

ವಡೋದರಾ: ವಿರಾಟ್ ಕೊಹ್ಲಿ ಅವರನ್ನು ಶ್ಲಾಘಿಸಿದ ಭಾರತದ ಉಪನಾಯಕ ಶ್ರೇಯಸ್ ಅಯ್ಯರ್, ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ ವರ್ಷಗಳಿಂದ 'ನುಡಿದಂತೆಯೇ ನಡೆಯುತ್ತಿದ್ದಾರೆ' ಎಂದು ಹೇಳಿದರು.
ಭಾನುವಾರ ವಡೋದರಾದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಆರಂಭಿಕ ಪಂದ್ಯದಲ್ಲಿ ಕೊಹ್ಲಿ 91 ಎಸೆತಗಳಲ್ಲಿ 93 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ನ್ಯೂಜಿಲೆಂಡ್ ನೀಡಿದ್ದ 301 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ನಾಲ್ಕು ವಿಕೆಟ್‌ಗಳ ಗೆಲುವು ಸಾಧಿಸಿತು ಮತ್ತು ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ಭಾರತದ ಇನಿಂಗ್ಸ್ ವೇಳೆ, ಕೊಹ್ಲಿ ಎಲ್ಲ ಮಾದರಿಗಳಲ್ಲಿ 28,000 ಅಂತರರಾಷ್ಟ್ರೀಯ ರನ್‌ಗಳನ್ನು ತಲುಪಿದ ಅತ್ಯಂತ ವೇಗದ ಆಟಗಾರ ಮತ್ತು ಸಚಿನ್ ತೆಂಡೂಲ್ಕರ್ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು.
'ನಾವು ಅವರ ಇನಿಂಗ್ಸ್ ಬಗ್ಗೆ ಏನೇ ಮಾತನಾಡಿದರೂ ಅದು ಕಡಿಮೆಯೇ ಆಗಿರುತ್ತದೆ. ಅವರು ಅದನ್ನು ಹಲವು ವರ್ಷಗಳಿಂದ ಸ್ಥಿರವಾಗಿ ಮಾಡುತ್ತಿದ್ದಾರೆ. ಅವರು ಸ್ಟ್ರೈಕ್ ಅನ್ನು ತಿರುಗಿಸುವ ಮತ್ತು ಬೌಲರ್‌ಗಳನ್ನು ಎದುರಿಸುವ ರೀತಿಯೇ ಅದ್ಭುತವಾಗಿದೆ. ಅವರು ಅಂದಿನಿಂದಲೂ ಮೂಲತಃ ನುಡಿದಂತೆ ನಡೆಯುತ್ತಿದ್ದಾರೆ' ಎಂದು ಅಯ್ಯರ್ ಬಿಸಿಸಿಐ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಆಂತರಿಕ ರಕ್ತಸ್ರಾವದಿಂದಾಗಿ ಗಾಯಗೊಂಡು ದೀರ್ಘ ಕಾಲದ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿರುವ ಅಯ್ಯರ್, ಸರಣಿಯನ್ನು ಗೆಲುವಿನೊಂದಿಗೆ ಆರಂಭಿಸಲು ಸಂತೋಷಪಡುತ್ತೇನೆ ಎಂದು ಹೇಳಿದರು.
'ಸರಣಿಗೆ ಉತ್ತಮ ಆರಂಭ ಸಿಕ್ಕಿದೆ. ಸ್ವಲ್ಪ ಸಮಯದ ನಂತರ ತಂಡಕ್ಕೆ ಮರಳುತ್ತಿರುವಾಗ, ಈ ತಂಡದ ಭಾಗವಾಗಿರುವುದು ಸಂತೋಷ ತಂದಿದೆ. ಅದಕ್ಕಿಂತ ಹೆಚ್ಚಾಗಿ, ಪ್ರತಿಯೊಬ್ಬರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವುದು ಒಂದು ಉತ್ತಮ ಅನುಭವವಾಗಿತ್ತು. ನಾನು ಅದನ್ನು ಬಹಳ ಸಮಯದಿಂದ ಮಿಸ್ ಮಾಡಿಕೊಳ್ಳುತ್ತಿದ್ದೆ. ಇದೀಗ ನಾನು ಹಿಂತಿರುಗಿದ್ದಕ್ಕೆ ಸಂತೋಷವಾಗಿದೆ' ಎಂದು ಅಯ್ಯರ್ ಹೇಳಿದರು.
ವೇಗಿ ಹರ್ಷಿತ್ ರಾಣಾ ಬೌಲಿಂಗ್‌ನಲ್ಲಿ ಪ್ರಭಾವ ಬೀರಿದರು. ನ್ಯೂಜಿಲೆಂಡ್ ಆರಂಭಿಕರಾದ ಡೆವೊನ್ ಕಾನ್ವೇ ಮತ್ತು ಹೆನ್ರಿ ನಿಕೋಲ್ಸ್ (23 ಎಸೆತಗಳಲ್ಲಿ 29 ರನ್) ಅವರನ್ನು ಔಟ್ ಮಾಡಿದರು.
'ನಾನು ಪಡೆದ ಮೊದಲ ವಿಕೆಟ್ ನಿಕೋಲ್ಸ್ ಅವರದ್ದಾಗಿತ್ತು. ನಾನು ಅವರಿಗೆ ವೈಡ್ ಬೌಲಿಂಗ್ ಮಾಡಲು ಯೋಜಿಸುತ್ತಿದ್ದೆ. ವೈಡ್ ಯಾರ್ಕರ್ ಬಗ್ಗೆ ಯೋಚಿಸಿರಲಿಲ್ಲ. ಆದರೆ, ಅದು ಸರಿಯಾಗಿ ಬಿತ್ತು. ಇನ್ನೊಂದು ವಿಕೆಟ್ ಡೆವೊನ್ ಕಾನ್ವೇ ಅವರದ್ದಾಗಿದ್ದು, ಸತತ ಎರಡು ಓವರ್‌ಗಳಲ್ಲಿ ಎರಡು ವಿಕೆಟ್‌ಗಳನ್ನು ಕಬಳಿಸಿದ್ದು ಖುಷಿ ಕೊಟ್ಟಿತು' ಎಂದು ರಾಣಾ ಹೇಳಿದರು.
8ನೇ ಕ್ರಮಾಂಕದಲ್ಲಿ ಹೆಚ್ಚಿನ ಕೊಡುಗೆ ನೀಡಲು ಬ್ಯಾಟಿಂಗ್‌ನಲ್ಲಿಯೂ ಕೆಲಸ ಮಾಡುತ್ತಿದ್ದೇನೆ ಎಂದು 24 ವರ್ಷದ ಆಟಗಾರ ಹೇಳಿದರು.
'ನನ್ನ ಬ್ಯಾಟಿಂಗ್‌ಗೆ ಎಲ್ಲ ಕ್ರೆಡಿಟ್‌ಗಳು ನನ್ನ ತಂದೆಗೆ ಸಲ್ಲುತ್ತವೆ. ಏಕೆಂದರೆ, ಅವರು ಯಾವಾಗಲೂ ಭಾರತೀಯ ತಂಡದಲ್ಲಿ ಆಲ್‌ರೌಂಡರ್‌ಗಳಿಗೆ ಆರಂಭಿಕ ಅವಕಾಶಗಳು ಸಿಗುತ್ತವೆ ಎಂದು ಭಾವಿಸುತ್ತಿದ್ದರು. ನಾನು 8ನೇ ಸ್ಥಾನದಲ್ಲಿ ತಂಡಕ್ಕೆ 30-40 ರನ್‌ಗಳೊಂದಿಗೆ ಕೊಡುಗೆ ನೀಡುವ ರೀತಿಯಲ್ಲಿ ನನ್ನ ಆಟವನ್ನು ಅಭಿವೃದ್ಧಿಪಡಿಸುತ್ತಿದ್ದೇನೆ' ಎಂದು ರಾಣಾ ಹೇಳಿದರು.
Advertisement