

ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಟಿ20 ವಿಶ್ವಕಪ್ 2026 ಫೈನಲ್ ಪಂದ್ಯವು ಹಾಲಿ ಚಾಂಪಿಯನ್ ಭಾರತ ಮತ್ತು ನ್ಯೂಜಿಲೆಂಡ್ ತಂಡಕ್ಕೆ ಮಹತ್ವದ ಪಂದ್ಯವಾಗಿದೆ. ಭಾರತ ಪ್ರಶಸ್ತಿ ಉಳಿಸಿಕೊಂಡು ಇತಿಹಾಸ ಬರೆಯುವ ತವಕದಲ್ಲಿದ್ದರೆ, ಇತ್ತ ನ್ಯೂಜಿಲೆಂಡ್ ಚೊಚ್ಚಲ ಪ್ರಶಸ್ತಿ ಗೆಲ್ಲುವ ಉತ್ಸಾಹದಲ್ಲಿದೆ. ನ್ಯೂಜಿಲೆಂಡ್‌ನಂತಹ ಬಲಿಷ್ಠ ತಂಡದ ಎದುರು ಭಾರತ ತನ್ನ ಪ್ಲೇಯಿಂಗ್ ಇಲೆವೆನ್‌ನಲ್ಲಿ ಯಾವುದೇ ಎಡವಟ್ಟು ಮಾಡುವುದರಿಂದ ದೂರಸರಿಯಬೇಕಾಗಿದೆ. ಆದಾಗ್ಯೂ, ಭಾರತಕ್ಕೆ ಕೆಲವು ಕಳವಳಕಾರಿ ಅಂಶಗಳಿವೆ. ವಿಶ್ವದ ನಂ. 1 ಟಿ20ಐ ಬ್ಯಾಟ್ಸ್‌ಮನ್ ಆಗಿರುವ ಅವರ ಪ್ರಮುಖ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಈ ಪಂದ್ಯಾವಳಿಯಲ್ಲಿ ಒಂದು ಅರ್ಧಶತಕ ಬಿಟ್ಟರೆ ಹೆತ್ತಿನ ಪ್ರಭಾವ ಬೀರುವಲ್ಲಿ ವಿಫಲವಾಗಿದ್ದಾರೆ. ಅಲ್ಲದೆ, ವಿಶ್ವದ ನಂ. 1 ಟಿ20ಐ ಬೌಲರ್ ವರುಣ್ ಚಕ್ರವರ್ತಿ ಕಳೆದ ಕೆಲವು ಪಂದ್ಯಗಳಲ್ಲಿ ದುಬಾರಿಯಾಗಿದ್ದಾರೆ.
ಭಾರತಕ್ಕೆ ಒಳ್ಳೆಯ ವಿಷಯವೆಂದರೆ ಅಭಿಷೇಕ್ ಹೊರತುಪಡಿಸಿ ಬಹುತೇಕ ಎಲ್ಲ ಬ್ಯಾಟ್ಸ್‌ಮನ್‌ಗಳು ರನ್ ಪಟ್ಟಿಯಲ್ಲಿದ್ದಾರೆ. ಸಂಜು ಸ್ಯಾಮ್ಸನ್ (232 ರನ್‌ಗಳು, 4 ಪಂದ್ಯಗಳು), ಇಶಾನ್ ಕಿಶನ್ (263 ರನ್‌ಗಳು, 8 ಪಂದ್ಯಗಳು), ಸೂರ್ಯಕುಮಾರ್ ಯಾದವ್ (242 ರನ್‌ಗಳು, 8 ಪಂದ್ಯಗಳು), ಮತ್ತು ಶಿವಂ ದುಬೆ (209 ರನ್‌ಗಳು, 8 ಪಂದ್ಯಗಳು). ಹಾರ್ದಿಕ್ ಪಾಂಡ್ಯ ಮತ್ತು ತಿಲಕ್ ವರ್ಮಾ ಎಂಟು ಪಂದ್ಯಗಳಲ್ಲಿ ತಲಾ 199 ರನ್ ಗಳಿಸಿದ್ದಾರೆ.
ಬೌಲರ್‌ಗಳಲ್ಲಿ, ಜಸ್ಪ್ರೀತ್ ಬುಮ್ರಾ (10 ವಿಕೆಟ್‌ಗಳು), ಅರ್ಶದೀಪ್ ಸಿಂಗ್ (9 ವಿಕೆಟ್‌ಗಳು) ಮತ್ತು ಅಕ್ಷರ್ ಪಟೇಲ್ (8 ವಿಕೆಟ್‌ಗಳು) ಸ್ಥಿರ ಪ್ರದರ್ಶನ ನೀಡಿದ್ದಾರೆ. ಹಾರ್ದಿಕ್ ಪಾಂಡ್ಯ ಕೂಡ ವಿಕೆಟ್‌ಗಳ ಪಟ್ಟಿಯಲ್ಲಿದ್ದಾರೆ.
ಏಳು ಪಂದ್ಯಗಳಲ್ಲಿ 89 ರನ್ ಗಳಿಸಿರುವ ಅಭಿಷೇಕ್ ಶರ್ಮಾ ಅವರ ಫಾರ್ಮ್ ಮೇಲೆ ಇದೀಗ ಪ್ರಶ್ನೆಗಳು ಕೇಳಿಬರುತ್ತಿವೆ. ಟೂರ್ನಮೆಂಟ್ ಆರಂಭದಲ್ಲಿ ಸತತ ಮೂರು ಬಾರಿ ಡಕ್ ಔಟ್ ಆದ ಬಳಿಕ ಅವರ ರಿದಮ್ ಮತ್ತು ಆತ್ಮವಿಶ್ವಾಸದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಹಣಾಹಣಿಯ ಸಮಯದಲ್ಲಿ, ಏಳು ಎಸೆತಗಳಲ್ಲಿ ಕೇವಲ ಒಂಬತ್ತು ರನ್‌ಗಳಿಸಿದ್ದಾಗ ಆಫ್-ಸ್ಪಿನ್ನರ್ ವಿಲ್ ಜ್ಯಾಕ್ಸ್ ಅವರಿಗೆ ವಿಕೆಟ್ ಒಪ್ಪಿಸಿದರು. ಈ ವಿಶ್ವಕಪ್‌ನಲ್ಲಿ ಏಳು ಇನಿಂಗ್ಸ್‌ಗಳಲ್ಲಿ ಕೇವಲ ಒಂದು ಅರ್ಧಶತಕದೊಂದಿಗೆ ಅವರು ಕೇವಲ 89 ರನ್ ಗಳಿಸಿದ್ದಾರೆ.
ಆದಾಗ್ಯೂ, ಅವರು ಇನ್ನೂ ಪ್ಲೇಯಿಂಗ್ XIನಲ್ಲಿ ಸ್ಥಾನ ಪಡೆಯಬಹುದು ಎನ್ನಲಾಗಿದೆ.
ಈಮಧ್ಯೆ, ನ್ಯೂಜಿಲೆಂಡ್ ವಿರುದ್ಧದ T20 ವಿಶ್ವಕಪ್ ಫೈನಲ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಮಿಸ್ಟರಿ ಸ್ಪಿನ್ನರ್ ಎಂದೇ ಖ್ಯಾತರಾಗಿರುವ ವರುಣ್ ಚಕ್ರವರ್ತಿ ಸ್ಥಾನ ಪಡೆಯುವ ಬಗ್ಗೆಯೂ ಊಹಾಪೋಹಗಳು ಕೇಳಿಬರುತ್ತಿವೆ. ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್ ಪಂದ್ಯದ ಮುನ್ನಾದಿನವೂ ಇದು ತಣ್ಣಗಾಗಲಿಲ್ಲ ಎಂದು ಸುದ್ದಿಸಂಸ್ಥೆ PTI ವರದಿ ಮಾಡಿದೆ.
ತಂಡದಲ್ಲಿ ವರುಣ್ ಚಕ್ರವರ್ತಿ ಸ್ಥಾನ ಪಡೆಯುತ್ತಾರೆ ಎಂಬುದಕ್ಕೆ ತರಬೇತಿ ಅವಧಿಯಲ್ಲಿಯೂ ಯಾವುದೇ ಸುಳಿವು ಕಂಡುಬರಲಿಲ್ಲ. ತಮಿಳುನಾಡು ಸ್ಪಿನ್ನರ್ ಕೆಲವು ಸಿಂಗಲ್ ವಿಕೆಟ್ ಬೌಲಿಂಗ್ ಮಾಡಿದರು. ಬೌಲಿಂಗ್ ತರಬೇತುದಾರ ಮೋರ್ನೆ ಮೋರ್ಕೆಲ್ ಅವರನ್ನು ಹತ್ತಿರದಿಂದ ನೋಡುತ್ತಿದ್ದರು.
ಇದೇ ವೇಳೆ, ಸೂರ್ಯಕುಮಾರ್ ಯಾದವ್, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಸ್ವಲ್ಪ ದೂರದಲ್ಲಿ ಮ್ಯಾಚ್ ಸ್ಟ್ರಿಪ್‌ನಲ್ಲಿ ನಿಂತು ಮಾತುಕತೆಯಲ್ಲಿ ತೊಡಗಿದ್ದರು.
ಇದಾದ ಸ್ವಲ್ಪ ಸಮಯದ ನಂತರ, ವರುಣ್ ಚಕ್ರವರ್ತಿ ಹಿಂದೆ ಸರಿದು ನೀಲಿ ಐಸ್ ಬಾಕ್ಸ್ ಮೇಲೆ ಕುಳಿತರು. ಕುಲದೀಪ್ ಯಾದವ್ ಮತ್ತು ತಿಲಕ್ ವರ್ಮಾ ಪಕ್ಕದ ನೆಟ್‌ನಲ್ಲಿ ಸರದಿಯಲ್ಲಿ ಬೌಲಿಂಗ್ ಮಾಡುವುದನ್ನು ಗಮನಿಸುತ್ತಿದ್ದರು. ಭಾರತವು ಕುಲದೀಪ್ ಯಾದವ್ ಅವರನ್ನು ಫೈನಲ್‌ಗೆ ಕರೆತರುವ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಭಾರತದ ಸಂಭಾವ್ಯ ಪ್ಲೇಯಿಂಗ್ XI
ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಶದೀಪ್ ಸಿಂಗ್ ಮತ್ತು ಜಸ್ಪ್ರೀತ್ ಬುಮ್ರಾ.
Advertisement