

ಮುಂಬೈ: ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ ಬರೊಬ್ಬರಿ 4 ವರ್ಷಗಳ ಬಳಿಕ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ.
ಹೌದು.. ಐಸಿಸಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ನ ಬ್ಯಾಟರ್ ಗಳ ಶ್ರೇಯಾಂಕ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನಕ್ಕೇರಿದ್ದು, ಭಾರತದ ಮತ್ತೋರ್ವ ದಿಗ್ಗಜ ಆಟಗಾರ ರೋಹಿತ್ ಶರ್ಮಾ ಶ್ರೇಯಾಂಕ ಪಟ್ಟಿಯಲ್ಲಿ ಕೆಳಕ್ಕೆ ಕುಸಿದಿದ್ದಾರೆ.
ಭಾರತ ಪ್ರವಾಸ ಕೈಗೊಂಡಿರುವ ನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದ ಬಳಿಕ ಐಸಿಸಿ ಬ್ಯಾಟರ್ ಗಳ ಶ್ರೇಯಾಂಕ ಪಟ್ಟಿ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಕೊಹ್ಲಿ ಒಟ್ಟು 785 ರೇಟಿಂಗ್ಸ್ ನೊಂದಿಗೆ ಅಗ್ರಸ್ಥಾನಕ್ಕೇರಿದ್ದಾರೆ.
ಇನ್ನು 784 ರೇಟಿಂಗ್ಸ್ ಹೊಂದಿರುವ ನ್ಯೂಜಿಲೆಂಡ್ ತಂಡ ಡರಿಲ್ ಮೆಚೆಲ್ 2ನೇ ಸ್ಥಾನಕ್ಕೇರಿದ್ದಾರೆ.
3ನೇ ಸ್ಥಾನಕ್ಕೆ ಕುಸಿದ ರೋಹಿತ್ ಶರ್ಮಾ
ಇನ್ನು ಇಷ್ಟು ದಿನ 2ನೇ ಸ್ಥಾನದಲ್ಲಿದ್ದ ಭಾರತದ ಹಿಟ್ ಮ್ಯಾನ್ ರೋಹಿತ್ ಶರ್ಮಾ 775 ರೇಟಿಂಗ್ಸ್ ನೊಂದಿಗೆ 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ಉಳಿದಂತೆ ಅಫ್ಘಾನಿಸ್ತಾನದ ಬ್ಯಾಟರ್ ಇಬ್ರಾಹಿಂ ಝಡ್ರಾನ್ 764 ರೇಟಿಂಗ್ಸ್ ನೊಂದಿಗೆ 4ನೇ ಸ್ಥಾನದಲ್ಲಿದ್ದಾರೆ.
ಭಾರತ ತಂಡದ ಏಕದಿನ ತಂಡದ ನಾಯಕ ಶುಭ್ ಮನ್ ಗಿಲ್ 725 ರೇಟಿಂಗ್ಸ್ ನೊಂದಿಗೆ 5ನೇ ಸ್ಥಾನದಲ್ಲಿದ್ದಾರೆ.
ಉಳಿದಂತೆ ಪಾಕಿಸ್ತಾನದ ಬಾಬರ್ ಆಜಂ (722) 6ನೇ ಸ್ಥಾನ, ಐರ್ಲೆಂಡ್ ಬ್ಯಾಟರ್ ಹೆರ್ರಿ ಟೆಕ್ಟರ್ (708) 7ನೇ ಸ್ಥಾನ, ವೆಸ್ಟ್ ಇಂಡೀಸ್ ನ ಶಾಯ್ ಹೋಪ್ (701) 8ನೇ ಸ್ಥಾನ, ಶ್ರೀಲಂಕಾದ ಚರಿತ್ ಅಸಲಂಕಾ (690)9 ಮತ್ತು ಭಾರತದ ಶ್ರೇಯಸ್ ಅಯ್ಯರ್ (682) 10ನೇ ಸ್ಥಾನದಲ್ಲಿದ್ದಾರೆ.
ಇದೇ ಪಟ್ಟಿಯಲ್ಲಿ ಭಾರತದ ಮಿಸ್ಟರ್ ಡಿಪೆಂಡಬಲ್ ಕೆಎಲ್ ರಾಹುಲ್ 654 ರೇಟಿಂಗ್ಸ್ ನೊಂದಿಗೆ 11ನೇ ಸ್ಥಾನದಲ್ಲಿದ್ದಾರೆ.
4 ವರ್ಷಗಳ ಬಳಿಕ ಅಗ್ರಸ್ಥಾನಕ್ಕೆ
ಇನ್ನು ವಡೋದರಾದಲ್ಲಿ ನ್ಯೂಜಿಲೆಂಡ್‌ನ 300 ರನ್‌ಗಳ ಗುರಿಯನ್ನು ಭಾರತ ಬೆನ್ನಟ್ಟಲು ವಿರಾಟ್ ಕೊಹ್ಲಿ ಅವರ ಪ್ರದರ್ಶನ ಸಹಾಯ ಮಾಡಿತ್ತು. 37 ವರ್ಷದ ಬ್ಯಾಟಿಂಗ್ ದಿಗ್ಗಜ ಕೊಹ್ಲಿ ಕೊನೆಯ ಬಾರಿಗೆ ಜುಲೈ 2021 ರಂದು ಅಗ್ರಸ್ಥಾನದಲ್ಲಿದ್ದರು. ನಂತರ ಅಂದರೆ 4 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಬ್ಯಾಟರ್ ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಮರಳಿದ್ದಾರೆ.
ಕೊಹ್ಲಿ ಮೊದಲ ಬಾರಿಗೆ ಅಕ್ಟೋಬರ್ 2013 ರಲ್ಲಿ ಅಗ್ರ ಶ್ರೇಯಾಂಕವನ್ನು ತಲುಪಿದ್ದರು, ಇದು ಅವರ 11 ನೇ ಅವಧಿಯನ್ನು ಅಗ್ರಸ್ಥಾನವಾಗಿದೆ. ಇಲ್ಲಿಯವರೆಗೆ, ಅವರು ಒಟ್ಟು 825 ದಿನಗಳ ಕಾಲ ಈ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಇದು ಒಟ್ಟಾರೆಯಾಗಿ 10 ನೇ ಅತಿ ಉದ್ದದ ಮತ್ತು ಯಾವುದೇ ಭಾರತೀಯನಿಗೆ ಅತಿ ಹೆಚ್ಚು ಕಾಲದ ಸ್ಥಾನವನ್ನು ಗಳಿಸಿದಂತಾಗಿದೆ.
Advertisement