

ಲಖನೌ: ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಶುಭ್ಮನ್ ಗಿಲ್ ಅವರು 77 ಎಸೆತಗಳಲ್ಲಿ ಭರ್ಜರಿ ಶತಕ ಬಾರಿಸುವ ಮೂಲಕ ವಿರಾಟ್ ಕೊಹ್ಲಿಯ ದೊಡ್ಡ ದಾಖಲೆಯನ್ನು ಪುಡಿಗಟ್ಟಿದರು.
ಇಂದು ಲಖನೌನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತರೂ ಮೊದಲ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ, ಶುಭ್ಮನ್ ಗಿಲ್ ಹಾಗೂ ಇಶಾನ್ ಕಿಶನ್ ಅವರ ಭರ್ಜರಿ ಶತಕಗಳ ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 367 ರನ್ ಕಲೆಹಾಕಿದ್ದು, ಅಫ್ಘಾನಿಸ್ತಾನ ವಿರುದ್ಧ 400 ಕ್ಕೂ ಹೆಚ್ಚು ರನ್ ಗಳಿಸುವ ಗುರಿಯನ್ನು ಹೊಂದಿದೆ.
ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಗಿಲ್, ಅಫ್ಘನ್ ಬೌಲರ್ಗಳ ಬೆವರಿಳಿಸಿ ಕೇವಲ 38 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಅರ್ಧಶತಕದ ಬಳಿಕವೂ ಅಬ್ಬರದ ಬ್ಯಾಟಿಂಗ್ ಮುಂದುವರೆಸಿದ ಗಿಲ್ 77 ಎಸೆತಗಳಲ್ಲಿ ತಮ್ಮ ಏಕದಿನ ವೃತ್ತಜೀವನದ 9ನೇ ಶತಕವನ್ನು ಪೂರ್ಣಗೊಳಿಸಿದರು. ಮಾತ್ರವಲ್ಲದೆ ಇದು ನಾಯಕನಾದ ಬಳಿಕ ಗಿಲ್ ಅವರ ಮೊದಲ ಏಕದಿನ ಶತಕವಾಗಿದೆ.
ಅತಿ ಕಡಿಮೆ ಇನ್ನಿಂಗ್ಸ್ ನಲ್ಲಿ ಸಾವಿರ ರನ್
ಶುಭಮನ್ ಗಿಲ್ ಏಕದಿನ ಪಂದ್ಯದಲ್ಲಿ ಅತಿ ಕಡಿಮೆ ಅಂದರೆ ಕೇವಲ 19 ಇನ್ನಿಂಗ್ಸ್ ಗಳಲ್ಲಿ ಸಾವಿರ ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಅವರ ದಾಖಲೆಯನ್ನು ಮುರಿದರು.
ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಅವರು 24 ಇನ್ನಿಂಗ್ಸ್ ಗಳಲ್ಲಿ ಸಾವಿರ ರನ್ ಗಳಿಸಿದ್ದರೆ, ನವಜೋತ್ ಸಿಂಗ್ ಸಿಧು ಹಾಗೂ ಶ್ರೇಯಸ್ ಅಯ್ಯರ್ ಅವರು 25 ಇನ್ನಿಂಗ್ಸ್ ನಲ್ಲಿ ಮತ್ತು ಇಶಾನ್ ಕಿಶನ್ 26 ಇನ್ನಿಂಗ್ಸ್ ನಲ್ಲಿ ಸಾವಿರ ರನ್ ಗಳ ಗಡಿ ದಾಟಿದ್ದರು.
ನಾಯಕನಾಗಿಯೂ ವೇಗದ ಶತಕ
ಕೇವಲ 77 ಎಸೆತಗಳಲ್ಲಿ ಶತಕ ಪೂರೈಸಿದ ಶುಭಮನ್ ಗಿಲ್ಗೆ ನಾಯಕನಾಗಿ ಇದು ಅತಿ ವೇಗದ ಏಕದಿನ ಶತಕವೂ ಆಗಿದೆ. ರೋಹಿತ್ ಶರ್ಮಾ ಭಾರತದ ನಾಯಕನಾಗಿ ಅತಿ ವೇಗದ ಏಕದಿನ ಶತಕ ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ. ರೋಹಿತ್ 63 ಎಸೆತಗಳಲ್ಲಿ ಈ ಮೈಲಿಗಲ್ಲು ದಾಟಿದ್ದರು. ಹಾಗೆಯೇ ವೀರೇಂದ್ರ ಸೆಹ್ವಾಗ್ 69 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪುವ ಮೂಲಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇದೀಗ ಗಿಲ್ 77 ಎಸೆತಗಳಲ್ಲಿ ಶತಕ ತಲುಪುವ ಮೂಲಕ ಈ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.
Advertisement