

ಬುಧವಾರ ಚೆಸ್ಟರ್-ಲೆ-ಸ್ಟ್ರೀಟ್‌ನ ರಿವರ್‌ಸೈಡ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟಿ20ಐ ಪಂದ್ಯದಲ್ಲಿ ಟಾಸ್ ಗೆದ್ದ ನಂತರ ಭಾರತದ ನಾಯಕ ಶ್ರೇಯಸ್ ಅಯ್ಯರ್ ಅಚ್ಚರಿಯ ನಿರ್ಧಾರ ತೆಗೆದುಕೊಂಡರು. ಮೋಡ ಕವಿದ ವಾತಾವರಣವಿತ್ತು, ಸುತ್ತಲೂ ಮಳೆಯ ಭೀತಿ ಇತ್ತು. ಅಯ್ಯರ್ ಸ್ವತಃ ಹೇಳಿದಂತೆ 'ಪಿಂಚ್‌ನಲ್ಲಿ ಸಾಕಷ್ಟು ಹುಲ್ಲು ಇತ್ತು'. ಪರಿಸ್ಥಿತಿಯನ್ನು ಗಮನಿಸಿದರೆ, ಟಾಸ್ ಗೆದ್ದ ಯಾವುದೇ ನಾಯಕ ಮೊದಲು ಬೌಲಿಂಗ್ ಮಾಡಲು ಇಷ್ಟಪಡುತ್ತಿದ್ದರು. ಆದರೆ, ಭಾರತದ ಟಿ20ಐ ನಾಯಕ ಅದಕ್ಕೆ ವಿರುದ್ಧವಾದ ನಿರ್ಧಾರ ತೆಗೆದುಕೊಂಡರು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.
ಐರ್ಲೆಂಡ್ ಸರಣಿಯ ಸೋಲೇ ಶ್ರೇಯಸ್ ಅಯ್ಯರ್ ಅವರ ನಿರ್ಧಾರಕ್ಕೆ ಕಾರಣ ಎಂದು ಭಾರತದ ಮಾಜಿ ಆಟಗಾರ ದಿನೇಶ್ ಕಾರ್ತಿಕ್ ಹೇಳಿದ್ದಾರೆ. ಅಯ್ಯರ್ ನೇತೃತ್ವದ ಭಾರತ ತಂಡವು ಐರಿಶ್ ವಿರುದ್ಧದ ಎರಡು ಪಂದ್ಯಗಳ T20I ಸರಣಿಯಲ್ಲಿ ವೈಟ್‌ವಾಶ್ ಆಗಿತ್ತು. ಎರಡೂ ಪಂದ್ಯಗಳಲ್ಲಿ ಭಾರತ ತಂಡವು ಗುರಿಗಳನ್ನು ಬೆನ್ನಟ್ಟಲು ವಿಫಲವಾಯಿತು. ಮೊದಲ ಪಂದ್ಯವನ್ನು 34 ರನ್‌ಗಳಿಂದ ಮತ್ತು ಎರಡನೇ ಪಂದ್ಯವನ್ನು ಕೇವಲ ಒಂದು ರನ್‌ನಿಂದ ಸೋತರು.
'ಭಾರತವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು ಉತ್ತಮ ನಿರ್ಧಾರವಾಗಿತ್ತು; ಆದಾಗ್ಯೂ, ಹವಾಮಾನದಲ್ಲಿ ಆಗಾಗ ವ್ಯತ್ಯಯವಾಗುವ ಸಾಧ್ಯತೆ ಇದ್ದೇ ಇತ್ತು... ಸಾಮಾನ್ಯವಾಗಿ ತಂಡಗಳು ಗುರಿಯನ್ನು ಬೆನ್ನಟ್ಟಿ ಗೆಲ್ಲುವತ್ತಲೇ ಹೆಚ್ಚು ಒಲವು ತೋರುತ್ತವೆ' ಎಂದು ಕಾರ್ತಿಕ್ 'ಕ್ರಿಕ್‌ಬಜ್'ಗೆ ತಿಳಿಸಿದರು.
'ಇಲ್ಲಿ ಸಂಜೆ ವಾತಾವರಣ ಸ್ವಲ್ಪ ವಿಚಿತ್ರವಾಗಿತ್ತು, ಏಕೆಂದರೆ ಮಳೆಯ ಭೀತಿ ಸದಾ ಕಾಡುತ್ತಿತ್ತು; ಜೊತೆಗೆ ಐರ್ಲೆಂಡ್ ವಿರುದ್ಧದ ಪಂದ್ಯದ ಪ್ರಭಾವವೂ ಸ್ವಲ್ಪಮಟ್ಟಿಗೆ ಇದ್ದಿರಬಹುದು ಎಂದು ನನಗೆ ಅನ್ನಿಸುತ್ತದೆ. ಹಾಗಾಗಿ, 'ಬೆನ್ನಟ್ಟುವ (ಚೇಸ್ ಮಾಡುವ) ಬದಲು ಮೊದಲು ಬ್ಯಾಟಿಂಗ್ ಮಾಡೋಣ' ಎಂದು ಭಾರತ ನಿರ್ಧರಿಸಿತು' ಎಂದು ಅವರು ಹೇಳಿದರು.
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ನಂತರ ಐರ್ಲೆಂಡ್ ಸರಣಿಯ ಬಗ್ಗೆ ಮಾತನಾಡುತ್ತಾ ಅಯ್ಯರ್, 'ಐರ್ಲೆಂಡ್ ಸರಣಿ ಈಗ ಗತಕಾಲದ ವಿಷಯ. ಇದು ಹೊಸ ಸರಣಿ, ಐದು ಪಂದ್ಯಗಳಿವೆ ಮತ್ತು ಗೆಲ್ಲಲು ಉತ್ತಮ ಅವಕಾಶವಿದೆ. ಖಂಡಿತವಾಗಿಯೂ, ಇದು ನಮಗೆ ಸಿಕ್ಕಿರುವ ಒಂದು ದೊಡ್ಡ ಅವಕಾಶ. ನಾಯಕನಾಗಿ ಇದು ನನ್ನ ಎರಡನೇ ಸರಣಿ; ಹಾಗಾಗಿ ನಾನು ಸಾಕಷ್ಟು ಉತ್ಸುಕನಾಗಿದ್ದೇನೆ. ನಮಗೆ ಬೇಕಾದದ್ದು ನಮಗೆ ಸಿಕ್ಕಿದೆ. ನಿನ್ನೆ ಇಲ್ಲಿ ಅಭ್ಯಾಸ ನಡೆಸಿದೆವು ಮತ್ತು ಇಲ್ಲಿನ ವಾತಾವರಣಕ್ಕೆ ಚೆನ್ನಾಗಿ ಹೊಂದಿಕೊಂಡಿದ್ದೇವೆ. ಆದ್ದರಿಂದ, ರೋಚಕ ಸರಣಿಯನ್ನು ಎದುರು ನೋಡುತ್ತಿದ್ದೇನೆ' ಎಂದರು.
ಪಿಚ್‌ನ ಸ್ಥಿತಿಯ ಕುರಿತು ಮಾತನಾಡುತ್ತಾ, 'ವಿಕೆಟ್ ಮೇಲೆ ಸಾಕಷ್ಟು ಹುಲ್ಲು ಇದೆ. ನಾವು ನಿನ್ನೆ ಕೂಡ ಇದೇ ಪಿಚ್‌ನಲ್ಲಿ ಅಭ್ಯಾಸ ಮಾಡಿದ್ದೆವು. ಹೀಗಾಗಿ, ವಿಕೆಟ್ ಹೇಗೆ ವರ್ತಿಸುತ್ತದೆ ಎಂದು ನಿಖರವಾಗಿ ಹೇಳಲಾಗದಿದ್ದರೂ, ಖಂಡಿತವಾಗಿಯೂ ಆಟದಲ್ಲಿ ಹೆಚ್ಚಿನ ತೀವ್ರತೆ ಇರಲಿದೆ' ಎಂದು ಹೇಳಿದರು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ 7 ವಿಕೆಟ್‌ಗೆ 189 ರನ್ ಗಳಿಸಿತು. ಆದರೆ ಇನಿಂಗ್ಸ್‌ಗಳ ನಡುವಿನ ವಿರಾಮದ ಸಮಯದಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಅಂತಿಮವಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು.