

ವಿರಾಟ್ ಕೊಹ್ಲಿ ಸಹೋದರ ವಿಕಾಸ್ ಕೊಹ್ಲಿ, ಭಾರತದ ಮಾಜಿ ಕ್ರಿಕೆಟಿಗ ಮತ್ತು ಖ್ಯಾತ ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್ ವಿರುದ್ದ ಮತ್ತೊಂದು ಕಟುವಾದ ದಾಳಿ ನಡೆಸಿದ್ದಾರೆ. ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿ 'ಸುಲಭವಾದ ಸ್ವರೂಪ'ವಾದ ಏಕದಿನ ಕ್ರಿಕೆಟ್ ಅನ್ನು ಆಡುತ್ತಿದ್ದಾರೆ ಎಂದು ಮಂಜ್ರೇಕರ್ ದೂರಿದ್ದರು ಮತ್ತು 50 ಓವರ್‌ಗಳ ಸ್ವರೂಪದಲ್ಲಿ ಮಾತ್ರ ಆಡುವ ಕೊಹ್ಲಿ ನಿರ್ಧಾರದ ಬಗ್ಗೆ ನಿರಾಸೆ ವ್ಯಕ್ತಪಡಿಸಿದ್ದರು.
ಆದಾಗ್ಯೂ, ಭಾನುವಾರ ನ್ಯೂಜಿಲೆಂಡ್ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಸೋಲು ಕಂಡಿದ್ದರೂ, ವಿರಾಟ್ ಕೊಹ್ಲಿ ಮತ್ತೊಂದು ಶತಕ ಸಿಡಿಸಿದರು. ಬಳಿಕ ಅವರ ಸಹೋದರ ಸಾಮಾಜಿಕ ಮಾಧ್ಯಮದಲ್ಲಿ ಮಂಜ್ರೇಕರ್ ಅವರ ಹಿಂದಿನ ಹೇಳಿಕೆಗಳಿಗೆ ತಿರುಗೇಟು ನೀಡಿದ್ದಾರೆ.
'ಕ್ರಿಕೆಟ್‌ನ ಸುಲಭವಾದ ಸ್ವರೂಪಕ್ಕೆ ಮಿಸ್ಟರ್ ಎಕ್ಸ್‌ಪರ್ಟ್ ಆಫ್ ಕ್ರಿಕೆಟ್ ಬಳಿ ಏನಾದರೂ ಸಲಹೆಗಳಿವೆಯೇ ಎಂದು ನನಗೆ ಆಶ್ಚರ್ಯವಾಗುತ್ತದೆ. ಸಲಹೆಗಳನ್ನು ನೀಡಲು ನೀವು ಅಲ್ಲಿರಬೇಕು. ಆದರೆ ನಾನು ಹೇಳಿದಂತೆ, ಯಾವುದನ್ನಾದರೂ ಮಾಡುವುದಕ್ಕಿಂತ ಹೇಳುವುದು ಸುಲಭ' ಎಂದು ವಿಕಾಸ್ ಕೊಹ್ಲಿ ತಮ್ಮ ಅಧಿಕೃತ ಥ್ರೆಡ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಪರೋಕ್ಷವಾಗಿ ಮಂಜ್ರೇಕರ್ ಅವರ ಟೀಕೆಗಳ ವಿರುದ್ಧ ವಿರಾಟ್ ಕೊಹ್ಲಿಯನ್ನು ಸಮರ್ಥಿಸಿಕೊಂಡಿದ್ದಾರೆ.
ಮಂಜ್ರೇಕರ್ ಅವರ ಹೇಳಿಕೆಗಳ ಬಗ್ಗೆ ವಿಕಾಸ್ ಕೊಹ್ಲಿ ಟೀಕೆ ಮಾಡುತ್ತಿರುವುದು ಇದೇ ಮೊದಲಲ್ಲ, ಕೆಲವು ದಿನಗಳ ಹಿಂದೆ ಇದೇ ವಿಷಯವನ್ನು ಉಲ್ಲೇಖಿಸಿ ಅವರು ಪೋಸ್ಟ್ ಮಾಡಿದ್ದರು.
'ಕ್ರಿಕೆಟ್ ಸುಲಭ ಎಂಬಂತೆ ಕೆಲವರು ವರ್ತಿಸುತ್ತಾರೆ. ವಿಶೇಷವಾಗಿ ಕೆಲವು ಸ್ವರೂಪಗಳು ಸುಲಭ ಎಂದು ಹೇಳುತ್ತಾರೆ. ಯಾರೋ ಒಬ್ಬರು ಕೆಲವು ದಿನಗಳ ಹಿಂದೆ ಈ ಬಗ್ಗೆ ತಮ್ಮ ಅನುಭವವನ್ನು ಹೇಳಿದ್ದರು. ಆಟಗಾರನಾಗಿ ನಿಜವಾಗಿಯೂ ಪ್ರದರ್ಶನ ನೀಡುವುದಕ್ಕಿಂತ ಅಥವಾ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕಿಂತ ಮಾತನಾಡುವುದು ತುಂಬಾ ಸುಲಭ' ಎಂದು ಅವರು ಹೇಳಿದ್ದರು.
ಭಾನುವಾರ ಕೊಹ್ಲಿ ಕೇವಲ 108 ಎಸೆತಗಳಲ್ಲಿ 124 ರನ್ ಗಳಿಸಿದರು. ಆದರೆ ರೋಹಿತ್ ಶರ್ಮಾ, ಶುಭಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಅವರಂತಹ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಉತ್ತಮ ಕೊಡುಗೆ ನೀಡದ ಕಾರಣ ಭಾರತ 337 ರನ್‌ಗಳ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾಯಿತು. ಕೊಹ್ಲಿ ತಮ್ಮ ಒಂಬತ್ತು ಲಿಸ್ಟ್ ಎ ಪಂದ್ಯಗಳಲ್ಲಿ ಇದು ನಾಲ್ಕನೇ ಶತಕವಾಗಿದೆ.
ಕೊಹ್ಲಿ ಅವರ ಏಕದಿನ ವೃತ್ತಿಜೀವನದ ಬಗ್ಗೆ ಮಂಜ್ರೇಕರ್, 'ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಎತ್ತರವನ್ನು ತಲುಪುತ್ತಿದ್ದಂತೆ, ನನ್ನ ಮನಸ್ಸು ವಿರಾಟ್ ಕೊಹ್ಲಿಯತ್ತ ಸಾಗುತ್ತಿದೆ. ಅವರು ಟೆಸ್ಟ್‌ನಿಂದ ದೂರ ಸರಿದಿದ್ದಾರೆ ಮತ್ತು ನಿವೃತ್ತಿಗೂ ಮುನ್ನ ಅವರು ಟೆಸ್ಟ್‌ನಲ್ಲಿ ಐದು ವರ್ಷ 31ರ ಸರಾಸರಿಯನ್ನು ಏಕೆ ಹೊಂದಿದ್ದಾರೆ ಎಂಬುದಕ್ಕೆ ಉತ್ತರ ಕಂಡುಕೊಳ್ಳಲು ಅವರು ತಮ್ಮ ಹೃದಯ ಮತ್ತು ಆತ್ಮವನ್ನು ಸಂಪೂರ್ಣವಾಗಿ ಹಾಕಲಿಲ್ಲ ಎಂಬುದು ದುರದೃಷ್ಟಕರ. ಏನು ಮಾಡಬಹುದಿತ್ತು ಎಂಬುದರ ಬಗ್ಗೆ ಅವರು ಯೋಚಿಸಬೇಕಿತ್ತು. ಆದರೆ, ಜೋ ರೂಟ್ ಮತ್ತು ಸ್ಟೀವ್ ಸ್ಮಿತ್, ಕೇನ್ ವಿಲಿಯಮ್ಸನ್‌ರಂತಹ ಜನರು ನಿಜವಾಗಿಯೂ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ಕೊಹ್ಲಿ ಇಲ್ಲದಿರುವುದು ನನಗೆ ಬೇಸರವಾಗಿದೆ' ಎಂದು ಮಂಜ್ರೇಕರ್ ತಿಳಿಸಿದ್ದಾರೆ.
'ಪರವಾಗಿಲ್ಲ, ವಿರಾಟ್ ಕೊಹ್ಲಿ ಕ್ರಿಕೆಟ್‌ನಿಂದ ದೂರ ಸರಿದಿದ್ದಾರೆ. ಎಲ್ಲ ಸ್ವರೂಪದ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಆದರೆ, ಅವರು ಏಕದಿನ ಕ್ರಿಕೆಟ್ ಆಡಲು ಆಯ್ಕೆ ಮಾಡಿಕೊಂಡಿರುವುದು ನಿಜಕ್ಕೂ ನನಗೆ ಹೆಚ್ಚು ನಿರಾಶೆಯನ್ನುಂಟುಮಾಡಿದೆ. ಏಕೆಂದರೆ, ಇದು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗೆ, ನಾನು ಮೊದಲೇ ಹೇಳಿದಂತೆ ಇದು ಅತ್ಯಂತ ಸುಲಭವಾದ ಸ್ವರೂಪ' ಎಂದಿದ್ದರು.
Advertisement