IPL ಅಭಿಮಾನಿ ಸಂಸ್ಕೃತಿಯ ಕೊಳಕು ಮುಖ ಮತ್ತೆ ಬಯಲು; ವಿರಾಟ್ ಕೊಹ್ಲಿ ಜೊತೆ ಘರ್ಷಣೆ ನಂತರ ಟ್ರಾವಿಸ್ ಹೆಡ್ ಪತ್ನಿಗೆ ನಿಂದನೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ತಂಡಗಳು ಪ್ಲೇಆಫ್‌ಗೆ ಅರ್ಹತೆ ಪಡೆದಿರುವುದರಿಂದ ಐಪಿಎಲ್ 2026ರ ಆವೃತ್ತಿಯಲ್ಲಿ ಮತ್ತೆ ಮುಖಾಮುಖಿಯಾಗುವ ಸಾಧ್ಯತೆ ಇದೆ.
Virat Kohli - Travis Head with Wife Jessica
ವಿರಾಟ್ ಕೊಹ್ಲಿ- ಪತ್ನಿ ಜೆಸ್ಸಿಕಾರೊಂದಿಗೆ ಟ್ರಾವಿಸ್ ಹೆಡ್
Updated on

ಐಪಿಎಲ್ 2026ರ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವು ಸೋಲು ಕಂಡಿತ್ತು. ಲೀಗ್ ಹಂತದ ಇತ್ತೀಚಿನ ಪಂದ್ಯದಲ್ಲಿ ಎಸ್‌ಆರ್‌ಎಚ್ ಆರ್‌ಸಿಬಿ ವಿರುದ್ಧ ಗೆಲುವು ಸಾಧಿಸುವ ಮೂಲಕ ಸೇಡು ತೀರಿಸಿಕಿಂಡಿತು. ಅದಷ್ಟೇ ಅಲ್ಲದೆ, ವಿರಾಟ್ ಕೊಹ್ಲಿ ಮತ್ತು ಟ್ರಾವಿಸ್ ಹೆಡ್ ನಡುವಿನ ವೈಯಕ್ತಿಕ ಘರ್ಷಣೆಗೂ ಸಾಕ್ಷಿಯಾಯಿತು. ಅದಾದ ಸ್ವಲ್ಪ ಸಮಯದ ನಂತರ ಉಭಯ ತಂಡಗಳ ಹಸ್ತಲಾಘವದ ವೇಳೆ, ಕೊಹ್ಲಿ ಟ್ರಾವಿಸ್ ಹೆಡ್‌ ಅವರಿಗೆ ಹ್ಯಾಂಡ್‌ಶೇಕ್ ನಿರಾಕರಿಸಿದರು. ಇದು ಇಂಟರ್ನೆಟ್‌ನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಯಿತು.

ಟ್ರಾವಿಸ್ ಹೆಡ್ ಅವರ ವರ್ತನೆಯಿಂದ ಆರ್‌ಸಿಬಿ ಸ್ಟಾರ್ ಕೊಹ್ಲಿ ಸಂತೋಷವಾಗಿಲ್ಲ ಎಂಬುದು ಬಹಿರಂಗಗೊಂಡಿತು. ಆದರೆ, ಕೊಹ್ಲಿಯ ಅಭಿಮಾನಿಗಳು SRH ಬ್ಯಾಟ್ಸ್‌ಮನ್‌ನ ಪತ್ನಿ ಜೆಸ್ಸಿಕಾ ಅವರನ್ನು ಈ ವಿಷಯಕ್ಕೆ ಎಳೆದು ತರಲು ನಿರ್ಧರಿಸಿದರು.

ಪಂದ್ಯದ ವೇಳೆ ಮೈದಾನದಲ್ಲಿ ನಡೆಯುವ ಕೆಲವು ಘಟನೆಗಳ ಪರಿಣಾಮಗಳನ್ನು ಆಯಾ ಆಟಗಾರರ ಸಂಗಾತಿಗಳು ಅನುಭವಿಸಬೇಕಾಗಿ ಬಂದಿರುವುದು ಇದೇ ಮೊದಲಲ್ಲ. 2023ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾದ ODI ವಿಶ್ವಕಪ್ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರನ್ನು ಔಟ್ ಮಾಡಲು ಟ್ರಾವಿಸ್ ಹೆಡ್ ಹಿಡಿದ ಕ್ಯಾಚ್ ಜೆಸ್ಸಿಕಾಗೆ ಇದೇ ರೀತಿಯ ಅನುಭವವನ್ನು ನೀಡಿತು. 2026ರ ಐಪಿಎಲ್ ಪಂದ್ಯದಲ್ಲಿ ಕೊಹ್ಲಿ-ಹೆಡ್ ಘರ್ಷಣೆಯ ನಂತರದ ಪರಿಸ್ಥಿತಿಯೂ ಅವರಿಗೆ ಹೆಚ್ಚು ಭಿನ್ನವಾಗಿರಲಿಲ್ಲ.

‘ಏಕದಿನ ವಿಶ್ವಕಪ್ ನಂತರ ನಡೆದ ದೌರ್ಜನ್ಯದ ಪುನರಾವರ್ತನೆಯಂತೆ ಇದು ಭಾಸವಾಗುತ್ತಿದೆ. ನನ್ನ ಸಾಮಾಜಿಕ ಜಾಲತಾಣಗಳಲ್ಲಿನ ಸ್ಫೋಟದಿಂದಾಗಿ ನಾನು ಎಚ್ಚೆತ್ತುಕೊಂಡೆ... ನಾವು ಚೆನ್ನಾಗಿದ್ದೇವೆ. ಆದರೆ, ಅವರು ನನ್ನ ಸ್ನೇಹಿತರು ಮತ್ತು ಕುಟುಂಬದವರ ಮೇಲೆ ದಾಳಿ ಮಾಡುತ್ತಿದ್ದಾರೆ’ ಎಂದು ಜೆಸ್ಸಿಕಾ ಆಸ್ಟ್ರೇಲಿಯಾದ ಮಾಧ್ಯಮ ಸಂಸ್ಥೆ ದಿ ಅಡ್ವರ್ಟೈಸರ್ ಜೊತೆ ಮಾತನಾಡುತ್ತಾ ಹೇಳಿದರು.

Virat Kohli - Travis Head with Wife Jessica
'ನೋಡ್ತಿರಿ ನಾನೇನ್ ಮಾಡ್ತೀನಿ..': ವಿರಾಟ್ ಕೊಹ್ಲಿ ಜೊತೆಗಿನ ವಾಗ್ವಾದದ ನಂತರ ಟ್ರಾವಿಸ್ ಹೆಡ್ ಪೋಸ್ಟ್ ವೈರಲ್!

‘ಈ ಸಮಯದಲ್ಲಿ ಎಲ್ಲ ಕ್ರೀಡೆಗಳಲ್ಲಿ ಮಾನಸಿಕ ಆರೋಗ್ಯ, ದೃಷ್ಟಿಕೋನ ಮತ್ತು ನಾವು ಪರಸ್ಪರ ಮಾತನಾಡುವ ವಿಧಾನದ ಬಗ್ಗೆ ಒಂದು ಪ್ರಮುಖ ಸಂಭಾಷಣೆ ನಡೆಯುತ್ತಿದೆ ಎಂದು ನಾನು ಭಾವಿಸುತ್ತೇನೆ. ಉತ್ಸಾಹವು ಯಾವಾಗಲೂ ಕ್ರೀಡೆಯ ಭಾಗವಾಗಿರುತ್ತದೆ. ಆದರೆ, ಆಟದ ಹಿಂದೆ ನಿಜವಾದ ಜನರು ಮತ್ತು ಕುಟುಂಬಗಳಿವೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಸಹ ಅಷ್ಟೇ ಮುಖ್ಯ. ಇದು ಪರಸ್ಪರ ಹೆಚ್ಚು ದಯೆ ಮತ್ತು ಬೆಂಬಲವನ್ನು ಪ್ರೋತ್ಸಾಹಿಸುತ್ತದೆ ಎಂದು ನಾನು ಭಾವಿಸುತ್ತೇನೆ’ ಎಂದು ಅವರು ಹೇಳಿದರು.

ವಿರಾಟ್ ಕೊಹ್ಲಿ ಹ್ಯಾಂಡ್‌ಶೇಕ್ ತಿರಸ್ಕರಿಸಲು ಕಾರಣವೇನು?

SRH vs RCB ಪಂದ್ಯದ ಸಮಯದಲ್ಲಿ ಕಾಮೆಂಟರಿ ಮಾಡುತ್ತಿದ್ದ ಭಾರತದ ಮಾಜಿ ಆಲ್ ರೌಂಡರ್ ಇರ್ಫಾನ್ ಪಠಾಣ್, ಕೊಹ್ಲಿ ಮತ್ತು ಹೆಡ್ ಬ್ಯಾಟಿಂಗ್ ಮಾಡುವಾಗ ಅವರ ನಡುವೆ ಬಹಳಷ್ಟು ವಿಷಯಗಳು ನಡೆದವು ಎಂದು ಬಹಿರಂಗಪಡಿಸಿದರು. ನಂತರ ಮೈದಾನದಲ್ಲಿನ ಜಗಳವು ಹ್ಯಾಂಡ್‌ಶೇಕ್ ತಿರಸ್ಕರಿಸಲು ಕಾರಣವಾಯಿತು, ಇದನ್ನು ತಪ್ಪಿಸಬಹುದಿತ್ತು.

‘ಹೌದು, ನಾನು ಆ ಸಮಯದಲ್ಲಿ ಕಾಮೆಂಟ್ ಮಾಡುತ್ತಿದ್ದೆ. ವಿರಾಟ್ ಕೂಡ ಆಸ್ಟ್ರೇಲಿಯನ್ನರು ಆಡುವ ರೀತಿಯಲ್ಲಿ ಕ್ರಿಕೆಟ್ ಆಡಲು ಇಷ್ಟಪಡುತ್ತಾರೆ. ಟ್ರಾವಿಸ್ ಹೆಡ್ ಮಾಡಿದ ಕಮೆಂಟ್, ಕೊಹ್ಲಿಯನ್ನು ಕೆರಳಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಕೊಹ್ಲಿ, 'ನೀವು ಇಂಪ್ಯಾಕ್ಟ್ ಆಟಗಾರನಲ್ಲ'. ’ಕೆಲವು ಓವರ್’ಗಳನ್ನು ಬೌಲಿಂಗ್ ಮಾಡಿ ನೋಡೋಣ’ ಎಂದಿದ್ದಾರೆ. ಆದರೆ, ಕೊಹ್ಲಿ, ಕೇವಲ ಹದಿನೈದು ರನ್ ಗಳಿಸಿ ಔಟಾಗಿದ್ದರು. ಆಗ ಟ್ರಾವಿಸ್ ಹೆಡ್, ನಾನು ಬೌಲಿಂಗ್ ಮಾಡಲು ಬರುವ ಮೊದಲೇ ನೀವು ಔಟ್ ಆಗಿದ್ದೀರಲ್ಲಾ’ ಎಂದು ಕೆಣಕಿದ್ದಾರೆ. ಇದು ವಿರಾಟ್ ಕೊಹ್ಲಿ ಕೋಪಕ್ಕೆ ಕಾರಣವಾಗಿದೆ. ಆಟದ ನಂತರವೂ ಈ ತಿಕ್ಕಾಟ ಮುಂದುವರಿಯಿತು. ನಾನು ಅದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಆದರೆ ಮೈದಾನದಲ್ಲಿ ಏನಾಯಿತೋ, ಅದು ಸಂಭವಿಸುತ್ತದೆ. ನೀವು ಆಕ್ರಮಣಕಾರಿಯಾಗಿ ಆಡಲು ಬಯಸುತ್ತೀರಿ ಎಂದಾದಾಗ ಈ ರೀತಿಯ ಘಟನೆಗಳು ಮೈದಾನದಲ್ಲಿ ನಡೆಯುತ್ತವೆ’ ಎಂದು ಇರ್ಫಾನ್ ಹೇಳಿದ್ದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ತಂಡಗಳು ಪ್ಲೇಆಫ್‌ಗೆ ಅರ್ಹತೆ ಪಡೆದಿರುವುದರಿಂದ ಐಪಿಎಲ್ 2026ರ ಆವೃತ್ತಿಯಲ್ಲಿ ಮತ್ತೆ ಮುಖಾಮುಖಿಯಾಗುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com