

ನವದೆಹಲಿ: ಮುಂಬರುವ ಟಿ 20 ವಿಶ್ವಕಪ್ ನಲ್ಲಿ ಭಾರತದಿಂದ ಪಂದ್ಯಗಳ ಸ್ಥಳಾಂತರಕ್ಕೆ ಬಾಂಗ್ಲಾದೇಶ ಒತ್ತಾಯಿಸುತ್ತಿರುವಂತೆಯೇ ಆ ರಾಷ್ಟ್ರದ ವಿರುದ್ಧ ಭಾರತ ಆಡಬಾರದು ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಮನೋಜ್ ತಿವಾರಿ ಆಗ್ರಹಿಸಿದ್ದಾರೆ.
ಮಾನವೀಯ ಕಾಳಜಿಗಳು ಒಳಗೊಂಡಿರುವಾಗ ಬಾಂಗ್ಲಾದೊಂದಿಗೆ ಕ್ರೀಡಾ ಸಂಬಂಧಗಳನ್ನು ಮುಂದುವರಿಸಬಾರದು ಎಂದು ಹೇಳಿದ್ದಾರೆ.
ಸುದ್ದಿಸಂಸ್ಥೆ ANI ಜೊತೆಗೆ ಈ ವಿಚಾರ ಕುರಿತು ಮಾತನಾಡಿದ ತಿವಾರಿ, ಹಿಂದಿನ ಘಟನೆಗಳನ್ನು ಉಲ್ಲೇಖಿಸಿ ತಮ್ಮ ನಿಲುವು ಬದಲಾಗಿಲ್ಲ ಎಂದರು. "ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದಾಗ, ಭಾರತವು ಪಾಕಿಸ್ತಾನದ ವಿರುದ್ಧ ಆಡಬಾರದು ಎಂದು ಹೇಳಿದ್ದೆ. ಸರ್ಕಾರ ಅದಕ್ಕೆ ಅವಕಾಶ ನೀಡಿದ್ದರೂ, ಅಂತಹ ಪಂದ್ಯಗಳು ನಡೆಯಬಾರದು ಎಂಬುದು ನನ್ನ ಅಭಿಪ್ರಾಯವಾಗಿತ್ತು. ಈಗಲೂ ಅದೇ ನನ್ನ ಅಭಿಪ್ರಾಯ ಎಂದಿದ್ದಾರೆ.
ಈ ವಿಚಾರ ಕ್ರಿಕೆಟ್ ಅಥವಾ ಕ್ರೀಡೆಯನ್ನು ಮೀರಿದೆ. ಬಾಂಗ್ಲಾದೇಶ, ಇಂಗ್ಲೆಂಡ್, ಆಸ್ಟ್ರೇಲಿಯಾ ಅಥವಾ ಇನ್ನೆಲ್ಲಿಯಾದರೂ ಯಾವುದೇ ದೇಶದಲ್ಲಿ ಯಾವುದೇ ಭಾರತೀಯನನ್ನು ನಿರ್ದಯವಾಗಿ ಕೊಂದರೆ, ಭಾರತವು ಆ ದೇಶದೊಂದಿಗೆ ಕ್ರೀಡಾ ಸಂಬಂಧವನ್ನು ಮುಂದುವರೆಸಬಾರದು ಎಂದರು.
"ಕ್ರೀಡೆಯನ್ನು ಅಂತಹ ಗಂಭೀರ ವಿಷಯಗಳೊಂದಿಗೆ ಬೆರೆಸಬಾರದು ಆದರೆ ಈ ಹಿಂದೆ ಪಾಕಿಸ್ತಾನ ವಿರುದ್ಧದ ಪಂದ್ಯಗಳಿಗೆ ಅವಕಾಶ ನೀಡಿರುವುದರಿಂದ ಇಂತಹ ಪಂದ್ಯಗಳು ಈಗಲೂ ಮುಂದುವರೆದಿವೆ. ಆದರೆ ನನ್ನ ವೈಯಕ್ತಿಕ ಅಭಿಪ್ರಾಯ ತುಂಬಾ ಸ್ಪಷ್ಟವಾಗಿದೆ. ಬಾಂಗ್ಲಾದೇಶದೊಂದಿಗೆ ಭಾರತ ತಂಡ ಆಡಬಾರದು ಎಂದು ಮನೋಜ್ ತಿವಾರಿ ಹೇಳಿದರು.
Advertisement