'ಇನ್ನೂ ಏನ್ ಮಾಡಬೇಕು?': ರನ್ ಹೊಳೆ ಹರಿಸಿದರೂ ODIನಲ್ಲಿ ಸ್ಥಾನವಿಲ್ಲ, ಅಭಿಷೇಕ್ ಶರ್ಮಾ ಬೆನ್ನಿಗೆ ನಿಂತ Yuvraj Singh!

ಟೀಂ ಇಂಡಿಯಾದ ಯುವ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಸದ್ಯ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.
Yuvraj Singh Questions Abhishek Sharma's ODI Exclusion
ಯುವರಾಜ್ ಸಿಂಗ್ ಮತ್ತು ಅಭಿಷೇಕ್ ಶರ್ಮಾ
Updated on: 

ನವದೆಹಲಿ: ಏಕದಿನ ವಿಶ್ವಕಪ್ ಗೆ ಭಾರತ ತಂಡದ ಸಿದ್ಧತೆ ನಡೆಸುತ್ತಿರುವ ಹೊತ್ತಿನಲ್ಲೇ ಯುವ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಸ್ಥಾನದ ಕುರಿತು ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಬ್ಯಾಟ್ ಬೀಸಿದ್ದಾರೆ.

Cricbuzz ಜೊತೆ ಮಾತನಾಡಿರುವ ಯುವರಾಜ್ ಸಿಂಗ್, ಅಭಿಷೇಕ್ ಶರ್ಮಾ ಅವರ ಏಕದಿನ ತಂಡಕ್ಕೆ ಆಯ್ಕೆಯಾಗದಿರುವುದನ್ನು ಪ್ರಶ್ನಿಸಿದ್ದಾರೆ. ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಅಭಿಷೇಕ್ ಶರ್ಮಾ ಇನ್ನೂ ಭಾರತದ ಏಕದಿನ ತಂಡದಲ್ಲಿ ಸ್ಥಾನ ಪಡೆಯದಿರುವುದು ಯುವರಾಜ್ ಸಿಂಗ್ ಅವರಿಗೆ ಅಚ್ಚರಿ ಮೂಡಿಸಿದೆ.

ಟೀಂ ಇಂಡಿಯಾದ ಯುವ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಸದ್ಯ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್‌ಗಳ ಬೆವರಿಳಿಸುತ್ತಿರುವ ಅಭಿಷೇಕ್, ತಮ್ಮ ಆಟದ ಮೂಲಕವೇ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ಆದರೆ, ಅವರ ಬ್ಯಾಟಿಂಗ್ ಮಾತ್ರವಲ್ಲದೆ ಮೈದಾನದಲ್ಲಿ ಯುವ ಆಟಗಾರರನ್ನು ಪ್ರೋತ್ಸಾಹಿಸುವ ನಾಯಕತ್ವದ ಗುಣವೂ ತಮ್ಮನ್ನು ಮೆಚ್ಚಿಸಿದೆ ಎಂದು ಮಾಜಿ ಕ್ರಿಕೆಟಿಗ ಹಾಗೂ ಅಭಿಷೇಕ್ ಅವರ ಮಾರ್ಗದರ್ಶಕ ಯುವರಾಜ್ ಸಿಂಗ್ ಹೇಳಿದ್ದಾರೆ.

Yuvraj Singh Questions Abhishek Sharma's ODI Exclusion
ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ವೈಭವ್ ಸೂರ್ಯವಂಶಿ ಕುರಿತು BCCI ಆಯ್ಕೆದಾರರಿಗೆ ಯುವರಾಜ್ ಸಿಂಗ್ ಸಂದೇಶ!

ಅಭಿಷೇಕ್‌ನಲ್ಲಿ ನಾಯಕನ ಗುಣಗಳಿವೆ!

ಅಭಿಷೇಕ್ ಅವರ ನಾಯಕತ್ವದ ಗುಣಗಳ ಬಗ್ಗೆ ಮಾತನಾಡಿದ ಯುವರಾಜ್ ಸಿಂಗ್, "ಅವರು ಭವಿಷ್ಯದಲ್ಲಿ ನಾಯಕನಾಗುತ್ತಾರೆಯೇ ಎಂದು ಹೇಳಲು ಈಗ ತುಂಬಾ ಬೇಗ. ಆದರೆ, ಅವರಲ್ಲಿ ಉತ್ತಮ ನಾಯಕನಾಗುವ ಎಲ್ಲಾ ಗುಣಗಳಿವೆ. ರಾಜ್ಯ ಮಟ್ಟದ ಕ್ರಿಕೆಟ್‌ನಲ್ಲೂ ಯುವ ಆಟಗಾರರನ್ನು ಪ್ರೋತ್ಸಾಹಿಸುತ್ತಾರೆ.

ವಿಶೇಷವಾಗಿ ವೈಭವ್ ಸೂರ್ಯವಂಶಿ ಜೊತೆ ಆಡುವಾಗ ಆತನ ಹೆಗಲ ಮೇಲೆ ಕೈಹಾಕಿ ಪ್ರೋತ್ಸಾಹಿಸುವ ಮತ್ತು ಆತ್ಮವಿಶ್ವಾಸ ತುಂಬುವ ಅಭಿಷೇಕ್ ಅವರ ನಡೆ ನನಗೆ ತುಂಬಾ ಇಷ್ಟವಾಯಿತು. ಇದು ಒಬ್ಬ ಹಿರಿಯ ಆಟಗಾರನಲ್ಲಿರಬೇಕಾದ ಉತ್ತಮ ನಾಯಕತ್ವದ ಲಕ್ಷಣ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಭಿಷೇಕ್ ಭವಿಷ್ಯದಲ್ಲಿ ಭಾರತ ತಂಡದ ನಾಯಕನಾಗಬೇಕಾದರೆ ಮೊದಲು ಐಪಿಎಲ್ ತಂಡದ ನಾಯಕತ್ವ ವಹಿಸುವ ಅನುಭವ ಪಡೆಯುವುದು ಮುಖ್ಯ ಎಂದೂ ಯುವರಾಜ್ ಅಭಿಪ್ರಾಯಪಟ್ಟಿದ್ದಾರೆ.

"ನೀವು ಒಂದು ದಿನ ಭಾರತ ತಂಡದ ನಾಯಕನಾಗಬೇಕೆಂದರೆ ಮೊದಲು ನಿಮ್ಮ ಐಪಿಎಲ್ ತಂಡವನ್ನು ಮುನ್ನಡೆಸಬೇಕು. ಅದು ಭಾರತ ತಂಡವನ್ನು ಮುನ್ನಡೆಸಲು ಬೇಕಾದ ಆತ್ಮವಿಶ್ವಾಸವನ್ನು ನೀಡುತ್ತದೆ. ಅಭಿಷೇಕ್ ನಾಯಕನಾಗುವ ಸಾಮರ್ಥ್ಯ ಹೊಂದಿದ್ದಾರೆಯೇ ಎಂಬುದನ್ನು ಕಾಲವೇ ನಿರ್ಧರಿಸಲಿದೆ. ಅವರ ಅದೃಷ್ಟದಲ್ಲಿದ್ದರೆ ಖಂಡಿತವಾಗಿಯೂ ಅವಕಾಶ ಸಿಗುತ್ತದೆ. ಇಲ್ಲದಿದ್ದರೂ ಪರವಾಗಿಲ್ಲ. ನಾಯಕನಾಗಲಿ, ಬಿಡಲಿ ಅವರು ಅತ್ಯುತ್ತಮ ವೈಟ್‌ಬಾಲ್ ಕ್ರಿಕೆಟಿಗನಾಗಿ ವೃತ್ತಿಜೀವನ ಮುಗಿಸುವ ವಿಶ್ವಾಸ ನನಗಿದೆ" ಎಂದು ಯುವರಾಜ್ ಹೇಳಿದ್ದಾರೆ.

ಏಕದಿನ ತಂಡದಲ್ಲಿ ಸ್ಥಾನ ಪಡೆಯಲು ಇನ್ನೇನು ಮಾಡಬೇಕು?

ಅಭಿಷೇಕ್ ಶರ್ಮಾ ಅವರ ಏಕದಿನ ತಂಡದ ಆಯ್ಕೆಯ ವಿಚಾರಕ್ಕೆ ಬಂದಾಗ ಯುವರಾಜ್ ಸಿಂಗ್ ಆಯ್ಕೆ ಸಮಿತಿಯ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. "ಅವರು 35 ರನ್ ಗಳಿಸಲಿ, 100 ರನ್ ಗಳಿಸಲಿ ಅಥವಾ 31 ರನ್ ಗಳಿಸಲಿ, ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಬಹಳ ದಿನಗಳಿಂದ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎನ್ನುವುದೇ ಮುಖ್ಯ.

ಏಕದಿನ ತಂಡದಲ್ಲಿ ಸ್ಥಾನ ಪಡೆಯಲು ಅವರು ಇನ್ನೇನು ಮಾಡಬೇಕು ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ಬಹುಶಃ ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲೂ ಹೆಚ್ಚು ಕೊಡುಗೆ ನೀಡಬೇಕಿರಬಹುದು. ಆದರೆ, ಅದಕ್ಕೆ ಅವರಿಗೆ ಮೊದಲು ಆಡುವ ಅವಕಾಶ ಸಿಗಬೇಕಲ್ಲವೇ?" ಎಂದು ಯುವರಾಜ್ ಪ್ರಶ್ನಿಸಿದ್ದಾರೆ.

ತಂಡದಲ್ಲಿ ಸ್ಥಾನ ಪಡೆಯಲು ಸಾಕಷ್ಟು ಪೈಪೋಟಿ ಇರುವುದು ನಿಜವಾದರೂ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರರಿಗೆ ಅವಕಾಶ ಕಲ್ಪಿಸುವುದು ಆಯ್ಕೆ ಸಮಿತಿ ಮತ್ತು ತಂಡದ ಆಡಳಿತ ಮಂಡಳಿಯ ಜವಾಬ್ದಾರಿ ಎಂದು ಅವರು ಹೇಳಿದ್ದಾರೆ.

"ಪ್ರತಿಯೊಬ್ಬ ಆಟಗಾರನೂ ಸುಧಾರಿಸಿಕೊಳ್ಳಲು ಕೆಲವು ಕ್ಷೇತ್ರಗಳಿರುತ್ತವೆ. ಆದರೆ, ಅವಕಾಶ ನೀಡದಿದ್ದರೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ಆಟಗಾರನಿಗೆ ಹೇಗೆ ಸಾಧ್ಯ? ತಂಡದಲ್ಲಿ ಈಗಾಗಲೇ ದೊಡ್ಡ ಹೆಸರುಗಳಿದ್ದು, ಸ್ಥಾನಕ್ಕಾಗಿ ತೀವ್ರ ಪೈಪೋಟಿ ಇರುವುದು ನನಗೆ ಅರ್ಥವಾಗುತ್ತದೆ. ವೈಭವ್ ಸೂರ್ಯವಂಶಿಯನ್ನೇ ನೋಡಿ.

ಆತ ಅದ್ಭುತವಾಗಿ ಆಡಿದ ಪರಿಣಾಮ ಟಿ20 ತಂಡದಲ್ಲಿ ತನ್ನದೇ ಸ್ಥಾನ ಸಂಪಾದಿಸಿಕೊಂಡಿದ್ದಾನೆ. ಅಭಿಷೇಕ್ ಈಗ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ನಿಮಗೆ ಅನಿಸಿದರೆ, ಮುಂಬರುವ ವಿಶ್ವಕಪ್‌ವರೆಗೆ 50 ಓವರ್‌ಗಳ ಕ್ರಿಕೆಟ್ ಆಡಲು ಅವರಿಗೂ ತಂಡದಲ್ಲಿ ಒಂದು ಸ್ಥಾನ ಕಲ್ಪಿಸಬೇಕು" ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X