

ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಭರ್ಜರಿ ಜಯ ಸಾಧಿಸುವ ಮೂಲಕ ಶುಭಾರಂಭ ಮಾಡಿತು. ಎಸ್‌ಆರ್‌ಎಚ್ ನೀಡಿದ 202 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿಗೆ ವಿರಾಟ್ ಕೊಹ್ಲಿ ಅಜೇಯ 69 ರನ್ ಮತ್ತು ದೇವದತ್ ಪಡಿಕ್ಕಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ ಆರು ವಿಕೆಟ್‌ಗಳ ಅಬ್ಬರದ ಗೆಲುವು ಸಾಧಿಸಿತು. ಈ ಪ್ರದರ್ಶನದೊಂದಿಗೆ, ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಎಲ್ಲ 19 ಆವೃತ್ತಿಗಳಲ್ಲಿ ಆಡಿದ ಮೊದಲ ಆಟಗಾರರಾದರು. ವಾಸ್ತವವಾಗಿ, ಅವರು ಐಪಿಎಲ್‌ನಲ್ಲಿ ಕೇವಲ ಒಂದು ಫ್ರಾಂಚೈಸಿಯನ್ನು ಮಾತ್ರ ಪ್ರತಿನಿಧಿಸಿದ್ದಾರೆ.
ಈಮಧ್ಯೆ, ಕಳೆದ ವರ್ಷ ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡ 11 ಅಭಿಮಾನಿಗಳಿಗೆ ಗೌರವ ಸಲ್ಲಿಸಲು ಶನಿವಾರ ಐಪಿಎಲ್ 2026ರ ಆರಂಭಿಕ ಪಂದ್ಯಕ್ಕೂ ಮುನ್ನ ಆಟಗಾರರು ಮತ್ತು ಪಂದ್ಯದ ಅಧಿಕಾರಿಗಳು ಒಂದು ನಿಮಿಷ ಮೌನಾಚರಣೆ ಮಾಡಿದರು. ಕಳೆದ ವರ್ಷ ಬರೋಬ್ಬರಿ 18 ವರ್ಷಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೊಚ್ಚಲ ಪ್ರಶಸ್ತಿ ಗೆದ್ದ ಬಳಿಕ 2025ರ ಜೂನ್‌ನಲ್ಲಿ ನಡೆದ ಸಂಭ್ರಮಾಚರಣೆ ವೇಳೆ ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿತ್ತು. ಘಟನೆಯಲ್ಲಿ 50ಕ್ಕೂ ಹೆಚ್ಚು ಜನರು ಗಾಯಗೊಂಡರು ಮತ್ತು 11 ಜನರು ಸಾವಿಗೀಡಾದರು. ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಅಭಿಮಾನಿಗಳಿಗೆ ಗೌರವ ಸಲ್ಲಿಸುವ ಸಂಕೇತವಾಗಿ ಬಿಸಿಸಿಐ ಈ ಹಿಂದೆ ಐಪಿಎಲ್ 2026ರ ಉದ್ಘಾಟನಾ ಸಮಾರಂಭವನ್ನು ರದ್ದುಗೊಳಿಸಿತ್ತು.
ಹುತಾತ್ಮರಿಗೆ ಗೌರವ ಸಲ್ಲಿಸಲು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 11 ಆಸನಗಳನ್ನು ಮೀಸಲಿಡಲಾಗಿದ್ದು, ಭವಿಷ್ಯದ ಎಲ್ಲ ಐಪಿಎಲ್ ಮತ್ತು ಅಂತರರಾಷ್ಟ್ರೀಯ ಪಂದ್ಯಗಳಿಗೆ ಶಾಶ್ವತವಾಗಿ ಖಾಲಿ ಬಿಡಲಾಗುವುದು ಎಂದು ಕೆಎಸ್‌ಸಿಎ ನಿರ್ಧರಿಸಿದೆ.
IPL 2026, RCB vs SRH: ಕಿಂಗ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್; ಉದ್ಘಾಟನಾ ಪಂದ್ಯ ಗೆದ್ದು ಬೀಗಿದ ಬೆಂಗಳೂರುಐಪಿಎಲ್ ಉದ್ಘಾಟನಾ ದಿನದಂದು ರಾಜ್ಯದ ಗೃಹ ಸಚಿವ ಜಿ ಪರಮೇಶ್ವರ ಮತ್ತು ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ಕ್ರೀಡಾಂಗಣದ ಒಳ ಪ್ರವೇಶದ್ವಾರದ ಬಳಿ ಸ್ಮರಣಾರ್ಥ ಫಲಕವನ್ನು ಅನಾವರಣಗೊಳಿಸಿದರು.
ಈ ಆವೃತ್ತಿಯ ಉದ್ಘಾಟನಾ ಪಂದ್ಯದ ಪೂರ್ವ-ಪಂದ್ಯದ ಅಭ್ಯಾಸದ ಸಮಯದಲ್ಲಿ ಎಲ್ಲ ಆರ್‌ಸಿಬಿ ಆಟಗಾರರು 11ನೇ ಸಂಖ್ಯೆಯ ಜೆರ್ಸಿಗಳನ್ನು ಧರಿಸಿದ್ದರು.
ಚೇಸಿಂಗ್‌ನಲ್ಲಿ ಕೊಹ್ಲಿಯೇ ಕಿಂಗ್!
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಚೇಸಿಂಗ್‌ನಲ್ಲಿ 4000 ರನ್‌ಗಳನ್ನು ದಾಟಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಭಾರತದ ದಿಗ್ಗಜ ವಿರಾಟ್ ಕೊಹ್ಲಿ ದಾಖಲೆ ಬರೆದರು. ಶನಿವಾರ ಹಾಲಿ ಚಾಂಪಿಯನ್ ಆರ್‌ಸಿಬಿ ಮತ್ತು ಎಸ್‌ಆರ್‌ಎಚ್ ನಡುವಿನ ಐಪಿಎಲ್ 2026ರ ಉದ್ಘಾಟನಾ ಪಂದ್ಯದಲ್ಲಿ ಬಲಗೈ ಬ್ಯಾಟ್ಸ್‌ಮನ್ ಈ ಐತಿಹಾಸಿಕ ಸಾಧನೆ ಮಾಡಿದರು.
ಇದರ ಜೊತೆಗೆ, ಕೊಹ್ಲಿ ಪಾಕಿಸ್ತಾನದ ಮಾಜಿ ಬ್ಯಾಟ್ಸ್‌ಮನ್ ಶೋಯೆಬ್ ಮಲಿಕ್ ಅವರನ್ನು ಹಿಂದಿಕ್ಕಿ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದರು. ಮಲಿಕ್ 557 ಟಿ20 ಪಂದ್ಯಗಳು ಮತ್ತು 515 ಇನಿಂಗ್ಸ್‌ಗಳಲ್ಲಿ 13,571 ರನ್ ಗಳಿಸಿದ್ದಾರೆ. ಮಾಜಿ ಕ್ರಿಕೆಟಿಗ 35.99 ಸರಾಸರಿಯನ್ನು ಹೊಂದಿದ್ದರು, ಇದರಲ್ಲಿ ಕಡಿಮೆ ಸ್ವರೂಪದ ಕ್ರಿಕೆಟ್‌ನಲ್ಲಿ 83 ಅರ್ಧಶತಕಗಳು ಸೇರಿವೆ.
Advertisement