ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆಯಲಿರುವ ಕೊನೆಯ ಮತ್ತು ಮೂರನೇ ಏಕದಿನ ಪಂದ್ಯವು ರಾಷ್ಟ್ರೀಯ ತಂಡದ ಪರ ರೋಹಿತ್ ಶರ್ಮಾ ಅವರ ಕೊನೆಯ ಪಂದ್ಯವಾಗಬಹುದು ಎಂಬ ಊಹಾಪೋಹಗಳ ನಡುವೆಯೇ, ಅವರ ಭವಿಷ್ಯದ ಕುರಿತು ಚರ್ಚೆಯಾಗುತ್ತಿರುವ ಸಮಯದ ಬಗ್ಗೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಆರ್ ಅಶ್ವಿನ್ ಪ್ರಶ್ನೆ ಎತ್ತಿದ್ದಾರೆ. 2027ರ ಏಕದಿನ ವಿಶ್ವಕಪ್‌ಗೆ ಮುನ್ನ ಆಯ್ಕೆಗಾರರು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಎಂಬ ಅನುಭವಿ ಜೋಡಿ ಜೊತೆಗೆ ಮುಂದೆ ಸಾಗಲು (ಅವರನ್ನು ತಂಡದಿಂದ ಕೈಬಿಡಲು) ಬಯಸಿದ್ದಲ್ಲಿ, ಆ ನಿರ್ಧಾರವನ್ನು ಬಹಳ ಮೊದಲೇ ತಿಳಿಸಬೇಕಿತ್ತು ಎಂದು ಅಶ್ವಿನ್ ಹೇಳಿದ್ದಾರೆ.
ಮುಂಬರುವ ಏಕದಿನ ವಿಶ್ವಕಪ್‌ಗಾಗಿ ಬಿಸಿಸಿಐನ ಯೋಜನೆಗಳಲ್ಲಿ ರೋಹಿತ್ ಶರ್ಮಾ ಇಲ್ಲ ಎಂದು ವರದಿಗಳು ಹೇಳಿದ್ದರೂ, ಭಾನುವಾರದ ಪಂದ್ಯವು ರೋಹಿತ್ ಅವರ ಕೊನೆಯ ಪಂದ್ಯವಾಗಿರುವುದಿಲ್ಲ, ಈ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತಕ್ಕೆ ಇನ್ನೂ ರೋಹಿತ್ ಮತ್ತು ವಿರಾಟ್ ಅವರ ಅನುಭವದ ಅಗತ್ಯವಿದೆ ಮತ್ತು ಯಾವುದೇ ರೀತಿಯ ಅನಿಶ್ಚಿತತೆಗೆ ಅವಕಾಶ ನೀಡದಂತೆ ಬಿಸಿಸಿಐಗೆ ಅಶ್ವಿನ್ ಆಗ್ರಹಿಸಿದರು.
ಆಶ್ ಕಿ ಬಾತ್'ನಲ್ಲಿ ಮಾತನಾಡಿದ ಅಶ್ವಿನ್, 'ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ನಾವು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದೇವೆ. ನಮಗೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಅಗತ್ಯವಿದೆಯೇ? ನನ್ನನ್ನು ಕೇಳಿದರೆ, ಆ ಅನುಭವ ನಮಗೆ ಖಂಡಿತವಾಗಿಯೂ ಬೇಕು ಎಂದು ನಾನು ಹೇಳುತ್ತೇನೆ. ಯಶಸ್ವಿ ಜೈಸ್ವಾಲ್ ತಂಡದಲ್ಲಿ ಸ್ಥಾನ ಪಡೆಯಲು ತೀವ್ರ ಪೈಪೋಟಿ ನೀಡುತ್ತಿದ್ದಾರೆ ಎಂಬುದು ನನಗೆ ತಿಳಿದಿದೆ; ಆದರೆ, ಆಯ್ಕೆಗಾರರಾಗಿ, ಕೋಚ್ ಆಗಿ ಅಥವಾ ನಾಯಕರಾಗಿ 2027ರ ವಿಶ್ವಕಪ್‌ನಲ್ಲಿ ಈ ಆಟಗಾರರು ನಮಗೆ ಬೇಡ ಎಂದು ನಿಮಗೆ ಎಂದಾದರೂ ಅನ್ನಿಸಿದ್ದರೆ, ಅದನ್ನು ನೀವು ಚಾಂಪಿಯನ್ಸ್ ಟ್ರೋಫಿ ಮುಗಿದ ನಂತರವೇ ಸ್ಪಷ್ಟಪಡಿಸಬಹುದಿತ್ತು' ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
ಹಿರಿಯ ಆಟಗಾರರ ವಿಷಯದಲ್ಲಿ ಪ್ರಾಮಾಣಿಕ ಸಂವಹನ ಅತ್ಯಂತ ಮುಖ್ಯ. 'ನೀವು ಒಬ್ಬ ಆಟಗಾರನ ಬಳಿ ಹೋಗಿ, 'ನಾವು ನಿಮ್ಮನ್ನು ತಂಡದಿಂದ ಕೈಬಿಡಲು ಬಯಸುತ್ತೇವೆ' ಎಂದು ಹೇಳಿದರೆ, ಅದು ಯಾವುದೇ ಆಟಗಾರನಿಗೂ ಇಷ್ಟವಾಗುವುದಿಲ್ಲ. ಯಾವುದೇ ಆಟಗಾರನಿಗೆ ಒಂದು ಸರಣಿ ಕಳಪೆಯಾಗಿ ಹೋಗಬಹುದು. ಆದರೆ, ಆ ವಿಷಯದ ಬಗ್ಗೆ ಆಟಗಾರನೊಂದಿಗೆ ಸ್ಪಷ್ಟವಾಗಿ ಮಾತನಾಡಬೇಕು' ಎಂದರು.
'ನನ್ನ ವಿಷಯಕ್ಕೆ ಬಂದರೆ, ನಾವು ಬಾಂಗ್ಲಾದೇಶದ ವಿರುದ್ಧ (ಸ್ವದೇಶದಲ್ಲಿ) ಆಡಿದಾಗ ನಾನು 'ಪ್ಲೇಯರ್ ಆಫ್ ದಿ ಸೀರೀಸ್' ಆಗಿದ್ದೆ. ಆದರೆ, ನ್ಯೂಜಿಲೆಂಡ್ ವಿರುದ್ಧ ನಾವು ಉತ್ತಮವಾಗಿ ಆಡಲಿಲ್ಲ ಮತ್ತು ಅದಕ್ಕೆ ನಾನು ಸಂಪೂರ್ಣ ಜವಾಬ್ದಾರಿಯನ್ನು ಹೊರುತ್ತೇನೆ. ನಾವು ಆಸ್ಟ್ರೇಲಿಯಾಕ್ಕೆ ಹೋದಾಗ, ಕೋಚ್ ನನ್ನ ಬಳಿ ಬಂದು, ನನ್ನನ್ನು ಪರಿಗಣಿಸದಿರುವ ನಿರ್ಧಾರದ ಬಗ್ಗೆ ಮಾತನಾಡಿದಾಗ, ನಾನು ಅದನ್ನು ಒಪ್ಪಿಕೊಂಡಿದ್ದೆ' ಎಂದು ಹೇಳಿದರು."
ತಂಡದ ಆಡಳಿತ ಮಂಡಳಿಯಿಂದ ತಮಗೆ ಅಗತ್ಯವಿಲ್ಲ ಎಂಬ ಭಾವನೆ ಮೂಡಿದಾಗ ಆಟಗಾರರು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಿಲ್ಲ ಎಂದು ಅಶ್ವಿನ್ ಹೇಳಿದರು.
'ರೋಹಿತ್ ಮತ್ತು ವಿರಾಟ್ ತಾವು ತಂಡಕ್ಕೆ ಅಗತ್ಯವಿಲ್ಲ ಎಂದು ಭಾವಿಸಿದರೆ, ಅವರು ತಮ್ಮ ಅತ್ಯುತ್ತಮ ಆಟವನ್ನು ಪ್ರದರ್ಶಿಸಲು ಸಾಧ್ಯವಿಲ್ಲ. ಎರಡನೆಯದಾಗಿ, ಅಲ್ಲಿರುವುದು ಅವರಿಗೆ ಮುಜುಗರ ಅಥವಾ ಕೀಳರಿಮೆಯ ಭಾವನೆಯನ್ನು ಉಂಟುಮಾಡುತ್ತದೆ. ಯಾರೂ ನಿಮ್ಮನ್ನು ಬಯಸದ ಮನೆಯಲ್ಲಿ ನೀವು ವಾಸಿಸಲು ಸಾಧ್ಯವೇ?' ಎಂದು ಅಶ್ವಿನ್ ಪ್ರಶ್ನಿಸಿದರು.
ಏಕದಿನ ವಿಶ್ವಕಪ್‌ಗೆ ಒಂದು ವರ್ಷಕ್ಕಿಂತ ಕಡಿಮೆ ಸಮಯ ಇರುವುದರಿಂದ ಈಗ ಈ ವಿಷಯದ ಕುರಿತು ಚರ್ಚೆಯಾಗುತ್ತಿರುವುದಕ್ಕೆ ಅಶ್ವಿನ್ ವಿರೋಧ ವ್ಯಕ್ತಪಡಿಸಿದರು.
'ಎಲ್ಲ ಊಹಾಪೋಹಗಳನ್ನು ಮೀರಿ, ರೋಹಿತ್ ಮತ್ತು ವಿರಾಟ್ ಪ್ರದರ್ಶನ ನೀಡುತ್ತಿದ್ದಾರೆ. ನೀವು ನಿಜವಾಗಿಯೂ ಅಂತಹ ಪರಿವರ್ತನೆಯನ್ನು ಮಾಡಲು ಬಯಸಿದರೆ, ಕ್ರಿಕೆಟ್ ವಿಶ್ವಕಪ್‌ಗೆ ಕೇವಲ 10 ರಿಂದ 12 ತಿಂಗಳುಗಳು ಉಳಿದಿರುವಾಗ, 2026ರ ಆಗಸ್ಟ್‌ನಲ್ಲಿ ಈ ಚರ್ಚೆ ಏಕೆ ಬಂದಿದೆ?' ಎಂದು ಪ್ರಶ್ನಿಸಿದರು.
ಗುರುವಾರ ಬಂದ ವರದಿಯೊಂದರ ಪ್ರಕಾರ, ಆಯ್ಕೆ ಸಮಿತಿಯು ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸುವ ಮುನ್ನ, ಕಳೆದ ವಾರ ತೆಗೆದುಕೊಂಡ ನಿರ್ಧಾರದ ಕುರಿತು ರೋಹಿತ್ ಹಾಗೂ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಮಾತನಾಡಿದೆ. ತಮಗೆ ಸಿಕ್ಕ ಸೀಮಿತ ಅವಕಾಶಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ದೀರ್ಘಕಾಲದಿಂದ ಅವಕಾಶಕ್ಕಾಗಿ ಕಾಯುತ್ತಿರುವ ಜೈಸ್ವಾಲ್ ಅವರಿಗೆ ಹೆಚ್ಚಿನ ಅವಕಾಶಗಳನ್ನು ನೀಡಲು ಬಯಸಿದೆ ಎನ್ನಲಾಗಿತ್ತು.
'ಇಂಗ್ಲೆಂಡ್ ಪ್ರವಾಸದ ನಂತರದ ಯೋಜನೆಗಳಲ್ಲಿ ರೋಹಿತ್ ಅವರ ಹೆಸರಿಲ್ಲ ಮತ್ತು ಈ ಸರಣಿಯ ಬಳಿಕ ಅವರನ್ನು ಪರಿಗಣಿಸದಿರಲು ನಿರ್ಧರಿಸಲಾಗಿದೆ ಎಂದು ಆಯ್ಕೆಗಾರರು ಈಗಾಗಲೇ ಅವರಿಗೆ (ರೋಹಿತ್) ತಿಳಿಸಿದ್ದಾರೆ. ತಮ್ಮ ದೈಹಿಕ ಕ್ಷಮತೆಯನ್ನು (ಫಿಟ್‌ನೆಸ್) ಸುಧಾರಿಸಿಕೊಳ್ಳಲು ಶ್ರಮಿಸಿದ ನಂತರವೂ ಅವರು ತಮ್ಮ ಆಟವನ್ನು ಮುಂದುವರಿಸಲು ಬಯಸಿದ್ದರು. ಆದಾಗ್ಯೂ, ತಮ್ಮ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿಯನ್ನು ಆಯ್ಕೆಗಾರರು ಶರ್ಮಾ ಅವರ ವಿವೇಚನೆಗೆ ಬಿಟ್ಟಿದ್ದಾರೆ' ಎಂದು ಬಿಸಿಸಿಐ (BCCI) ಮೂಲವೊಂದು ತಿಳಿಸಿದೆ.