

ಮುಂಬೈ: ಹಾಲಿ ಮಹಿಳಾ ಪ್ರೀಮಿಯರ್ ಲೀಗ್ 2026ರಲ್ಲಿ ಆರ್ ಸಿಬಿ ತಂಡದ ಆಟಗಾರ್ತಿ ಲಾರೆನ್ ಬೆಲ್ ಇಷ್ಟುದಿನ ತಮ್ಮ ಸೌಂದರ್ಯದ ಮೂಲಕ ಸುದ್ದಿಯಲ್ಲಿದ್ದರು.. ಆದರೆ ನಿನ್ನೆಯ ಪಂದ್ಯದಲ್ಲಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.
ಹೌದು.. ನವೀ ಮುಂಬೈನ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ 2026ನ ಮೊದಲ ಪಂದ್ಯದಲ್ಲಿ ಆರ್ ಸಿಬಿ ರೋಚಕ ಗೆಲುವು ದಾಖಲಿಸಿದ್ದು, ಈ ಗೆಲುವಿನಲ್ಲಿ ತಂಡದ ವೇಗಿ ಲಾರೆನ್ ಬೆಲ್ ಕೂಡ ಪ್ರಮುಖ ಪಾತ್ರವಹಿಸಿದ್ದರು.
ಇಂಗ್ಲೆಂಡ್ ತಂಡದ ವೇಗದ ಬೌಲರ್ ಲಾರೆನ್ ಬೆಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಮೂಲಕ ಐಪಿಎಲ್ ಗೆ ಪದಾರ್ಪಣೆ ಮಾಡಿದ್ದು, ಪಾದಾರ್ಪಣೆ ಪಂದ್ಯದಲ್ಲೇ ಮಾರಕ ದಾಳಿ ಸಂಘಟಿಸುವ ಮೂಲಕ ಲಾರೆನ್ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಈ ಪಂದ್ಯದಲ್ಲಿ ಲಾರೆನ್ ಬೆಲ್ ತಾವು ಎಸೆದ ಮೊದಲ ಓವರ್ ನಲ್ಲೇ ಕರಾರುವಕ್ಕಾದ ಬೌಲಿಂಗ್ ದಾಳಿ ಮೂಲಕ ಒಂದೂ ರನ್ ನೀಡದೇ ಮೇಡನ್ ಸಾಧಿಸಿದರು. ಬಳಿಕ 2ನೇ ಓವರ್ನಲ್ಲಿ 2 ಮತ್ತು ಮೂರನೇ ಓವರ್ ನಲ್ಲಿ 6, ನಾಲ್ಕನೇ ಓವರ್ ನಲ್ಲಿ ಕೇವಲ 7 ರನ್ ಮಾತ್ರ ಬಿಟ್ಟು ಕೊಟ್ಟಿದ್ದರು.
ಈ ಮೂಲಕ 4 ಓವರ್ಗಳಲ್ಲಿ ಕೇವಲ 14 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಈ ಮೂಲಕ ಲಾರೆನ್ ಬೆಲ್ ಮುಂಬೈ ತಂಡ ಹೆಚ್ಚು ರನ್ ಗಳಿಸದಂತೆ ಕಟ್ಟಿಹಾಕಿದರು.
ಒಂದು ಎಸೆತದಿಂದ ದಾಖಲೆ ಮಿಸ್
ವಿಶೇಷ ಎಂದರೆ ಲಾರೆನ್ ಬೆಲ್ 24 ಎಸೆತಗಳಲ್ಲಿ 19 ಎಸೆತಗಳನ್ನು ಡಾಟ್ ಮಾಡಿದ್ದರು. ಅಂದರೆ 19 ಎಸೆತಗಳಲ್ಲಿ ಯಾವುದೇ ರನ್ ನೀಡಿರಲಿಲ್ಲ. ಆದರೆ ಉಳಿದ 6 ಎಸೆತಗಳಲ್ಲಿ ರನ್ ನೀಡುವ ಮೂಲಕ ಭರ್ಜರಿ ದಾಖಲೆಯೊಂದನ್ನು ತಪ್ಪಿಸಿಕೊಂಡರು.
ಅದರಲ್ಲೂ ಒಂದೇ ಒಂದು ಎಸೆತವನ್ನು ಡಾಟ್ ಮಾಡಿದ್ರೆ ಲಾರೆನ್ ಹೆಸರಿಗೆ ದಾಖಲೆಯೊಂದು ಸೇರ್ಪಡೆಯಾಗುತ್ತಿತ್ತು. ಆದರೆ ಕೇವಲ ಒಂದು ಎಸೆತದಿಂದಾಗಿ ಶಬ್ನಿಮ್ ಇಸ್ಮಾಯಿಲ್ ಹೆಸರಿನಲ್ಲಿರುವ ದಾಖಲೆ ಮುರಿಯುವಲ್ಲಿ ವಿಫಲರಾಗಿದ್ದಾರೆ.
ಹೌದು, ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ 4 ಓವರ್ಗಳನ್ನು ಎಸೆದು ಅತ್ಯಧಿಕ ಡಾಟ್ ಬಾಲ್ ಮಾಡಿದ ಭರ್ಜರಿ ದಾಖಲೆ ಮುಂಬೈ ಇಂಡಿಯನ್ಸ್ ತಂಡದ ವೇಗಿ ಶಬ್ನಿನ್ ಇಸ್ಮಾಯಿಲ್ ಹೆಸರಿನಲ್ಲಿದೆ.
2025 ರಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಶಬ್ನಿಮ್ 4 ಓವರ್ಗಳಲ್ಲಿ 20 ಡಾಟ್ ಬಾಲ್ ಎಸೆದಿದ್ದರು. ಈ ಭರ್ಜರಿ ದಾಖಲೆ ಮುರಿಯುವ ಅವಕಾಶ ಲಾರೆನ್ ಬೆಲ್ಗಿತ್ತು. ಇದಾಗ್ಯೂ ಆರ್ಸಿಬಿ ಪರ ಒಂದು ಪಂದ್ಯದಲ್ಲಿ ಅತ್ಯಧಿಕ ಡಾಟ್ ಬಾಲ್ ಎಸೆದ ಬೌಲರ್ ಎಂಬ ದಾಖಲೆ ಲಾರೆನ್ ಬೆಲ್ ಪಾಲಾಗಿದೆ.
RCBಯ ಲೇಡಿ ಹೇಜಲ್ವುಡ್
ಈ ಪಂದ್ಯದ ಮೂಲಕ ಲಾರೆನ್ ಬೆಲ್ ಆರ್ ಸಿಬಿಯ ಲೇಡಿ ಹೇಡಲ್ವುಡ್ ಎಂದು ಖ್ಯಾತಿಗಳಿಸಿದ್ದಾರೆ. ಆರ್ ಸಿಬಿಗೆ ಹೇಗೆ ಹೇಜಲ್ವುಡ್ ಆಪತ್ಭಾಂಧವ ಬೌಲರ್ ಆಗಿದ್ದಾರೆಯೇ ಹಾಗೆಯೇ ಲಾರೆನ್ ಬೆಲ್ ಕೂಡ ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ಆರ್ ಸಿಬಿಯ ಆಪತ್ಭಾಂಧವರಾಗಿದ್ದಾರೆ ಎಂದು ಅಭಿಮಾನಿಗಳು ಶ್ಲಾಘಿಸುತ್ತಿದ್ದಾರೆ.
Advertisement