Cricket: 'ಭಾರತಕ್ಕೆ ಈಗಾಗಲೇ ಬುಮ್ರಾ ಪರ್ಯಾಯ ಸಿಕ್ಕಾಯ್ತು... ಈ ವಿಚಾರ ಗಂಭೀರ್ ಗೂ ಮೊದಲೇ ಗೊತ್ತು'

2027ರ ಏಕದಿನ ವಿಶ್ವಕಪ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವೇಗದ ಬೌಲರ್‌ಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.
India May Have Found Jasprit Bumrah's Backup, And Gautam Gambhir Already Knows It
ಜಸ್ ಪ್ರೀತ್ ಬುಮ್ರಾ ಮತ್ತು ಗೌತಮ್ ಗಂಭೀರ್
Updated on: 

ನವದೆಹಲಿ: ಟೀಮ್ ಇಂಡಿಯಾದ ಪ್ರಮುಖ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಅವರ ಸ್ಥಾನ ತುಂಬಬಲ್ಲ ಮತ್ತೊಬ್ಬ ವೇಗದ ಬೌಲರ್ ಸಿಕ್ಕಿದ್ದಾನೆಯೇ? ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಪಂಜಾಬ್‌ನ 26 ವರ್ಷದ ಯುವ ವೇಗಿ ಕುರಿತು ಇದೀಗ ವ್ಯಾಪಕ ನಿರೀಕ್ಷೆಗಳು ಗರಿಗೆದರಿವೆ.

ಇಷ್ಟಕ್ಕೂ ವೇಗಿ ಬೇರಾರು ಅಲ್ಲ.. ಪಂಜಾಬ್ ನ ಯುವ ವೇಗದ ಬೌಲರ್, ಗುರ್ನೂರ್ ಬ್ರಾರ್.. 2027ರ ಏಕದಿನ ವಿಶ್ವಕಪ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವೇಗದ ಬೌಲರ್‌ಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಈ ನಡುವೆ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಗುರ್‌ನೂರ್ ಬ್ರಾರ್ ತಮ್ಮ ಬೌಲಿಂಗ್ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಒಟ್ಟು ಏಳು ವಿಕೆಟ್ ಕಬಳಿಸಿರುವ ಗುರ್ನೂರ್, ಎರಡನೇ ಏಕದಿನ ಪಂದ್ಯವೊಂದರಲ್ಲೇ ನಾಲ್ಕು ವಿಕೆಟ್ ಪಡೆದು ಮಿಂಚಿದ್ದಾರೆ. ಈ ಮೂಲಕ ಕೇವಲ 11 ಏಕದಿನ ಪಂದ್ಯಗಳಲ್ಲಿ 21 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಬುಮ್ರಾ ತಂಡದಲ್ಲಿ ಇಲ್ಲದ ಸಂದರ್ಭದಲ್ಲಿ ಭಾರತಕ್ಕೆ ವಿಶ್ವಾಸಾರ್ಹ ವೇಗದ ಬೌಲರ್ ಆಗಿ ಹೊರಹೊಮ್ಮುತ್ತಿದ್ದಾರೆ.

India May Have Found Jasprit Bumrah's Backup, And Gautam Gambhir Already Knows It
7 ಎಸೆತಗಳಲ್ಲಿ 7 ರನ್ ಗಳಿಸಿ ಔಟಾದರೂ ರಿಕ್ಕಿ ಪಾಂಟಿಂಗ್ ದಾಖಲೆ ಮುರಿದ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ!

ಮುರಳಿ ಕಾರ್ತಿಕ್ ಮೆಚ್ಚುಗೆ

ಗುರ್ನೂರ್ ಅವರ ಈ ಪ್ರದರ್ಶನಕ್ಕೆ ಮಾಜಿ ಕ್ರಿಕೆಟಿಗ ಮುರಳಿ ಕಾರ್ತಿಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕ್ರಿಕ್‌ಬಜ್‌ನಲ್ಲಿ ಮಾತನಾಡಿದ ಮುರಳಿ ಕಾರ್ತಿಕ್, ಎರಡನೇ ಏಕದಿನ ಪಂದ್ಯದಲ್ಲಿ 10 ಓವರ್‌ಗಳಲ್ಲಿ ಕೇವಲ 30 ರನ್ ನೀಡಿ ನಾಲ್ಕು ವಿಕೆಟ್ ಪಡೆದ ಅವರ ಬೌಲಿಂಗ್ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ. ಅಲ್ಲದೆ, ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ಗುರ್ನೂರ್ ಅವರನ್ನು ಇಷ್ಟಪಡಲು ಪ್ರಮುಖ ಕಾರಣವಿದೆ ಎಂದು ಹೇಳಿದ್ದಾರೆ.

'ಗುರ್‌ನೂರ್ ಬೌಲಿಂಗ್‌ನಲ್ಲಿ ಕಾಣುವ ಆಕ್ರಮಣಕಾರಿ ಮನೋಭಾವ ಉತ್ತಮವಾಗಿದೆ. ಭಾರತಕ್ಕೆ ಇಂತಹ ಬೌಲರ್‌ಗಳ ಅಗತ್ಯವಿದೆ. ಇದೇ ಕಾರಣಕ್ಕೆ ಗೌತಮ್ ಗಂಭೀರ್ ಕೂಡ ಅವರನ್ನು ಇಷ್ಟಪಡುತ್ತಾರೆ. ಅವರು ಬ್ಯಾಟರ್‌ಗಳಿಗೆ ವೇಗವಾಗಿ ಮತ್ತು ಬಲವಾಗಿ ಬೌನ್ಸರ್‌ಗಳನ್ನು ಎಸೆಯುತ್ತಾರೆ. ಎದುರಾಳಿ ಬ್ಯಾಟರ್‌ಗಳನ್ನು ಒತ್ತಡಕ್ಕೆ ಸಿಲುಕಿಸುವ ಸಾಮರ್ಥ್ಯ ಅವರಲ್ಲಿದೆ' ಎಂದು ಹೇಳಿದ್ದಾರೆ.

ಬೆಂಚ್ ಸಾಮರ್ಥ್ಯ ಕೂಡ ಉತ್ತಮ

ಇದೇ ವೇಳೆ ಭಾರತ ತಂಡದಲ್ಲಿ ಕುಲದೀಪ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ಅವರಂತಹ ಅನುಭವಿ ಆಟಗಾರರು ಬೆಂಚ್‌ನಲ್ಲಿರುವುದು ಕೂಡ ತಂಡದ ಬೌಲಿಂಗ್ ಬಲವನ್ನು ತೋರಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಜಸ್‌ಪ್ರೀತ್ ಬುಮ್ರಾ ಈ ಏಕದಿನ ಸರಣಿಯಲ್ಲಿ ಆಡುತ್ತಿಲ್ಲ. ಇನ್ನು ಪ್ರಸಿದ್ಧ್ ಕೃಷ್ಣ ಮತ್ತು ಹರ್ಷಿತ್ ರಾಣಾ ಕೂಡ ತಂಡದಿಂದ ಹೊರಗುಳಿದಿದ್ದಾರೆ. ಹೀಗಾಗಿ ನ್ಯೂಜಿಲೆಂಡ್ ನೆಲದಲ್ಲಿ ಗುರ್‌ನೂರ್ ಬ್ರಾರ್ ಮತ್ತು ಅರ್ಷದೀಪ್ ಸಿಂಗ್ ಭಾರತದ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸುತ್ತಿದ್ದಾರೆ.

ಭಾರತದಲ್ಲಿ ಸಾಮಾನ್ಯವಾಗಿ ಬ್ಯಾಟರ್‌ಗಳಿಗೆ ಅನುಕೂಲಕರವಾದ ಪಿಚ್‌ಗಳಲ್ಲಿ ಬೌಲಿಂಗ್ ಮಾಡಬೇಕಾಗುತ್ತದೆ. ಆದರೆ ನ್ಯೂಜಿಲೆಂಡ್‌ನಲ್ಲಿ ವೇಗದ ಬೌಲರ್‌ಗಳಿಗೆ ನೆರವಾಗುವ ವಾತಾವರಣ ಸಿಕ್ಕಿರುವುದು ಗುರ್ನೂರ್ ಮತ್ತು ಔಕಿಬ್ ನಬಿ ಅವರಂತಹ ಯುವ ಬೌಲರ್‌ಗಳಿಗೆ ಉತ್ತಮ ಅವಕಾಶ ಎಂದು ಕಾರ್ತಿಕ್ ಹೇಳಿದ್ದಾರೆ.

ಭಾರತದಲ್ಲಿ ಚೊಚ್ಚಲ ಪಂದ್ಯಗಳನ್ನಾಡಿದಾಗಿನಿಂದಲೂ ಇಂತಹ ಯುವ ಬೌಲರ್‌ಗಳು ಬೌಲರ್‌ಗಳಿಗೆ ಹೆಚ್ಚು ನೆರವಾಗದ ಪಿಚ್‌ಗಳಲ್ಲಿ ಕಷ್ಟಪಡುತ್ತಿದ್ದಾರೆ. ಇದೀಗ ಅವರಿಗೆ ಅನುಕೂಲಕರವಾದ ಪರಿಸ್ಥಿತಿಯಲ್ಲಿ ತಮ್ಮ ಸಾಮರ್ಥ್ಯ ತೋರಿಸಲು ಅವಕಾಶ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.

ಇನ್ನು ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಔಕಿಬ್ ನಬಿ ಕೂಡ ಎರಡು ವಿಕೆಟ್ ಪಡೆಯುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಮೊದಲ ವಿಕೆಟ್‌ಗಳ ಖಾತೆ ತೆರೆದಿದ್ದಾರೆ. ಭಾರತ ಪರ ಆಡಿದ ಮೊದಲ ಎರಡು ಪಂದ್ಯಗಳಲ್ಲಿ ಅವರಿಗೆ ಯಾವುದೇ ವಿಕೆಟ್ ಸಿಕ್ಕಿರಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X