

ಮೈದಾನದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತಮ್ಮ ಮನಸ್ಸು ಹೇಳುವುದನ್ನು (instincts) ನಂಬುವುದಾಗಿ ರಾಜಸ್ಥಾನ್ ರಾಯಲ್ಸ್ (RR) ತಂಡದ ನಾಯಕ ರಿಯಾನ್ ಪರಾಗ್ ಭಾನುವಾರ ಹೇಳಿದ್ದಾರೆ. ಮುಂಬೈ ಇಂಡಿಯನ್ಸ್ (MI) ವಿರುದ್ಧ 30 ರನ್‌ಗಳ ಗೆಲುವಿನ ನಂತರ ಈ ಆವೃತ್ತಿಯ ಐಪಿಎಲ್ ಪ್ಲೇಆಫ್‌ಗೆ ತಂಡ ಪ್ರವೇಶಿಸಲು ‘ಧೈರ್ಯಶಾಲಿ’ ನಿರ್ಧಾರಗಳ ಸರಣಿಯೇ ಕಾರಣ ಎಂದು ಹೇಳಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಆರ್ ಎಂಟು ವಿಕೆಟ್‌ಗೆ 205 ರನ್ ಗಳಿಸಿತು. ನಂತರ ಮುಂಬೈ ತಂಡವನ್ನು ಒಂಬತ್ತು ವಿಕೆಟ್ ನಷ್ಟಕ್ಕೆ 175 ರನ್‌ಗೆ ಸೀಮಿತಗೊಳಿಸಿ ಅಂತಿಮ ಪ್ಲೇಆಫ್ ಸ್ಥಾನವನ್ನು ಪಡೆದುಕೊಂಡಿತು. ಈ ಪ್ರಕ್ರಿಯೆಯಲ್ಲಿ ಪಂಜಾಬ್ ಕಿಂಗ್ಸ್ (PBKS) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡಗಳನ್ನು ಹಿಂದಿಕ್ಕಿತು.
‘ಈ ಆವೃತ್ತಿಯಲ್ಲಿ ನಾನು ಸಾಕಷ್ಟು ಧೈರ್ಯಶಾಲಿ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ. ಇದೇ ರೀತಿಯಲ್ಲಿಯೇ ತಂಡವನ್ನು ಮುನ್ನಡೆಸಲು ಇಷ್ಟಪಡುತ್ತೇನೆ. ಜೋಫ್ರಾ ಆರ್ಚರ್ ಮಾತ್ರ ಹಾರ್ದಿಕ್ ಪಾಂಡ್ಯ ಅವರ ವಿಕೆಟ್ ಪಡೆಯಬಹುದು ಎಂದು ನಾನು ಭಾವಿಸಿದೆ ಮತ್ತು ಅವರು ಅದನ್ನೇ ಮಾಡಿದರು. ಸಂಖ್ಯೆಗಳ ಹೊರತಾಗಿಯೂ ನಾನು ಆ ಸಮಯಕ್ಕೆ ಯಾವುದು ಸರಿ ಎನಿಸುತ್ತದೆಯೋ ಅದೇ ನಿರ್ಧಾರವನ್ನು ಕೈಗೊಳ್ಳುತ್ತೇನೆ’ ಎಂದು ಪಂದ್ಯದ ನಂತರ ಪರಾಗ್ ಹೇಳಿದರು.
‘ಯೋಜನೆಯಂತೆ ಎಲ್ಲವೂ ನಡೆದಾಗ ಸಂತೋಷವಾಗುತ್ತದೆ. ನಾವು ಗೆದ್ದಿದ್ದೇವೆ ಆದರೆ ನಾವು ಇನ್ನೂ ಉತ್ತಮವಾಗಿ ಮಾಡಬೇಕಾದ ಕೆಲಸಗಳು ಬಹಳಷ್ಟಿವೆ. ತಂಡಕ್ಕೆ ಹೆಚ್ಚಿನ ಮೊತ್ತದ ಅಗತ್ಯವಿದ್ದ ಕಾರಣ, ಸೆಟ್ ಬ್ಯಾಟರ್ ಹೆಚ್ಚು ಸಮಯ ಕ್ರೀಸ್‌ನಲ್ಲಿ ಇದ್ದು ಹೆಚ್ಚಿನ ರನ್ ಗಳಿಸಬೇಕೆಂದು ಬಯಸಿದ್ದೆ. ಇಬ್ಬರು ಬ್ಯಾಟ್ಸ್‌ಮನ್‌ಗಳು ನಿಧಾನವಾಗಿ ಒಂದು ಚೆಂಡಿಗೆ ಒಂದು ರನ್ ಸ್ಕೋರ್ ಮಾಡುವುದು ಸಾಕಾಗುವುದಿಲ್ಲ. ಅದಕ್ಕಾಗಿಯೇ ನಾವು ಜಡೇಜಾ ಅವರನ್ನು ಕಳುಹಿಸಿದೆವು. ಅವರಿಂದ 20 ರನ್‌ಗಳನ್ನು ತ್ವರಿತವಾಗಿ ಪಡೆಯಲು ನಾವು ಬಯಸಿದ್ದೆವು. ಅವರು ಅದನ್ನು ಒದಗಿಸಿದರು’ ಎಂದರು.
ನಾನಿನ್ನೂ ಶೇ 100 ರಷ್ಟು ಫಿಟ್ ಆಗಿಲ್ಲ ಆದರೆ ಪ್ಲೇಆಫ್‌ನಲ್ಲಿ ಆಡುವ ವಿಶ್ವಾಸವನ್ನು ಹೊಂದಿರುವುದಾಗಿ ಅಸ್ಸಾಂ ಕ್ರಿಕೆಟಿಗ ತಿಳಿಸಿದರು.
‘ನಾನು ಖಂಡಿತವಾಗಿಯೂ ಫಿಟ್ ಆಗಿರಲಿಲ್ಲ, ಇವತ್ತು ಅಥವಾ ಮುಂದಿನ ಪಂದ್ಯವನ್ನು ಆಡುವ ಹಾಗಿರಲಿಲ್ಲ. ಆದರೆ, ಮುಂದಿನ ಪಂದ್ಯವನ್ನು ಖಂಡಿತವಾಗಿಯೂ ಆಡುತ್ತೇನೆ. ಜೋಫ್ರಾ ಬಂಡೆಯಂತೆ ಬಲಿಷ್ಠರಾಗಿದ್ದರೆ, ಜಡ್ಡು ಯೋಧನಂತೆ ಬಲಿಷ್ಠರಾಗಿದ್ದಾರೆ. ನಾವು ಮೊದಲೇ ಪ್ಲೇಆಫ್‌ನಲ್ಲಿ ಅರ್ಹತೆ ಪಡೆಯಬೇಕಿತ್ತು. ಆದರೆ, ನಾವು ಹಿಂದುಳಿದೆವು’ ಎಂದರು.
‘ಕೊನೆಯ ಸಮಯದಲ್ಲಿ ಯೋಜನೆಗಳಿಗೆ ಅಂಟಿಕೊಳ್ಳುವುದು ಮತ್ತು ಒತ್ತಡವನ್ನು ಹಿಡಿದಿಟ್ಟುಕೊಳ್ಳುವುದು ಮಾತ್ರ ಮುಖ್ಯವಾಗಿತ್ತು. ಎಲ್ಲ ಬೌಲರ್‌ಗಳು ಅದ್ಭುತ ಕೆಲಸ ಮಾಡಿದರು’ ಎಂದು ಆರ್‌ಆರ್ ಕ್ರಿಕೆಟ್ ನಿರ್ದೇಶಕ ಕುಮಾರ್ ಸಂಗಕ್ಕಾರ ಹೇಳಿದರು.
Advertisement