

ಪುಣೆ: ಭಾರತದ ಆಲ್‌ರೌಂಡರ್ ಹಾಗೂ ಆರ್ ಸಿಬಿ ಆಟಗಾರ್ತಿ ಪ್ರೇಮಾ ರಾವತ್ ಅವರು, ಮಹಿಳಾ ಟಿ20 ಕ್ರಿಕೆಟ್ ನಲ್ಲಿ ಅತಿ ವೇಗದ ಅರ್ಧಶತಕ ಸಿಡಿಸುವ ಮೂಲಕ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ.
ಉತ್ತರಾಖಂಡ ತಂಡದ 24 ವರ್ಷದ ಬೌಲಿಂಗ್ ಆಲ್‌ರೌಂಡರ್ ಆಗಿರುವ ಪ್ರೇಮಾ ರಾವತ್ ಅವರು, ಕೇವಲ 14 ಎಸೆತಗಳಲ್ಲಿ ಸ್ಫೋಟಕ ಅರ್ಧ ಶತಕ ಸಿಡಿಸುವ ಮೂಲಕ ಮಹಿಳಾ ಟಿ20 ಕ್ರಿಕೆಟ್ನಲ್ಲಿ ಅತೀ ವೇಗದ ಹಾಫ್ ಸೆಂಚುರಿ ಬಾರಿಸಿದ ಬ್ಯಾಟರ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಇದುವರೆಗೆ ಏಳು ಟಿ20 ಅಂತರರಾಷ್ಟ್ರೀಯ(T20I) ಪಂದ್ಯಗಳಲ್ಲಿ ಭಾರತ ಮಹಿಳಾ ತಂಡವನ್ನು ಪ್ರತಿನಿಧಿಸಿರುವ ಪ್ರೇಮಾ ಅವರು, ಸೋಮವಾರ ಪುಣೆಯ ಗಹುಂಜೆಯಲ್ಲಿರುವ ಎಂಸಿಎ (MCA) ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 'ಸೀನಿಯರ್ ಮಹಿಳಾ ಟಿ20 ಟ್ರೋಫಿ ಎಲೈಟ್' ಪಂದ್ಯದಲ್ಲಿ, ಉತ್ತರಾಖಂಡದ ಪರವಾಗಿ, ಹೈದರಾಬಾದ್ ವಿರುದ್ಧ ಕೇವಲ 14 ಎಸೆತಗಳಲ್ಲಿ ಅಜೇಯ 50 ರನ್ ಗಳಿಸಿದರು.
ಸೆಪ್ಟೆಂಬರ್‌ನಲ್ಲಿ ಮಹಿಳಾ ಏಷ್ಯಾ ಕಪ್ ಪ್ರಶಸ್ತಿಯನ್ನು ಗೆದ್ದ ಭಾರತೀಯ ತಂಡದ ಭಾಗವಾಗಿದ್ದ ಪ್ರೇಮಾ, ಮೂರು ಬೌಂಡರಿಗಳು ಮತ್ತು ಆರು ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ತಮ್ಮ ಉತ್ತರಾಖಂಡ ತಂಡವು 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 187 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು.
ಮಹಿಳಾ ಟಿ20 ಕ್ರಿಕೆಟ್ ಪಂದ್ಯವೊಂದರಲ್ಲಿ ಅತಿ ವೇಗದ ಅರ್ಧಶತಕ (50 ರನ್) ಗಳಿಸಿದ ದಾಖಲೆಯು ಈ ಹಿಂದೆ ಮೇರಿ ಕೆಲ್ಲಿ ಅವರ ಹೆಸರಿನಲ್ಲಿತ್ತು. 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಇದೀಗ ಈ ದಾಖಲೆಯನ್ನು ಪ್ರೇಮಾ ರಾವತ್ ಅಳಿಸಿ ಹಾಕಿದ್ದಾರೆ. ಕೇವಲ 14 ಎಸೆತಗಳಲ್ಲಿ 50 ರನ್ ಸಿಡಿಸುವ ಮೂಲಕ ಪ್ರೇಮಾ ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ.
RCB ಆಟಗಾರ್ತಿ
ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಪ್ರೇಮಾ ರಾವತ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದಾರೆ. 2025ರ ಡಬ್ಲ್ಯುಪಿಎಲ್ ಹರಾಜಿನ ಮೂಲಕ ಆರ್ಸಿಬಿ ಪ್ರೇಮಾ ಅವರನ್ನು ₹1.2 ಕೋಟಿ ನೀಡಿ ಖರೀದಿಸಿತ್ತು. ಅಲ್ಲದೆ ಈ ಬಾರಿ ಕೂಡ ಅವರನ್ನು ತಂಡದಲ್ಲೇ ಉಳಿಸಿಕೊಂಡಿದ್ದಾರೆ.