

ಮಸ್ಕತ್: 2026ರ ಅಂಡರ್-19 ಏಷ್ಯಾ ಕಪ್ನ ನಿರ್ಣಾಯಕ 'ಎ' ಗುಂಪಿನ ಪಂದ್ಯದಲ್ಲಿ ಯುಎಇ ತಂಡವನ್ನು 70 ರನ್ಗಳಿಂದ ಮಣಿಸಿದ ಭಾರತ ಅಂಡರ್-19 ತಂಡ ಸೆಮಿಫೈನಲ್ಗೆ ಭರ್ಜರಿ ಲಗ್ಗೆ ಇಟ್ಟಿದೆ.
ಒಮಾನ್ನ ಅಲ್ ಅಮೇರತ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಈ ಪಂದ್ಯದಲ್ಲಿ ಆರಂಭಿಕ ಆಟಗಾರ ಆರ್ಯವೀರ್ ಸೆಹ್ವಾಗ್ ಸಿಡಿಸಿದ ಭರ್ಜರಿ ಶತಕ (160 ರನ್) ಹಾಗೂ ವಿನೀತ್ ಅವರ 67 ರನ್ ಗಳು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಪರ ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ ಯೂತ್ ಏಕದಿನ ಕ್ರಿಕೆಟ್ನಲ್ಲಿ ತಮ್ಮ ಚೊಚ್ಚಲ ಶತಕ ಸಿಡಿಸಿದರು. ಅವರು 168 ಎಸೆತಗಳಲ್ಲಿ 17 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್ಗಳ ನೆರವಿನಿಂದ 160 ರನ್ ಕಲೆಹಾಕಿದರು.
ನಾಯಕ ಲಕ್ಷ್ಯ ರಾಯಚಂದಾನಿ (17) ಔಟಾದ ಬಳಿಕ, ಆರ್ಯವೀರ್ ಸೆಹ್ವಾಗ್ ಮತ್ತು ವಿ.ಕೆ. ವಿನೀತ್ (67 ರನ್) ಎರಡನೇ ವಿಕೆಟ್ಗೆ 193 ರನ್ಗಳ ಬೃಹತ್ ಜೊತೆಯಾಟವಾಡಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಲು ನೆರವಾದರು.
ಭಾರತ ನೀಡಿದ 310 ರನ್ಗಳ ಕಠಿಣ ಗುರಿ ಬೆನ್ನತ್ತಿದ ಯುಎಇ ಪರ ಅಹ್ಮದ್ ಖುದಾದಾದ್ (74) ಮತ್ತು ನೂರುಲ್ಲಾ ಅಯೋಬಿ (39) ಪ್ರತಿರೋಧ ತೋರಿದರಾದರೂ, ಇಶಾನ್ ಸೂದ್ (4 ವಿಕೆಟ್) ಅವರ ನಿಖರ ದಾಳಿಗೆ ನಲುಗಿ ನಿಗದಿತ 50 ಓವರ್ಗಳಲ್ಲಿ 239 ರನ್ಗಳಿಗೆ ಆಲೌಟ್ ಆಯಿತು.
ಸೆಮಿಫೈನಲ್ ಎದುರಾಳಿ: ಹಿಂದಿನ ಪಾಕಿಸ್ತಾನ ವಿರುದ್ಧದ ಸೋಲಿನ ಬಳಿಕ ಈ ಪಂದ್ಯ ಭಾರತಕ್ಕೆ ನಿರ್ಣಾಯಕವಾಗಿತ್ತು. ಇದೀಗ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶಿಸಿರುವ ಭಾರತ, ಗುರುವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ