

ಟೀಂ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ತಮ್ಮ ಟೆಸ್ಟ್ ಕ್ರಿಕೆಟ್ ಪಾದಾರ್ಪಣೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
2017ರಲ್ಲಿ ಮೊದಲ ಬಾರಿಗೆ ಭಾರತ ತಂಡದ ನಾಯಕತ್ವ ವಹಿಸಿಕೊಂಡಾಗ, ವಾಂಖೆಡೆ ಕ್ರೀಡಾಂಗಣಕ್ಕೆ ಬಂದು ತಮ್ಮ ಆಟವನ್ನು ವೀಕ್ಷಿಸುವಂತೆ ಪೋಷಕರನ್ನು ಅವರು ಹೇಗೆ ಒಪ್ಪಿಸಿದ್ದರು ಎಂಬುದನ್ನೂ ಅವರು ವಿವರಿಸಿದ್ದಾರೆ.
ಟಾಕ್ ಶೋ 'ಫ್ಯಾಮಿಲಿ ಫುಲ್ ಹೌಸ್ ವಿತ್ ರೋಹಿತ್ ಶರ್ಮಾ'ದಲ್ಲಿ, 'ಹಿಟ್‌ಮ್ಯಾನ್' (ರೋಹಿತ್ ಶರ್ಮಾ) ತಮ್ಮ ಸ್ಮರಣೀಯ ಟೆಸ್ಟ್ ಪಾದಾರ್ಪಣೆ, ಮೊದಲ ಅವಕಾಶ ಸಿಗುವವರೆಗಿನ ನಾಲ್ಕು ವರ್ಷಗಳ ಕಾಯುವಿಕೆ ಮತ್ತು ವಾಂಖೆಡೆಯಲ್ಲಿ ಭಾರತ ತಂಡವನ್ನು ಮುನ್ನಡೆಸುವುದನ್ನು ವೀಕ್ಷಿಸಲು ತಮ್ಮ ಪೋಷಕರನ್ನು ಒಪ್ಪಿಸಿದ ಆ ವಿಶೇಷ ಸಂದರ್ಭದ ಬಗ್ಗೆ ಮೆಲುಕು ಹಾಕಿದ್ದಾರೆ.
ಕಾರ್ಯಕ್ರಮದಲ್ಲಿ ರೋಹಿತ್ ಅವರಿಗೆ ಮೊದಲ ಟೆಸ್ಟ್ ಕ್ಯಾಪ್ ಪಡೆದಾಗ ಹೇಗೆ ಸಂಭ್ರಮಿಸಿದ್ದೀರಿ ಎಂದು ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ಅವರು, ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ 177 ರನ್ ಗಳಿಸಿದ್ದು ಮತ್ತು ಭಾರತ ತಂಡ ಗೆಲುವು ಸಾಧಿಸಿದ್ದು ತಮ್ಮ ಪಾಲಿನ ಅತಿದೊಡ್ಡ ಸಂಭ್ರಮ ಎಂದು ಹೇಳಿದ್ದಾರೆ.
‘ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ 177 ರನ್ ಗಳಿಸಿದ್ದು ಮತ್ತು ಆ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು ನನಗೆ ಅತ್ಯಂತ ದೊಡ್ಡ ಸಂತೋಷದ ವಿಚಾರವಾಗಿತ್ತು. ಟೆಸ್ಟ್ ಆಟಗಾರನಾಗಿ ನನ್ನ ಮೊದಲ ಪಂದ್ಯವಾಗಿದ್ದರಿಂದ ತಂಡವನ್ನು ಗೆಲ್ಲಿಸುವುದೇ ನನ್ನ ಮೊದಲ ಗುರಿಯಾಗಿತ್ತು. ಅಂತಿಮವಾಗಿ ನಾವು ಪಂದ್ಯ ಗೆದ್ದೆವು. ಅದರ ಜೊತೆಗೆ ನನ್ನ ಬ್ಯಾಟಿಂಗ್‌ನಿಂದಲೂ ತಂಡಕ್ಕೆ ಕೊಡುಗೆ ನೀಡಲು ಸಾಧ್ಯವಾಯಿತು’ ಎಂದು ರೋಹಿತ್ ಹೇಳಿದ್ದಾರೆ.
2010ರಲ್ಲೇ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಅವಕಾಶ ರೋಹಿತ್‌ಗೆ ಸಿಕ್ಕಿತ್ತು. ಆದರೆ, ಪಂದ್ಯಕ್ಕೂ ಮುನ್ನ ಪಾದದ ಗಾಯಕ್ಕೆ ತುತ್ತಾದ ಕಾರಣ ಆ ಅವಕಾಶ ಕೈತಪ್ಪಿತ್ತು. ಇದರಿಂದಾಗಿ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಪಂದ್ಯವಾಡಲು ಮತ್ತೆ ನಾಲ್ಕು ವರ್ಷ ಕಾಯಬೇಕಾಯಿತು. ಈ ಬಗ್ಗೆ ಮಾತನಾಡಿದ ರೋಹಿತ್, ‘2010ರಲ್ಲಿ ನಾನು ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಬೇಕಿತ್ತು. ಆದರೆ, ಪಂದ್ಯಕ್ಕೂ ಮುನ್ನ ನನ್ನ ಪಾದಕ್ಕೆ ಗಾಯವಾಗಿದ್ದರಿಂದ ಆಡುವ ಅವಕಾಶ ಸಿಗಲಿಲ್ಲ. ಹೀಗಾಗಿ ಮತ್ತೊಂದು ನಾಲ್ಕು ವರ್ಷ ಕಾಯಬೇಕಾಯಿತು. ಆ ದೀರ್ಘ ಕಾಯುವಿಕೆಯೇ ನನ್ನ ಚೊಚ್ಚಲ ಪಂದ್ಯವನ್ನು ಇನ್ನಷ್ಟು ವಿಶೇಷವಾಗಿಸಿತು ಎಂದು ನೆನಪಿಸಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ರೋಹಿತ್ ತಮ್ಮ ಕುಟುಂಬಕ್ಕೆ ಸಂಬಂಧಿಸಿದ ಮತ್ತೊಂದು ವಿಶೇಷ ನೆನಪನ್ನೂ ಹಂಚಿಕೊಂಡಿದ್ದಾರೆ. ತಮ್ಮ ತಂದೆ-ತಾಯಿ ಮೊದಲ ಬಾರಿಗೆ ಮೈದಾನಕ್ಕೆ ಬಂದು ಪಂದ್ಯ ವೀಕ್ಷಿಸಿದ್ದು ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 2017ರಲ್ಲಿ ಮೊದಲ ಬಾರಿಗೆ ಭಾರತ ತಂಡದ ನಾಯಕತ್ವ ವಹಿಸಿಕೊಂಡಾಗ ಇಬ್ಬರನ್ನೂ ಮೈದಾನಕ್ಕೆ ಬರುವಂತೆ ಮನವೊಲಿಸಿದ್ದಾಗಿ ತಿಳಿಸಿದ್ದಾರೆ. ‘2017ರಲ್ಲಿ ನಾನು ಮೊದಲ ಬಾರಿಗೆ ಭಾರತ ತಂಡದ ನಾಯಕನಾದಾಗ ನನ್ನ ತಂದೆ ಮತ್ತು ತಾಯಿಯನ್ನು ಪಂದ್ಯ ವೀಕ್ಷಿಸಲು ಬರುವಂತೆ ಕೇಳಿಕೊಂಡಿದ್ದೆ. ಆ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿತ್ತು’ ಎಂದು ರೋಹಿತ್ ಹೇಳಿದ್ದಾರೆ.
ತಮ್ಮ ತಂದೆ-ತಾಯಿಗೆ ಕ್ರೀಡಾಂಗಣಕ್ಕೆ ಬಂದು ಪಂದ್ಯ ವೀಕ್ಷಿಸುವುದಕ್ಕಿಂತ ಮನೆಯಲ್ಲೇ ಕುಳಿತು ನೋಡುವುದು ಹೆಚ್ಚು ಇಷ್ಟ. ಒಂದು ವೇಳೆ ನಾನು ಔಟಾದರೂ ಮನೆಯಲ್ಲಿ ಸುಮ್ಮನೆ ಮಲಗಬಹುದು, ಹೆಚ್ಚು ಚಿಂತಿಸುವ ಅಗತ್ಯವಿರುವುದಿಲ್ಲ ಎಂಬುದು ಅವರ ಭಾವನೆ’ ಎಂದು ರೋಹಿತ್ ತಮಾಷೆಯಾಗಿ ಹೇಳಿದ್ದಾರೆ.