

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು, ವೈಭವ್ ಸೂರ್ಯವಂಶಿ ಅವರ ಭಾರತ ತಂಡದ ಪದಾರ್ಪಣೆಯಲ್ಲಿನ ವಿಳಂಬದ ಕುರಿತಾದ ಚರ್ಚೆಗಳಿಗೆ ಪ್ರತಿಕ್ರಿಯಿಸಿದ್ದು, ಈ ನಿರ್ಧಾರವನ್ನು ತಂಡದ ನಾಯಕ ಶ್ರೇಯಸ್ ಅಯ್ಯರ್ ಮತ್ತು ಕೋಚ್ ಗೌತಮ್ ಗಂಭೀರ್ ತೆಗೆದುಕೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಸುನೀಲ್ ಗವಾಸ್ಕರ್, ರವಿ ಶಾಸ್ತ್ರಿ ಮತ್ತು ಎಬಿ ಡಿ ವಿಲಿಯರ್ಸ್ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು, ಸದ್ಯ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಯಲ್ಲಿ 15 ವರ್ಷದ ವೈಭವ್ ಅವರನ್ನು ಭಾರತದ ಆಡುವ ಹನ್ನೊಂದರ ಬಳಗಕ್ಕೆ ಸೇರಿಸಿಕೊಳ್ಳುವಂತೆ ಪ್ರತಿಪಾದಿಸಿದ ಬೆನ್ನಲ್ಲೇ, ವೈಭವ್ ಸೂರ್ಯವಂಶಿ ಪ್ರತಿಭಾವಂತರಾಗಿದ್ದರೂ, ಅವರು ತಮ್ಮ ಅವಕಾಶಕ್ಕಾಗಿ ಕಾಯಲೇಬೇಕಾಗುತ್ತದೆ ಎಂದು ಶುಕ್ಲಾ ಹೇಳಿದ್ದಾರೆ.
ಟೈಮ್ಸ್ ನೌ ಜೊತೆ ಮಾತನಾಡಿದ ಬಿಸಿಸಿಐ ಉಪಾಧ್ಯಕ್ಷರು, ನಾಯಕ ಶ್ರೇಯಸ್ ಅಯ್ಯರ್ ಮತ್ತು ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರು ಸೂರ್ಯವಂಶಿ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅವಕಾಶ ಬಂದಾಗ ಅವರು ಖಂಡಿತವಾಗಿಯೂ ಅವರಿಗೆ ಅವಕಾಶ ನೀಡುತ್ತಾರೆ. ವೈಭವ್ ಅಪಾರ ಪ್ರತಿಭಾನ್ವಿತ ಮತ್ತು ಅದನ್ನು ಐಪಿಎಲ್‌ನಲ್ಲಿ ಪ್ರದರ್ಶಿಸಿದ್ದರು. ವೈಭವ್ ಅವರ ಚೊಚ್ಚಲ ಪಂದ್ಯ ವಿಳಂಬದ ಬಗ್ಗೆ ಅನಗತ್ಯ ಹೇಳಿಕೆಗಳನ್ನು ನೀಡುವ ಅಗತ್ಯವಿಲ್ಲ. ಅಂತಹ ನಿರ್ಧಾರಗಳನ್ನು ತಂಡದ ನಿರ್ವಹಣೆಯ ಬುದ್ಧಿವಂತಿಕೆಗೆ ಬಿಡಬೇಕು ಎಂದು ಹೇಳಿದರು.
'ಅವರು ಅತ್ಯಂತ ಪ್ರತಿಭಾವಂತ ಆಟಗಾರ ಎಂಬುದು ನಮ್ಮ ಅಭಿಪ್ರಾಯವೂ ಹೌದು ಮತ್ತು ಐಪಿಎಲ್ (IPL) ವೇಳೆ ಅವರು ಅದನ್ನು ಸಾಬೀತುಪಡಿಸಿದ್ದಾರೆ. ತಂಡದ ಆಡಳಿತ ಮಂಡಳಿ ಮತ್ತು ಕೋಚ್‌ಗಳ ವಿರುದ್ಧ ಅನೇಕ ಟೀಕೆಗಳು ವ್ಯಕ್ತವಾಗುವುದನ್ನು ನಾನು ಗಮನಿಸಿದ್ದೇನೆ; ಆದರೆ, ಅಂತಿಮ ನಿರ್ಧಾರವನ್ನು ಕೋಚ್ ಮತ್ತು ನಾಯಕರೇ ತೆಗೆದುಕೊಳ್ಳುತ್ತಾರೆ ಎಂಬುದನ್ನು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಅವರು ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ ಮತ್ತು ಸೂಕ್ತ ಅವಕಾಶ ಬಂದಾಗ ಖಂಡಿತವಾಗಿಯೂ ಅವರಿಗೆ ಆಡುವ ಅವಕಾಶವನ್ನು ನೀಡುತ್ತಾರೆ. ಆದ್ದರಿಂದ, ಇಂತಹ ನಿರ್ಧಾರಗಳನ್ನು ತಂಡದ ಆಡಳಿತ ಮಂಡಳಿಯ ವಿವೇಚನೆಗೆ ಬಿಟ್ಟುಬಿಡಬೇಕು. ಈ ವಿಷಯದ ಬಗ್ಗೆ ಏಕೆ ಇಂತಹ ಅನಗತ್ಯ ಟೀಕೆಗಳನ್ನು ಮಾಡಲಾಗುತ್ತಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ' ಎಂದು ತಿಳಿಸಿದರು.