

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಐಸಿಸಿ ಏಕದಿನ ರ್‍ಯಾಂಕಿಂಗ್ ಪಟ್ಟಿಯನ್ನು ನವೀಕರಿಸಿದ್ದು, ಪಟ್ಟಿಯಲ್ಲಿ ಭಾರತ ತಂಡ ಮತ್ತೆ ಅಗ್ರಸ್ಥಾನಕ್ಕೇರಿದೆ.
ಹೌದು.. ಐಸಿಸಿ ವಾರ್ಷಿಕ ನವೀಕರಣದ ಬಳಿಕವೂ ಏಕದಿನ ರ್‍ಯಾಂಕಿಂಗ್ ನಲ್ಲಿ ಭಾರತ ಪುರುಷರ ತಂಡ ಅಗ್ರಸ್ಥಾನ ಕಾಯ್ದುಕೊಂಡಿದ್ದು, ನ್ಯೂಜಿಲೆಂಡ್ ತಂಡವನ್ನು 2ನೇ ಸ್ಥಾನಕ್ಕೆ ತಳ್ಳಿದೆ. ರೇಟಿಂಗ್ಸ್ ನಲ್ಲಿ ಭಾರತ ಒಟ್ಟು 118 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದ್ದು, 113 ಅಂಕಗಳನ್ನು ಹೊಂದಿರುವ ನ್ಯೂಜಿಲೆಂಡ್ 2ನೇ ಸ್ಥಾನಕ್ಕೆ ಕುಸಿದಿದೆ.
ಹೊಸ ನವೀಕರಣದ ಬಳಿಕ ಭಾರತದ ರೇಟಿಂಗ್ಸ್ 119ರಿಂದ 118ಕ್ಕೆ ಕುಸಿತವಾಗಿದ್ದರೂ ಭಾರತದ ಅಗ್ರಸ್ಥಾನ ಮಾತ್ರ ಅಬಾಧಿತವಾಗಿದೆ. ಅಂತೆಯೇ ಇತ್ತ ನ್ಯೂಜಿಲೆಂಡ್ ಕೂಡ ಎರಡು ಅಂಕಗಳನ್ನು ಹೆಚ್ಚಿಸಿಕೊಂಡು 113 ರೇಟಿಂಗ್ ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಇನ್ನು ಹಾಲಿ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ 109 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲೇ ಮುಂದುವರಿದಿದೆ.
ಅಗ್ರ 10 ತಂಡಗಳ ಪಟ್ಟಿಯಲ್ಲಿ ಕಂಡುಬಂದ ಏಕೈಕ ಬದಲಾವಣೆಯೆಂದರೆ, 102 ಅಂಕಗಳನ್ನು ಹೊಂದಿರುವ ದಕ್ಷಿಣ ಆಫ್ರಿಕಾ 98 ಅಂಕಗಳಿರುವ ಪಾಕಿಸ್ತಾನವನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೇರಿದೆ. ಇದೇ ವೇಳೆ, ಒಂಬತ್ತನೇ ಸ್ಥಾನದಲ್ಲಿರುವ ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್ ನಡುವಿನ ಅಂತರ 10 ರೇಟಿಂಗ್ ಅಂಕಗಳಿಗೆ ಹೆಚ್ಚಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.
ಅಂತೆಯೇ ಐರ್ಲೆಂಡ್ ಜಿಂಬಾಬ್ವೆಯನ್ನು ಹಿಂದಿಕ್ಕಿ 11ನೇ ಸ್ಥಾನಕ್ಕೇರಿದೆ. ಅಮೆರಿಕ (USA) ಸ್ಕಾಟ್ಲೆಂಡ್‌ನ್ನು ಹಿಂದಿಕ್ಕಿ 13ನೇ ಸ್ಥಾನ ಪಡೆದುಕೊಂಡಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಕೆನಡಾವನ್ನು ಹಿಂದಿಕ್ಕಿ 19ನೇ ಸ್ಥಾನದಲ್ಲಿದೆ.
ಉಳಿದಂತೆ ಕಳೆದ ವಾರ ನಡೆದ ವಾರ್ಷಿಕ ನವೀಕರಣದ ಬಳಿಕ, ಐಸಿಸಿ ಪುರುಷರ ಟಿ20 ಅಂತರರಾಷ್ಟ್ರೀಯ (T20I) ಶ್ರೇಯಾಂಕದಲ್ಲಿಯೂ ಭಾರತ ಅಗ್ರಸ್ಥಾನದಲ್ಲಿದೆ. ಟೆಸ್ಟ್ ರ್‍ಯಾಂಕಿಂಗ್ ನಲ್ಲಿ ಆಸ್ಟ್ರೇಲಿಯಾ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. ಮಹಿಳೆಯರ ಏಕದಿನ (ODI) ಹಾಗೂ ಟಿ20 ಅಂತರರಾಷ್ಟ್ರೀಯ (T20I) ರ್‍ಯಾಂಕಿಂಗ್ ಗಳೆರಡರಲ್ಲೂ ಆಸ್ಟ್ರೇಲಿಯಾ ನಂ.1 ಸ್ಥಾನದಲ್ಲಿದೆ.