

ನ್ಯೂ ಚಂಡೀಗಢ: ಆಫ್ಘಾನಿಸ್ತಾನದ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಶತಕದ ಸಿಡಿಸಿದ ಕನ್ನಡಿಗ ಕೆಎಲ್ ರಾಹುಲ್ ತಮ್ಮ ತಂತ್ರಗಾರಿಕೆ ಮೂಲಕ ಜೀವದಾನ ಪಡೆದರು.
ಹೌದು.. ನ್ಯೂಚಂಡೀಗಢದ ಮುಲ್ಲನ್ ಪುರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ಭರ್ಜರಿ ಬ್ಯಾಟಿಂಗ್ ಮಾಡಿದ ಕೆಎಲ್ ರಾಹುಲ್ 165 ಎಸೆತಗಳಲ್ಲಿ 11 ಬೌಂಡರಿ ಸಹಿತ 100 ರನ್ ಗಳನ್ನು ಸಿಡಿಸಿದರು. ಈ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 8 ವಿಕೆಟ್ ನಷ್ಟಕ್ಕೆ 564 ರನ್ ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
ತಂತ್ರಗಾರಿಕೆ ಮೂಲಕ ಜೀವದಾನ ಪಡೆದ ಕೆಎಲ್ ರಾಹುಲ್
ಮೊದಲ ಇನ್ನಿಂಗ್ಸ್ ನಲ್ಲಿ ಕೆಎಲ್ ರಾಹುಲ್ ಮೈದಾನದಲ್ಲೇ ಅಭಿನಯ ಮಾಡಿ ಜೀವದಾನ ಪಡೆದರು. ತಮ್ಮ ಪ್ರತಿಕ್ರಿಯೆಯಿಂದ ಅಫ್ಘಾನಿಸ್ತಾನ ತಂಡ ಡಿಆರ್‌ಎಸ್ (DRS) ತೆಗೆದುಕೊಳ್ಳದಂತೆ ಮಾಡಿ ಅವರು ವಿಕೆಟ್ ಉಳಿಸಿಕೊಂಡ ಘಟನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಈ ಘಟನೆ ಪಂದ್ಯದ 11ನೇ ಓವರ್‌ನಲ್ಲಿ ನಡೆಯಿತು. ಅಫ್ಘಾನಿಸ್ತಾನದ ವೇಗದ ಬೌಲರ್ ಜಿಯೌರ್ ರಹಮಾನ್ ಶರೀಫಿ ಆಫ್ ಸ್ಟಂಪ್ ಹೊರಗೆ ಚೆಂಡು ಎಸೆದರು. ಪಂದ್ಯದ ಆರಂಭದಿಂದಲೇ ಆ ಲೈನ್‌ನಲ್ಲಿ ರಾಹುಲ್‌ಗೆ ಬೌಲಿಂಗ್ ಮಾಡುತ್ತಿದ್ದ ಅಫ್ಘಾನಿಸ್ತಾನ, ಅವರನ್ನು ಒತ್ತಡಕ್ಕೆ ಸಿಲುಕಿಸಿತ್ತು. ರಾಹುಲ್ ಕಟ್ ಶಾಟ್ ಆಡಲು ಯತ್ನಿಸಿದಾಗ ಚೆಂಡು ಬ್ಯಾಟ್‌ನ ಅಂಚು ತಾಗಿ ವಿಕೆಟ್ ಕೀಪರ್ ಅಫ್ಸರ್ ಜಜಾಯ್ ಕೈ ಸೇರಿತು.
ಅಫ್ಘಾನಿಸ್ತಾನ ಆಟಗಾರರು ಜೋರಾಗಿ ಅಪೀಲ್ ಮಾಡಿದರೂ, ಅಂಪೈರ್ ಔಟ್ ನೀಡಲಿಲ್ಲ. ರಾಹುಲ್ ಕೂಡ ಯಾವುದೇ ಪ್ರತಿಕ್ರಿಯೆ ತೋರಿಸದೆ ನಿಂತರು. ಆದರೆ ಕೈಯಲ್ಲಿದ್ದ ಬ್ಯಾಟ್ ನ ಹ್ಯಾಂಡಲ್ ಅಲ್ಲಾಡುತ್ತಿದೆಯೇನೋ ಎಂಬಂತೆ ಬ್ಯಾಟ್ ನ ಪರೀಕ್ಷಿಸಿದರು.
ಇದರಿಂದ ಆಪ್ಘನ್ ಆಟಗಾರರಿಗೆ ಅದು ಬ್ಯಾಟ್ ಚೆಂಡು ತಗುಲಿ ಬಂದಿದ್ದಲ್ಲವೇನೋ ಎಂಬ ಅನುಮಾನ ಕಾಡಿತು. ಇದೇ ಸಂದರ್ಭದಲ್ಲಿ ಸ್ಲಿಪ್‌ನಲ್ಲಿ ನಿಂತಿದ್ದ ರಹ್ಮಾನುಲ್ಲಾ ಗುರ್ಬಾಜ್ ತಮ್ಮ ನಾಯಕ ಹಶ್ಮತುಲ್ಲಾ ಶಾಹಿದಿಗೆ ಡಿಆರ್‌ಎಸ್ ತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಆದರೆ ನಾಯಕ ಅದನ್ನು ನಿರಾಕರಿಸಿದರು.
ಆಸ್ಕರ್ ಕೊಡಿ ರಾಹುಲ್ ಗೆ ಎಂದ ಕಮೆಂಟೇಟರ್
ನಂತರ ದೊಡ್ಡ ಪರದೆಯಲ್ಲಿ ಮರುಪ್ರಸಾರ ತೋರಿಸಿದಾಗ ಅಲ್ಟ್ರಾ ಎಡ್ಜ್ ತಂತ್ರಜ್ಞಾನವು ರಾಹುಲ್ ಬ್ಯಾಟ್‌ಗೆ ಚೆಂಡು ಸ್ಪಷ್ಟವಾಗಿ ತಾಗಿರುವುದನ್ನು ದೃಢಪಡಿಸಿತು. ಇದನ್ನು ಕಂಡ ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಹಾಗೂ ಕಾಮೆಂಟೇಟರ್ ಗ್ರೇಮ್ ಸ್ವಾನ್ ಹಾಸ್ಯಮಯವಾಗಿ, "ಕೆಎಲ್ ರಾಹುಲ್, ಇಲ್ಲಿ ಬನ್ನಿ... ಇದು ನಿಮ್ಮ ಆಸ್ಕರ್ ಪ್ರಶಸ್ತಿ!" ಎಂದು ಹೇಳಿದ್ದಾರೆ.
ಇದಾದ ಬಳಿಕ 16ನೇ ಓವರ್‌ನಲ್ಲೂ ರಾಹುಲ್‌ಗೆ ಮತ್ತೊಂದು ಅದೃಷ್ಟ ಒಲಿಯಿತು. ಅವರು ಪ್ಯಾಡ್‌ಗೆ ಚೆಂಡು ತಗುಲಿದ್ದರೂ, ಅಫ್ಘಾನಿಸ್ತಾನ ಆಟಗಾರರು ಎಲ್‌ಬಿಡಬ್ಲ್ಯುಗಾಗಿ ಅಪೀಲ್ ಮಾಡಲಿಲ್ಲ. ನಂತರ ಹಾಕ್‌ಐ ತಂತ್ರಜ್ಞಾನದಲ್ಲಿ ಚೆಂಡು ಸ್ಟಂಪ್‌ಗೆ ತಾಗುವ ಸಾಧ್ಯತೆ ಇತ್ತು ಎಂದು ಗೊತ್ತಾಯಿತು.
ಆದರೆ ಇಂಪ್ಯಾಕ್ಟ್ ಅಂಪೈರ್ ಕಾಲ್ ಆಗಿರುವುದರಿಂದ ಡಿಆರ್‌ಎಸ್ ತೆಗೆದುಕೊಂಡಿದ್ದರೂ ನಿರ್ಧಾರ ಬದಲಾಗದೇ ಇರಬಹುದಿತ್ತು. ಈ ಎರಡು ಅದೃಷ್ಟದ ಕ್ಷಣಗಳ ನಡುವೆಯೂ, ರಾಹುಲ್ ಆತ್ಮವಿಶ್ವಾಸದಿಂದ ಬ್ಯಾಟಿಂಗ್ ಮಾಡುತ್ತಾ ದೊಡ್ಡ ಮೊತ್ತ ಕಲೆಹಾಕಿ ಶತಕ ಸಿಡಿಸಿದರು.
ಅಲ್ಲದೆ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್‌ಗೆ 41 ರನ್‌ಗಳ ಜೊತೆಯಾಟ ನೀಡಿದರು. ನಂತರ ಜೈಸ್ವಾಲ್ ಔಟಾದರು. ಇದೇ ವೇಳೆ, ಈ ಇನ್ನಿಂಗ್ಸ್‌ನಲ್ಲಿ ರಾಹುಲ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 9,000 ರನ್‌ಗಳ ಮೈಲಿಗಲ್ಲನ್ನೂ ತಲುಪಿದರು. ಡಿಆರ್‌ಎಸ್ ಅವಕಾಶಗಳನ್ನು ಕೈಚೆಲ್ಲಿದ ಅಫ್ಘಾನಿಸ್ತಾನ ತಂಡ ತನ್ನ ತಪ್ಪುಗಳಿಗಾಗಿ ಪಂದ್ಯದಲ್ಲಿ ಪಶ್ಚಾತ್ತಾಪ ಪಡುವಂತಾಗಿದೆ.
Advertisement