

ಭಾರತದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ಕಪಿಲ್ ದೇವ್ ಮತ್ತು ಯೋಗರಾಜ್ ಸಿಂಗ್ ಸಮಕಾಲೀನರು. ಅವರು ಒಂದೇ ತರಬೇತುದಾರ ದೇಶ್ ಪ್ರೇಮ್ ಆಜಾದ್ ಅವರಿಂದ ಮಾರ್ಗದರ್ಶನ ಪಡೆದರು ಮತ್ತು ವಿವಿಧ ಹಂತದ ಯಶಸ್ಸನ್ನು ಗಳಿಸಿ ಭಾರತಕ್ಕಾಗಿ ಆಡಿದರು. ಕಪಿಲ್ ವಿಶ್ವದ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದರು ಮತ್ತು ಭಾರತವನ್ನು 1983ರ ವಿಶ್ವಕಪ್ ಪ್ರಶಸ್ತಿಗೆ ಕೊಂಡೊಯ್ದರು. ಆಲ್‌ರೌಂಡರ್ ಆಗಿರುವ ಯೋಗರಾಜ್ ಸಿಂಗ್ ಆರು ಏಕದಿನ ಮತ್ತು ಒಂದು ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಅವರ ಅಂತರರಾಷ್ಟ್ರೀಯ ವೃತ್ತಿಜೀವನವು ಅಭಿವೃದ್ಧಿ ಹೊಂದಲಿಲ್ಲ. ಯೋಗರಾಜ್ ಅವರ ಮಗ ಯುವರಾಜ್ ಸಿಂಗ್ ಭಾರತಕ್ಕಾಗಿ ಆಡಿದರು. ಅವರು 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್‌ನಲ್ಲಿ ಪ್ಲೇಯರ್ ಆಫ್ ದ ಟೂರ್ನಮೆಂಟ್ ಆಗಿದ್ದರು.
ಇದೇ ವೇಳೆ, ಯೋಗರಾಜ್ ಅವರು ಕಪಿಲ್ ಬಗ್ಗೆ ಆಗಾಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದರು. 'ಕಪಿಲ್ ದೇವ್ ಅವರು ಭಾರತ, ಉತ್ತರ ವಲಯ ಮತ್ತು ಹರಿಯಾಣ ತಂಡಗಳ ನಾಯಕರಾದಾಗ, ಯಾವುದೇ ಕಾರಣವಿಲ್ಲದೆ ನನ್ನನ್ನು ತಂಡದಿಂದ ಕೈಬಿಟ್ಟರು' ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.
'ನಾನು ಕಪಿಲ್‌ನನ್ನು ಪ್ರಶ್ನಿಸಬೇಕೆಂದು ನನ್ನ ಪತ್ನಿ (ಯುವಿ ಅವರ ತಾಯಿ) ಬಯಸಿದ್ದರು. ಆ 'ಬದ್ಮಾಶ್'ಗೆ ತಕ್ಕ ಪಾಠ ಕಲಿಸುವುದಾಗಿ ನಾನು ಅವಳಿಗೆ ಹೇಳಿದೆ. ನಾನು ನನ್ನ ಪಿಸ್ತೂಲ್ ತೆಗೆದುಕೊಂಡು ಸೆಕ್ಟರ್ 9ರಲ್ಲಿರುವ ಕಪಿಲ್‌ನ ಮನೆಗೆ ಹೋದೆ. ಅವನು ತನ್ನ ತಾಯಿಯೊಂದಿಗೆ ಹೊರಗೆ ಬಂದ. ನಾನು ಅವನನ್ನು ಹತ್ತಾರು ಬಾರಿ ಬೈದೆ. 'ನಿನ್ನಿಂದಾಗಿ ನಾನು ಒಬ್ಬ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ ಮತ್ತು ನೀನು ಮಾಡಿದ ಕೆಲಸಕ್ಕೆ ತಕ್ಕ ಬೆಲೆ ತೆರಲೇಬೇಕು' ಎಂದು ನಾನು ಅವನಿಗೆ ಹೇಳಿದೆ' ಎಂದು ತಿಳಿಸಿದರು.
ಇದಾದ ಬಳಿಕ ಯೋಗರಾಜ್ ಸಿಂಗ್ ಅವರ ಮಗ ಯುವರಾಜ್ ಸಿಂಗ್ ಸಂದರ್ಶನವೊಂದರಲ್ಲಿ ಕಪಿಲ್ ದೇವ್ ಅವರಲ್ಲಿ ಕ್ಷಮೆ ಕೋರಿದರು.
'ಅವರು ಹಾಗೆ ಮಾಡಬೇಕಾದ ಅಗತ್ಯವಿರಲಿಲ್ಲ. ಕೆಲವೊಮ್ಮೆ ಇಂತಹ ಘಟನೆಗಳು ನಡೆಯುತ್ತವೆ. ಅವರು ಒಬ್ಬ ಶ್ರೇಷ್ಠ ಕ್ರಿಕೆಟಿಗ. ಅವರು ಎಂತಹ ಅದ್ಭುತ ಕ್ರಿಕೆಟಿಗರಾಗಿದ್ದರು ಮತ್ತು ದೇಶಕ್ಕೆ ಎಂತಹ ಸೇವೆ ಸಲ್ಲಿಸಿದ್ದರು! ಅವರು ಈ ಆಟವನ್ನು ಇನ್ನಷ್ಟು ಜನಪ್ರಿಯಗೊಳಿಸಿದರು ಎಂದು ನಾನು ಭಾವಿಸುತ್ತೇನೆ. ಅವರು ಕ್ರಿಕೆಟ್ ಆಡಿದ ರೀತಿಗಾಗಿ ಜನರು ಅವರನ್ನು ಪ್ರೀತಿಸುತ್ತಾರೆ' ಎಂದು ಕಪಿಲ್ ದೇವ್ ಇತ್ತೀಚೆಗೆ 'ಸ್ಪೋರ್ಟ್ಸ್ ಟಕ್' (Sports Tak) ಪಾಡ್‌ಕಾಸ್ಟ್‌ನಲ್ಲಿ ಹೇಳಿದರು.
ಆಗ ಕಪಿಲ್ ದೇವ್ ಅವರನ್ನು ಯೋಗರಾಜ್ ಸಿಂಗ್ ತಮ್ಮ ಬಗ್ಗೆ ನೀಡಿದ ಹೇಳಿಕೆಗಳ ಕುರಿತು ನೇರವಾಗಿ ಪ್ರಶ್ನಿಸಲಾಯಿತು. 'ನೀವು ಸ್ನೇಹಿತರಾಗಿ ಬಂದರೆ ಮಾತ್ರ ಅವರು ನಿಮ್ಮನ್ನು ಅಪ್ಪಿಕೊಳ್ಳುವುದಾಗಿ ಹೇಳಿದ್ದಾರೆ' ಎಂದು ನಿರೂಪಕರು ಹೇಳಿದರು.
'ಅವರು ಏನು ಹೇಳಲು ಪ್ರಯತ್ನಿಸುತ್ತಿದ್ದಾರೆಂದು ನನಗೆ ತಿಳಿದಿಲ್ಲ. ನಾನು ಈಗಲೂ ಅವರ ಸ್ನೇಹಿತನಾಗಿಯೇ ಇದ್ದೇನೆ; ನನ್ನ ಕಡೆಯಿಂದ ಯಾವುದೇ ಸಮಸ್ಯೆಯಿಲ್ಲ. ಆದರೆ, ಜೀವನದಲ್ಲಿ ಕಹಿ ಮನಸ್ಥಿತಿಯವರನ್ನು ಭೇಟಿಯಾಗಲು ನನಗೆ ಇಷ್ಟವಿಲ್ಲ; ಸಂತೋಷವಾಗಿರುವವರನ್ನು ಭೇಟಿಯಾಗಲು ನಾನು ಇಷ್ಟಪಡುತ್ತೇನೆ. ಜೀವನದಲ್ಲಿ ಏನೇ ಇದ್ದರೂ, ನಾವು ಮುಂದೆ ಸಾಗಲೇಬೇಕು. ಆದರೆ ಒಬ್ಬ ವ್ಯಕ್ತಿ ಕಹಿ ಮನಸ್ಥಿತಿಯವರಾಗಿದ್ದರೆ, ಜನರು ಅವರನ್ನು ಪ್ರೀತಿಸುವುದಿಲ್ಲ. ಅವರ ಮಗ ಅತ್ಯುತ್ತಮ ಸಾಧನೆ ಮಾಡಿದ್ದಾರೆ; ಹೀಗಾಗಿ ಅವರು ಸಂತೋಷವಾಗಿರಬೇಕು ಮತ್ತು ನೆಮ್ಮದಿಯಿಂದ ಬಾಳಬೇಕು' ಎಂದು ಕಪಿಲ್ ಹೇಳಿದರು.
'ಯೊರೊಬ್ಬರಿಗೂ ಎಲ್ಲವೂ ಸಿಗುವುದಿಲ್ಲ. ಕೆಲವೊಮ್ಮೆ ಅದು ನಿಮಗೆ ಸಿಗುತ್ತದೆ, ಇನ್ನು ಕೆಲವೊಮ್ಮೆ ನಿಮ್ಮ ಕುಟುಂಬಕ್ಕೆ ಸಿಗುತ್ತದೆ. ಅಂತಿಮವಾಗಿ, ನೀವು ಸಂತೋಷವಾಗಿರಬೇಕೇ ಹೊರತು ಕಹಿ ಭಾವನೆಯನ್ನು ಹೊಂದಿರಬಾರದು. ಕಹಿ ಮನಸ್ಥಿತಿಯ ವ್ಯಕ್ತಿಗೆ ಈ ಜಗತ್ತಿನಲ್ಲಿ ಸ್ಥಾನವಿಲ್ಲ. ವಿಷಯಗಳಿಗೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ ಎಂಬುದೇ ನಿಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ. ನಾನು ಯಾರನ್ನಾದರೂ ಕಪಾಳಮೋಕ್ಷ ಮಾಡಿದರೆ ಅಥವಾ ನಿಂದಿಸಿದರೆ ಅದರಿಂದೇನು ಪ್ರಯೋಜನ? ನೀವು ಜೀವನದಲ್ಲಿ ಮುಂದೆ ಸಾಗಬೇಕು. ಜಗತ್ತಿನಲ್ಲಿ ಎಷ್ಟೆಲ್ಲ ಕಂಡಿರುವ, ಏಳು-ಬೀಳುಗಳನ್ನು ನೋಡಿದ ವ್ಯಕ್ತಿ ನೀವು... ಭಾರತ ತಂಡದ ಪರ ಆಡುವ ಹಾಗೂ ಚಿತ್ರಗಳಲ್ಲಿ ನಟಿಸುವ ಅವಕಾಶ ಎಷ್ಟು ಜನರಿಗೆ ಸಿಕ್ಕಿದೆ? ಅನೇಕರಿಗಿಂತ ಹೆಚ್ಚು ನೀವು ಈಗಾಗಲೇ ಪಡೆದಿದ್ದೀರಿ. ಆದರೂ ನೀವು ಅತೃಪ್ತರಾಗಿದ್ದರೆ, ಅದು ನಿಮ್ಮ ಅಸಂತೋಷವಷ್ಟೇ' ಎಂದು ತಿಳಿಸಿದರು.
'ಯೋಗರಾಜ್ ಬಂದು ತಮ್ಮನ್ನು ಅಪ್ಪಿಕೊಂಡರೆ ನನಗೆ ಯಾವುದೇ ಅಭ್ಯಂತರವಿಲ್ಲ. ಅವರು ನನ್ನ ಬಾಲ್ಯದ ಸ್ನೇಹಿತ. ನಾವು ಬೇರೆ ಬೇರೆ ಹಾದಿಗಳನ್ನು ಹಿಡಿದೆವು. ಆದರೆ, ನಾವು ಒಟ್ಟಿಗೆ ಅದ್ಭುತ ಸಮಯವನ್ನು ಕಳೆದಿದ್ದೆವು; ಒಟ್ಟಿಗೇ ಬೆಳೆದೆವು. ನಿಮಗೆ ಮದುವೆಯಾಗಿ ನಂತರ ವಿಚ್ಛೇದನವಾದರೂ, ಒಟ್ಟಿಗೆ ಕಳೆದ ಆ ಒಳ್ಳೆಯ ದಿನಗಳನ್ನು ಮರೆಯಬಾರದು. ಕೆಲವೊಮ್ಮೆ ಮನಸ್ಸಿನಲ್ಲಿ ಕಹಿ ಭಾವನೆ ಬೆಳೆದು ಒಳ್ಳೆಯ ಕ್ಷಣಗಳನ್ನು ಮರೆತುಬಿಡುತ್ತೇವೆ. ಆದರೆ ನನಗೆ ಆ ಒಳ್ಳೆಯ ದಿನಗಳು ನೆನಪಿವೆ' ಎಂದು ಕಪಿಲ್ ದೇವ್ ನುಡಿದರು.