

ಪಾಟ್ನಾ: ಭಾರತೀಯ ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸಿರುವ ಉದಯೋನ್ಮುಖ ಬ್ಯಾಟರ್ ವೈಭವ್ ಸೂರ್ಯವಂಶಿಯನ್ನು ಕ್ರಿಕೆಟ್ ಲೆಜೆಂಡರಿಗಳ ಜೊತೆ ಹೋಲಿಕೆ ಮಾಡದಂತೆ ಅವರ ತಂದೆ ಸಂಜೀವ್ ಸೂರ್ಯವಂಶಿ ಮನವಿ ಮಾಡಿದ್ದಾರೆ.
ಬಿಹಾರದ ಸಮಸ್ತಿಪುರ ಮೂಲದ ಕೇವಲ 15 ವರ್ಷದ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿ ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.
ಭಾರತದ ಹಿರಿಯ ಪುರುಷರ ತಂಡಕ್ಕೆ ಆಯ್ಕೆಯಾದ ಅತ್ಯಂತ ಕಿರಿಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅವರು, ಈ ಮೂಲಕ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನೇ ಮುರಿದಿದ್ದಾರೆ. ಆದರೆ, ಕ್ರಿಕೆಟ್ ಜಗತ್ತು ಈಗಲೇ ಅವರನ್ನು ಮುಂದಿನ ದಂತಕಥೆ ಎಂದು ಬಣ್ಣಿಸಲು ಆರಂಭಿಸಿರುವ ಸಂದರ್ಭದಲ್ಲಿ, ಅವರ ತಂದೆ ಸಂಜೀವ್ ಸೂರ್ಯವಂಶಿ ಮಾತ್ರ ಸ್ಪಷ್ಟ ಸಂದೇಶ ನೀಡಿದ್ದಾರೆ.
ಇಷ್ಟು ಬೇಗ ನಿರ್ಧಾರಕ್ಕೆ ಬರಬೇಡಿ, ಅವಸರ ಬೇಡ
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಂಜೀವ್ ಸೂರ್ಯವಂಶಿ, ತಮ್ಮ ಕುಟುಂಬದ ಜೀವನವನ್ನೇ ಬದಲಿಸಿದ ಆ ಕ್ಷಣ, ಮಗನ ವಿಭಿನ್ನ ಮನೋಭಾವ ಮತ್ತು ಈಗಲೇ ಸಾರ್ವಕಾಲಿಕ ಶ್ರೇಷ್ಠರೊಂದಿಗೆ ಹೋಲಿಕೆ ಮಾಡುವುದು ಏಕೆ ನ್ಯಾಯಸಮ್ಮತವಲ್ಲ ಎಂಬುದರ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
ಕನಸು ನನಸಾದ ಕ್ಷಣ
ತಂಡದ ಆಯ್ಕೆ ಪ್ರಕಟವಾದ ದಿನ ಸೂರ್ಯವಂಶಿ ಕುಟುಂಬದಲ್ಲಿ ತೀವ್ರ ಉತ್ಸಾಹ ಮತ್ತು ಕಾತುರತೆ ಇತ್ತು. ನಿನ್ನೆ ರಾತ್ರಿ ತಂಡದ ಆಯ್ಕೆ ಮಧ್ಯಾಹ್ನ 1 ಗಂಟೆಗೆ ಪ್ರಕಟವಾಗಲಿದೆ ಎಂದು ವೈಭವ್ ಹೇಳಿದ್ದ. ನನ್ನ ಹೃದಯ ಜೋರಾಗಿ ಬಡಿದುಕೊಳ್ಳುತ್ತಿತ್ತು. ನಾನು ಅವನಿಗೆ ಚಿಂತಿಸಬೇಡ, ನೀನು ಚೆನ್ನಾಗಿ ಆಡಿದ್ದೀಯ, ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಹೇಳಿದ್ದೆ ಎಂದರು.
ಬಳಿಕ ತಂಡ ಪ್ರಕಟವಾಗುತ್ತಲೇ ವೈಭವ್ ಕೂಡ ತಂದ ಭಾಗವಾಗಿದ್ದನ್ನು ಕೇಳಿ ಅತೀವ ಸಂತೋಷವಾಯಿತು. ಇದು ನಮ್ಮ ಕುಟುಂಬಕ್ಕೆ ಅತ್ಯಂತ ದೊಡ್ಡ ಕ್ಷಣ. ನಮ್ಮ ಬಹುದಿನಗಳ ಕನಸು ನನಸಾಗಿದೆ. ನಾನು ಇನ್ನೂ ವೈಭವ್ ಜೊತೆ ಮಾತನಾಡಿಲ್ಲ. ಶೀಘ್ರದಲ್ಲೇ ಅವನೊಂದಿಗೆ ಮಾತನಾಡುತ್ತೇನೆ ಎಂದು ಸಂಜೀವ್ ಹೇಳಿದರು.
ಸಚಿನ್ ಅಲ್ಲ... ಬ್ರಾಡ್‌ಮನ್ ಅಲ್ಲ... ಆತ ವೈಭವ್
15ನೇ ವಯಸ್ಸಿನಲ್ಲೇ ಸಚಿನ್ ದಾಖಲೆಯನ್ನು ಮುರಿದ ಬಳಿಕ, ಸಹಜವಾಗಿಯೇ ಹಲವರು ಅವರನ್ನು ಸಚಿನ್ ತೆಂಡೂಲ್ಕರ್ ಅಥವಾ ಡಾನ್ ಬ್ರಾಡ್‌ಮನ್‌ಗೆ ಹೋಲಿಸಲು ಆರಂಭಿಸಿದ್ದಾರೆ. ಆದರೆ ಸಂಜೀವ್ ಇದನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. "ವೈಭವ್‌ನನ್ನು ಸಚಿನ್ ಅಥವಾ ಬ್ರಾಡ್‌ಮನ್‌ಗೆ ಹೋಲಿಸುವುದು ಸರಿಯಲ್ಲ. ಅವರು ದೀರ್ಘಕಾಲ ಅತ್ಯುನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ವೈಭವ್ ಅವರ ಪಾದದ ಧೂಳಿಗೂ ಸಮನಾಗಿಲ್ಲ. ಇಂತಹ ಹೋಲಿಕೆಗಳನ್ನು ಮಾಡಬಾರದು," ಎಂದು ಅವರು ಹೇಳಿದರು.
ಬ್ರಿಯಾನ್ ಲಾರಾ ಅವರಿಂದ ಸ್ಫೂರ್ತಿ
ಜಗತ್ತು ಸಚಿನ್ ಹೋಲಿಕೆಯಲ್ಲಿ ತೊಡಗಿದ್ದರೆ, ಸೂರ್ಯವಂಶಿ ಕುಟುಂಬದ ಆದರ್ಶ ಮಾತ್ರ ಬ್ರಿಯಾನ್ ಲಾರಾ. "ಲಾರಾ ಎಡಗೈ ಬ್ಯಾಟ್ಸ್‌ಮನ್, ವೈಭವ್ ಕೂಡ ಎಡಗೈ ಆಟಗಾರ. ನನಗೆ ಲಾರಾ ಬ್ಯಾಟಿಂಗ್ ತುಂಬಾ ಇಷ್ಟ. ಅದಕ್ಕಾಗಿ ನಾನು ಅವನಿಗೆ ಲಾರಾ ಅವರ ವೀಡಿಯೊಗಳನ್ನು ತೋರಿಸುತ್ತಿದ್ದೆ. ಜೊತೆಗೆ ಯುವರಾಜ್ ಸಿಂಗ್ ಸೇರಿದಂತೆ ಹಲವಾರು ಆಟಗಾರರ ಬ್ಯಾಟಿಂಗ್ ಕೂಡ ನೋಡಿದ್ದಾನೆ," ಎಂದು ಸಂಜೀವ್ ಹೇಳಿದರು.
ಮೊದಲ ಎಸೆತಕ್ಕೇ ಸಿಕ್ಸರ್ ಹೊಡೆಯುವ ತಂತ್ರ
"ಅವನ ಆಟವೇ ವಿಭಿನ್ನ. ಆತ ತನ್ನದೇ ಶೈಲಿಯ ಕ್ರಿಕೆಟ್ ಆಡುತ್ತಾನೆ. ಜಸ್‌ಪ್ರೀತ್ ಬುಮ್ರಾ, ಪ್ಯಾಟ್ ಕಮಿನ್ಸ್ ಅವರಂತಹ ವಿಶ್ವದ ಶ್ರೇಷ್ಠ ಬೌಲರ್‌ಗಳ ಮೊದಲ ಎಸೆತಕ್ಕೇ ಸಿಕ್ಸರ್ ಬಾರಿಸುವ ವೈಭವ್‌ನ ಧೈರ್ಯ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಇದರ ಹಿಂದಿರುವ ಕಾರಣವನ್ನು ಸಂಜೀವ್ ವಿವರಿಸುತ್ತಾರೆ.
"ಅವನು ಎಲ್ಲಿಗೆ ಆಡಲು ಹೋದರೂ ಹಿರಿಯ ಆಟಗಾರರು 'ಇವನು ಇನ್ನೂ ಮಗು' ಎಂದು ಕರೆಯುತ್ತಿದ್ದರು. ನಾನು ಎದುರಾಳಿ ತಂಡದ ದೊಡ್ಡ ಬೌಲರ್ ಯಾರು ಎಂದು ತೋರಿಸಿದರೆ, ಅವನೇ ಹೋಗಿ ಆ ಬೌಲರ್‌ಗೆ ಸಿಕ್ಸರ್ ಹೊಡೆಯುತ್ತಿದ್ದ. ಅಂತೆಯೇ ಒಮ್ಮೆ "ಅಪ್ಪಾ, ನಾನು ಅವನಿಗೆ ಸಿಕ್ಸರ್ ಹೊಡೆದರೆ, ಉಳಿದ ಬೌಲರ್‌ಗಳು ನನ್ನ ಮೇಲೆ ಪ್ರಾಬಲ್ಯ ಸಾಧಿಸಲು ಸಾಧ್ಯವಾಗುವುದಿಲ್ಲ. ಇದು ಅವನದೇ ತಂತ್ರ. ಜನರು ಅವನ ವಯಸ್ಸನ್ನು ನೋಡಿ ಅಲ್ಲ, ಅವನ ಆಟವನ್ನು ನೋಡಿ ಗುರುತಿಸಬೇಕು ಎಂಬುದು ಅವನ ಆಶಯ," ಎಂದು ಸಂಜೀವ್ ಹೇಳಿದರು.
ಮೂರು ಮಾದರಿಯ ಕ್ರಿಕೆಟ್ ಆಡಬೇಕು
ಐಪಿಎಲ್‌ನಲ್ಲಿ 35 ಎಸೆತಗಳಲ್ಲಿ ಶತಕ ಹಾಗೂ 2026ರ ಐಪಿಎಲ್‌ನಲ್ಲಿ 776 ರನ್‌ಗಳೊಂದಿಗೆ ಆರೆಂಜ್ ಕ್ಯಾಪ್ ಗೆದ್ದಿರುವ ಕಾರಣ, ಹಲವರು ಅವರನ್ನು ಕೇವಲ ಟಿ20 ಆಟಗಾರ ಎಂದು ಭಾವಿಸುತ್ತಾರೆ.
ಆದರೆ ಸಂಜೀವ್ ಹೇಳುವುದು ಬೇರೆ. "ಅವನು ಎಲ್ಲಾ ಮೂರು ಮಾದರಿಗಳಲ್ಲೂ ಆಡಲು ಬಯಸುತ್ತಾನೆ. ಐಪಿಎಲ್‌ನಲ್ಲಿ ಆಕ್ರಮಣಕಾರಿ ಆಟ ನೋಡಿದ್ದೀರಿ. ಆದರೆ 50 ಓವರ್ ಪಂದ್ಯದಲ್ಲಿ 332 ರನ್ ಕೂಡ ಗಳಿಸಿದ್ದಾನೆ. ಅವನಿಗೆ ಟೆಸ್ಟ್ ಕ್ರಿಕೆಟ್ ಮೇಲೂ ಅಷ್ಟೇ ಪ್ರೀತಿ ಇದೆ."
ತಂದೆಯ ನಿರೀಕ್ಷೆ
ಮಗ ಭಾರತ ತಂಡವನ್ನು ಪ್ರತಿನಿಧಿಸುವ ಕನಸು ನನಸಾದ ಬಳಿಕ ಈಗ ಸಂತೋಷವೇ ಎಂದು ಕೇಳಿದಾಗ, ಸಂಜೀವ್ ಅವರ ಉತ್ತರ ಹೀಗಿತ್ತು: "ಹೌದು, ನನಗೆ ತುಂಬಾ ಸಂತೋಷವಾಗಿದೆ. ಆದರೆ ಬಿಹಾರದ ತಂದೆಯರು ಹೀಗೆಯೇ ಇರುತ್ತಾರೆ. ಮಗ ಎಷ್ಟೇ ಸಾಧನೆ ಮಾಡಿದರೂ ಇನ್ನೂ ಹೆಚ್ಚಿನದನ್ನು ಸಾಧಿಸಲಿ ಎಂದು ಬಯಸುತ್ತಾರೆ. ಅವನು ರನ್ ಗಳಿಸಿದರೆ ಇನ್ನೂ ಸ್ವಲ್ಪ ಹೆಚ್ಚು ಮಾಡಬೇಕೆಂದು ಅನಿಸುತ್ತದೆ. ಮುಖ್ಯವಾದದ್ದು ತಂಡಕ್ಕೆ ಗೆಲುವು ತಂದುಕೊಡುವುದು." ಎಂದರು.
ಮತ್ತೊಂದು ಪ್ರತಿಭೆ
ವೈಭವ್ ಮಾತ್ರವಲ್ಲದೇ ಸೂರ್ಯವಂಶಿ ಕುಟುಂಬದಲ್ಲಿ ಮತ್ತೊಂದು ಪ್ರತಿಭೆಯೂ ಬೆಳೆಯುತ್ತಿದೆ. ವೈಭವ್‌ನ ತಮ್ಮ ಆಶೀರ್ವಾದ್, ಬಲಗೈ ಬ್ಯಾಟ್ಸ್‌ಮನ್ ಆಗಿದ್ದು ಈಗಾಗಲೇ ಗಮನ ಸೆಳೆಯುತ್ತಿದ್ದಾರೆ. "ವೈಭವ್ ವಿಭಿನ್ನ. ಆದರೆ ಆಶೀರ್ವಾದ್ ಕೂಡ ಚೆನ್ನಾಗಿ ಆಡುತ್ತಾನೆ. ಅವನ ಹೊಡೆತಗಳ ಶೈಲಿಯೂ ಹೋಲುತ್ತದೆ. ಶೀಘ್ರದಲ್ಲೇ ಅವನ ಸಾಧನೆಯನ್ನೂ ನೀವು ನೋಡುತ್ತೀರಿ," ಎಂದು ಸಂಜೀವ್ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಸ್ತುತ ವೈಭವ್ ಸೂರ್ಯವಂಶಿ ಶ್ರೀಲಂಕಾದಲ್ಲಿ ಭಾರತ 'ಎ' ತಂಡದೊಂದಿಗೆ ಇದ್ದು, ಜೂನ್ 26ರಿಂದ ಬೆಲ್ಫಾಸ್ಟ್‌ನಲ್ಲಿ ಆರಂಭವಾಗಲಿರುವ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ಹಿರಿಯ ತಂಡವನ್ನು ಸೇರುವ ನಿರೀಕ್ಷೆಯಿದೆ.
Advertisement