ಶತಕ ಗಳಿಸಿದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದರು. ಇಂಗ್ಲೆಂಡ್ ವಿರುದ್ಧ 52 ಎಸೆತಗಳಲ್ಲಿ ಅದ್ಭುತ ಶತಕ ಗಳಿಸಿ ಮಿಂಚಿದರು.
Advertisement