

ನವದೆಹಲಿ: ಐಪಿಎಲ್ ಟೂರ್ನಿಯ ಇಂದಿನ ಮತ್ತೊಂದು ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 5 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಇಂದು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ತಾನ ನೀಡಿದ್ದ 194 ರನ್ ಗಳ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 19.2 ಓವರ್ ನಲ್ಲಿ 5 ವಿಕೆಟ್ ಕಳೆದುಕೊಂಡು 197 ರನ್ ಗಳಿಸಿ 5 ವಿಕೆಟ್ ಅಂತರದ ಗೆಲುವು ಸಾಧಿಸಿತು.
ಡೆಲ್ಲಿ ಪರ ಆರಂಭಿಕರಾದ ಅಭಿಷೇಕ್ ಪೊರೆಲ್ (51) ಮತ್ತು ಕೆಎಲ್ ರಾಹುಲ್ (56) ಅಮೋಘ ಜೊತೆಯಾಟ ನೀಡಿದರು. ಈ ಜೋಡಿ ಮೊದಲ ವಿಕೆಟ್ ಗೆ 105 ರನ್ ಗಳ ಭರ್ಜರಿ ಜೊತೆಯಾಟವಾಡಿತು. ಬಳಿಕ ಕ್ರೀಸ್ ಗೆ ಬಂದ ಅಕ್ಸರ್ ಪಟೇಲ್ 34 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟಿಂಗ್ ಮಾಡಿದ್ದ ರಾಜಸ್ತಾನ ತಂಡ ನಿಗಧಿತ 20 ಓವರ್ ನಲ್ಲಿ ವೈಭವ್ ಸೂರ್ಯವಂಶಿ (46), ಧ್ರುವ್ ಜುರೆಲ್ (53) ಮತ್ತು ನಾಯಕ ರಿಯಾನ್ ಪರಾಗ್ (51) ಉತ್ತಮ ಬ್ಯಾಟಿಂಗ್ ನಡೆಸಿ ತಂಡದ ಮೊತ್ತ 190 ರನ್ ಗಳ ಗಡಿ ದಾಟುವಂತೆ ನೋಡಿಕೊಂಡರು.
ರಾಜಸ್ತಾನ ಪ್ಲೇಆಫ್ ಕನಸಿಗೆ ಭಾರಿ ಪೆಟ್ಟು
ಇನ್ನು ಇಂದಿನ ಸೋಲು ರಾಜಸ್ತಾನ ರಾಯಲ್ಸ್ ತಂಡದ ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣವಾಗಿಸಿದೆ. ಪ್ರಸ್ತುತ 12 ಪಂದ್ಯಗಳಲ್ಲಿ ತಲಾ 6 ಸೋಲು ಮತ್ತು ಗೆಲುವುಗಳನ್ನು ಹೊಂದಿರುವ ರಾಜಸ್ತಾನ ಅಂಕಪಟ್ಟಿಯಲ್ಲಿ 12 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. ಇಂದಿನ ಪಂದ್ಯ ಗೆದ್ದಿದ್ದರೆ 14 ಅಂಕಗಳೊಂದಿಗೆ ನೇರವಾಗಿ 4ನೇ ಸ್ಥಾನಕ್ಕೇರುತ್ತಿತ್ತು. ಆದರೆ ಈಗ ಸಂಕಷ್ಟದಲ್ಲಿ ಸಿಲುಕಿದೆ.
Advertisement