

ಶನಿವಾರ ಮಧ್ಯಾಹ್ನ ವಡೋದರಾದ ಬಿಸಿಎ ಕ್ರೀಡಾಂಗಣದಲ್ಲಿ ಭಾರತದ ಅಭ್ಯಾಸ ಅವಧಿಯಲ್ಲಿ ನೆಟ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರಿಗೆ ಗಾಯವಾಗಿದ್ದು, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಸಿದ್ದಾರೆ ಎನ್ನಲಾಗಿದೆ.
ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ರಿಷಭ್ ಪಂತ್ ಬದಲಿಗೆ ಧ್ರುವ್ ಜುರೆಲ್ ಅವರನ್ನು ಆಯ್ಕೆ ಮಾಡಲಾಗಿದೆ. ನೆಟ್ ಸೆಷನ್‌ನಲ್ಲಿ ಎಸೆತವೊಂದು ಪಂತ್ ಅವರ ಪಕ್ಕೆಲುಬಿನ ಮೇಲೆ ಬಡಿದು ಗಾಯದ ಸಮಸ್ಯೆಗೆ ಒಳಗಾದ ನಂತರ ಪಂತ್ ಅವರನ್ನು ಏಕದಿನ ಸರಣಿಯಿಂದ ಹೊರಗಿಡಲಾಯಿತು.
ಭಾನುವಾರ ನಡೆಯಲಿರುವ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಪಂತ್ ತೀವ್ರ ನೋವಿನಿಂದ ಬಳಲುತ್ತಿದ್ದರು ಮತ್ತು ಅವರು ಏಕದಿನ ಸರಣಿಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಸದ್ಯ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಉತ್ತರ ಪ್ರದೇಶ ಪರ ಜುರೆಲ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಬಿಸಿಸಿಐ ಅಧಿಕೃತ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಪಂತ್ ಬದಲಿಗೆ ಜುರೇಲ್ ತಂಡ ಸೇರಿಕೊಂಡಿದ್ದಾರೆ ಎಂದು ತಿಳಿಸಿದೆ.
ಪಂತ್ ಅವರನ್ನು ತಕ್ಷಣವೇ ಎಂಆರ್‌ಐ ಸ್ಕ್ಯಾನ್‌ಗೆ ಕರೆದೊಯ್ಯಲಾಯಿತು ಮತ್ತು ಬಿಸಿಸಿಐ ವೈದ್ಯಕೀಯ ತಂಡವು ಅವರ ಕ್ಲಿನಿಕಲ್ ಮತ್ತು ರೇಡಿಯಾಲಜಿಕಲ್ ಸಂಶೋಧನೆಗಳ ಕುರಿತು ತಜ್ಞರೊಂದಿಗೆ ವಿವರವಾದ ಚರ್ಚೆ ನಡೆಸಿತು. ಪಂತ್‌ಗೆ ಪಾರ್ಶ್ವ ಸ್ನಾಯು ನೋವು (ಓಬ್ಲಿಕ್ ಮಸಲ್ ಟಿಯರ್) ಇರುವುದು ಪತ್ತೆಯಾಗಿದ್ದು, ನಂತರ ಅವರನ್ನು ಏಕದಿನ ಸರಣಿಯಿಂದ ಹೊರಗಿಡಲಾಗಿದೆ.
ಪುರುಷರ ಆಯ್ಕೆ ಸಮಿತಿಯು ಪಂತ್ ಬದಲಿಗೆ ಧ್ರುವ್ ಜುರೆಲ್ ಅವರನ್ನು ಹೆಸರಿಸಿದೆ ಮತ್ತು ಜುರೆಲ್ ಈಗಾಗಲೇ ಭಾರತ ತಂಡದೊಂದಿಗೆ ಸೇರಿಕೊಂಡಿದ್ದಾರೆ ಎಂದು ತಿಳಿಸಿದೆ.
ಭಾರತದ ನವೀಕರಿಸಿದ ಏಕದಿನ ತಂಡ
ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ಉಪನಾಯಕ), ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಕುಲದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಅರ್ಷದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ಧ್ರುವ್ ಜುರೇಲ್ (ವಿಕೆಟ್ ಕೀಪರ್).
Advertisement